Advertisement

“ಈ ನಾಡು’, “ಈ ಟಿವಿ’ ಆರಂಭಿಸಿ, ಬೆಳೆಸಿದ “ಮಾರ್ಗದರ್ಶಿ’ ಉದ್ಯಮಿ ರಾಮೋಜಿ ರಾವ್‌

11:37 PM Jun 08, 2024 | Team Udayavani |

ಜಗತ್ತಿನ ಅತೀದೊಡ್ಡ ಸ್ಟುಡಿಯೋ “ರಾಮೋಜಿ ಫಿಲಂ ಸಿಟಿ’ ಕಟ್ಟಿದ ರಾಮೋಜಿ ರಾವ್‌, ಮಾಧ್ಯಮ, ಮನೋರಂಜನೆ ಹಾಗೂ ಉದ್ಯಮದಲ್ಲಿ ಯಶಸ್ವಿ ಸಂಸ್ಥೆಗಳನ್ನು ಆರಂಭಿಸಿ, ಲಕ್ಷಾಂತರ ಮಂದಿಗೆ ಬದುಕು ನೀಡಿದರು. ಯುವಕರಿಗೆ ಅವರು ಸ್ಫೂರ್ತಿಯ ಚಿಲುಮೆಯಾಗಿದ್ದರು.

Advertisement

ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ರಾಮೋಜಿ ರಾವ್‌ ಮಾಧ್ಯಮ, ಮನರಂಜನೆ ಮತ್ತು ಇತರ ಉದ್ಯಮದ ಕ್ಷೇತ್ರದಲ್ಲಿ ಮುಗಿಲೆತ್ತರಕ್ಕೆ ಬೆಳೆದಿದ್ದು ಸೂಜಿಗವೇ ಸರಿ!

ರಾಮೋಜಿ ಗ್ರೂಪ್‌ನಡಿ ಉದ್ಯಮದ ಹಲವು ಕ್ಷೇತ್ರಗಳಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರೂ “ಮಾಧ್ಯಮ ದೊರೆ’ಯಾಗಿ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. 1969ರಲ್ಲಿ “ಅನ್ನದಾತ’ ಮಾಸ ಪತ್ರಿಕೆ ಆರಂಭಿಸುವ ಮೂಲಕ ಅವರು ಮಾಧ್ಯಮ ಲೋಕಕ್ಕೆ ಕಾಲಿಟ್ಟರು. ಬಳಿಕ 1974ರಲ್ಲಿ “ಈ ನಾಡು’ ಪತ್ರಿಕೆಯನ್ನು ವಿಶಾಖಪಟ್ಟಣ ನಗರದಿಂದ ಆರಂಭಿಸಿದರು. ಈ ಪತ್ರಿಕೆ ಈಗಲೂ ಆಂಧ್ರದಲ್ಲಿ ಅತಿ ಹೆಚ್ಚು ಪ್ರಸರಣ ಹೊಂದಿದ ಪತ್ರಿಕೆಯಾಗಿದೆ.

ಪತ್ರಿಕಾ ರಂಗದಲ್ಲಿ “ಈ ನಾಡು’ ಸಾಕಷ್ಟು ಮೊದಲುಗಳನ್ನು ಕಂಡಿದೆ. ಭಾರೀ ಶಿಸ್ತಿನ ಮನುಷ್ಯರಾಗಿದ್ದ ರಾಮೋಜಿ ರಾವ್‌, ಪತ್ರಿಕೆಯನ್ನು ಅಷ್ಟೇ ಶಿಸ್ತಿನಿಂದ ಓದುಗರ ಮನೆಗೆ ತಲುಪಿಸುವ ಕೆಲಸವನ್ನು ಮಾಡಿದರು. ಸ್ಥಳೀಯ ಆವೃತ್ತಿಗಳನ್ನು ಆರಂಭಿಸಿದರು. ಪರಿಣಾಮ ಪತ್ರಿಕೆ ಬಹಳ ಬೇಗ ಜನಪ್ರಿಯವಾಯಿತು. “ಸಿತಾರಾ’ ಸಿನಿ ಮ್ಯಾಗಜಿನ್‌ ಶುರು ಮಾಡಿದರು.

ರಾಮೋಜಿ ಅವರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಅವರು ಉದ್ಯಮ ಆರಂಭಿಸಿದ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಿತು. ಅವರು ಉದ್ಯಮಿ ಮಾತ್ರವಲ್ಲದೇ ರಾಜಕಾರಣದಲ್ಲೂ ಆಸಕ್ತಿ ಹೊಂದಿದ್ದರು. ದೇಶದ ಗಣ್ಯಾತಿಗಣ್ಯ ನಾಯಕರೆಲ್ಲರೂ ಅವರನ್ನು ಗೌರವಿಸುತ್ತಿದ್ದರು, ಸಲಹೆಗಳನ್ನು ಪಡೆಯುತ್ತಿದ್ದರು. ಆಂಧ್ರ ರಾಜಕಾರಣದಲ್ಲಿ ಅವರು ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಇಷ್ಟಾಗಿಯೂ ರಾಜಕಾರಣಿಗಳ ಸ್ನೇಹದ
ಲಾಭವನ್ನು ತಮ್ಮ ಸ್ವಹಿತಾಸಕ್ತಿಗೆ ಬಳಸಿಕೊಳ್ಳಲಿಲ್ಲ!

Advertisement

1936 ನವೆಂಬರ್‌ 16ರಂದು ಅಂದಿನ ಮದ್ರಾಸ್‌ ಪ್ರಸಿಡೆನ್ಸಿ (ಇಂದಿನ ಆಂಧ್ರ ಪ್ರದೇಶ)ಯ ಕೃಷ್ಣ ಜಿಲ್ಲೆಯ ಪೆದಪುರುಪೂಡಿಯ ಕೃಷಿಕ ಕುಟುಂಬದಲ್ಲಿ ಚೆರುಕೂರಿ ರಾಮೋಜಿ ರಾವ್‌ ಅವರು ಜನಿಸಿದರು. ಬಾಲ್ಯದಿಂದಲೂ ಕೃಷಿಯಲ್ಲಿ ಅವರ ಆಸಕ್ತಿ ಹೆಚ್ಚಿತ್ತು. ರಾಮೋಜಿ ರಾವ್‌ ಬಿಎಸ್ಸಿ ಪದವಿ ಪಡೆದಿದ್ದಾರೆ. “ಈ ನಾಡು’ ಪತ್ರಿಕೆಯನ್ನು ಆರಂಭಿಸುವ ಮುಂಚೆ ಅವರು ಪತ್ರಕರ್ತರಾಗಿದ್ದರು.

“ರಾಮಯ್ಯ’ ರಾಮೋಜಿ ಆಗಿದ್ದು ಹೇಗೆ?
ರಾಮೋಜಿ ಅವರ ಅಜ್ಜ ರಾಮಯ್ಯ ಪೆರಿಶೆಪಲ್ಲಿಯಿಂದ ಕೃಷ್ಣ ಜಿಲ್ಲೆಯ ಪೆದಪುರುಪೂಡಿಗೆ ವಲಸೆ ಬಂದಿದ್ದರು. ಅಜ್ಜ ನಿಧನ ಹೊಂದಿದ 13 ದಿನಗಳ ಬಳಿಕ ರಾಮೋಜಿ ರಾವ್‌ ಜನಿಸಿದರು. ಪೋಷಕರು ಅಜ್ಜ ರಾಮಯ್ಯ ಹೆಸರನ್ನೇ ಇವರಿಗೂ ನಾಮಕರಣ ಮಾಡಿದರು. ಆದರೆ ರಾಮಯ್ಯ ಹೆಸರು ಅವರಿಗೆ ಇಷ್ಟವಿರಲಿಲ್ಲ. ಪ್ರಾಥಮಿಕ ಶಾಲೆಗೆ ಸೇರುವಾಗ ರಾಮೋಜಿ ರಾವ್‌ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು.

ಈ ನಾಡು, ಈ ಟಿವಿಯಿಂದ ಮಾಧ್ಯಮ ದೊರೆ!
ಆಂಧ್ರ ಪ್ರದೇಶದಲ್ಲಿ ದೂರದರ್ಶನದ ಏಕಸ್ವಾಮ್ಯತೆಯನ್ನು ರಾಮೋಜಿ ರಾವ್‌ ಆರಂಭಿಸಿದ “ಈ ಟಿವಿ’ ಮುರಿಯಿತು. ಆರಂಭವಾದ ಕೆಲವೇ ದಿನಗಳಲ್ಲಿ “ಈ ಟಿವಿ’ ಆಂಧ್ರದಲ್ಲಿ ಭಾರೀ ಜನಪ್ರಿಯವಾಯಿತು. ಇದರಿಂದ ಪ್ರೇರಣೆಗೊಂಡ ಅವರು ಹಿಂದಿ, ಬಾಂಗ್ಲಾ, ಮರಾಠಿ, ಕನ್ನಡ, ಒರಿಯಾ, ಗುಜರಾತಿ ಮತ್ತು ಉರ್ದು ಭಾಷೆ ಸೇರಿ ಒಟ್ಟು 12 ಚಾನೆಲ್‌ಗ‌ಳನ್ನು ಆರಂಭಿಸಿದರು.

ಖ್ಯಾತ ಗಾಯಕರಾಗಿದ್ದ ಎಸ್‌.ಪಿ.ಬಾಲಸುಬ್ರಹ್ಮಣ್ಯಂ “ಈ ಟಿವಿ’ಯಲ್ಲಿ ನಡೆಸಿಕೊಡುತ್ತಿದ್ದ “ಪದುಥಾ ತೀಯಾಗಾ’ ಕಾರ್ಯಕ್ರಮ ಸುಮಾರು 20 ವರ್ಷಗಳ ಕಾಲ ಪ್ರಸಾರವಾಯಿತು. ಕನ್ನಡದಲ್ಲೂ “ಎದೆ ತುಂಬಿ ಹಾಡುವೆನು’ ಹೆಸರಿನಲ್ಲಿ ಶುರು ಮಾಡಲಾಯಿತು. ಈ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಯಿತು. ಈ ಟಿವಿ ಜಾಲವು ದೇಶದಲ್ಲಿ ಮಾಧ್ಯಮದ ದಿಕ್ಕು ಬದಲಾವಣೆಗೂ ಕಾರಣವಾಯಿತು.

ಡಿಜಿಟಲ್‌ ಯುಗಕ್ಕೆ ಈ ಟಿವಿ ಭಾರತ್‌ ಪ್ರವೇಶ
2014ರಲ್ಲಿ ರಾಮೋಜಿ ರಾವ್‌ ಅವರು “ಈ ಟಿವಿ’ ನೆಟ್‌ವರ್ಕ್‌ ಅಡಿಯ ಎಲ್ಲ ಟಿವಿ ಚಾನೆಲ್‌ಗ‌ಳನ್ನು ನ್ಯೂಸ್‌18 ನೆಟ್‌ವರ್ಕ್‌ಗೆ ಮಾರಿದರು. ಹೊಸ ಕಾಲದ ಮಾಧ್ಯಮ ಎನಿಸಿರುವ ಡಿಜಿಟಲ್‌ಗೆ “ಈ ಟಿವಿ ಭಾರತ್‌’ ಮೂಲಕ ಪ್ರವೇಶ ಮಾಡಿದರು. ಈ ಸಾಹಸದಲ್ಲೂ ಅವರು ಯಶಸ್ಸು ಕಂಡರು.

ಅರಸಿ ಬಂದ ಪ್ರಶಸ್ತಿಗಳು
ಮಾಧ್ಯಮ ಮತ್ತು ಉದ್ಯಮ ಲೋಕದ ವಿಶಿಷ್ಟ ಕೊಡುಗೆಗಾಗಿ 2016ರಲ್ಲಿ ಭಾರತ ಸರಕಾರವು ರಾಮೋಜಿ ರಾವ್‌ ಅವರಿಗೆ “ಪದ್ಮ ವಿಭೂಷಣ’ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿತು. ಜತೆಗೆ ರಾಮೋಜಿ ನಿರ್ಮಾಣದ ಅನೇಕ ಸಿನೆಮಾಗಳು ಅವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ಫೇರ್‌ ಪ್ರಶಸ್ತಿಗಳು ಮತ್ತು ಆಂಧ್ರ ಪ್ರದೇಶ ಸರಕಾರ ಕೊಡ ಮಾಡುವ ನಂದಿ ಪ್ರಶಸ್ತಿಗಳು ಸಂದಿವೆ.

ಉಷಾ ಕಿರಣ ಮೂವೀಸ್‌ ಮೂಲಕ ಸಿನೆಮಾ ನಿರ್ಮಾಣ
ಉಷಾ ಕಿರಣ ಮೂವೀಸ್‌: ಉಷಾ ಕಿರಣ ಮೂವೀಸ್‌ ಮೂಲಕ ಚಿತ್ರ ನಿರ್ಮಾಣ ಶುರು ಮಾಡಿದರು. ತೆಲುಗು ಜತೆಗೆ ಕನ್ನಡವೂ ಸೇರಿದಂತೆ ದಕ್ಷಿಣ ಭಾರತ ಎಲ್ಲ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಿದರು. ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಚಯಿಸಿದರು. ಶ್ರಿವಾರಿಕಿ ಪ್ರೇಮಲೇಖ(1984) ಸಿನೆಮಾ ಅವರ ಮೊದಲ ನಿರ್ಮಾಣದ ಸಿನೆಮಾ. ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ.

 ಮಾರ್ಗದರ್ಶಿ ಚಿಟ್‌ಫ‌ಂಡ್‌: 1974ರಲ್ಲಿ ಮಾರ್ಗದರ್ಶಿ ಚಿಟ್‌ಫ‌ಂಡ್‌ ಆರಂಭಿಸಿದರು. ಆಂಧ್ರ ಪ್ರದೇಶದಲ್ಲಿ 3,60,000 ಜನರಿಗೆ ಇದರಿಂದ ಲಾಭವಾಗಿದೆ. ಚಿಟ್‌ಫ‌ಂಡ್‌ ಕುರಿತು ಸಾಕಷ್ಟು ವಿವಾದಗಳು ಕೇಳಿ ಬಂದರೂ, ಅವುಗಳನ್ನು ಮೆಟ್ಟಿ ನಿಂತು, ಯಶಸ್ವಿಯಾದರು.

ಜಗತ್ತಿನ ಅತೀ ದೊಡ್ಡ
ಫಿಲಂ ಸ್ಟುಡಿಯೋ ರಾಮೋಜಿ ಫಿಲಂ ಸಿಟಿ
ಹೈದರಾಬಾದ್‌ ಸಮೀಪ ರಾಮೋಜಿ ರಾವ್‌ 1996ರಲ್ಲಿ ರಾಮೋಜಿ ಫಿಲಂ ಸಿಟಿ ಆರಂಭಿಸಿದರು. ಇದು ವಿಶ್ವದ ಅತಿದೊಡ್ಡ ಥೀಮ್‌ ಪಾರ್ಕ್‌, ಸ್ಟುಡಿಯೋ ಆಗಿದ್ದು, 1666 ಎಕ್ರೆಗಳಲ್ಲಿ ಹರಡಿಕೊಂಡಿದೆ. ಗಿನ್ನೆಸ್‌ ದಾಖಲೆಗೂ ಪಾತ್ರವಾಗಿದೆ. ಸಿನೆಮಾ ನಿರ್ಮಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಇಲ್ಲಿವೆ. ಇತ್ತೀಚಿನ ದಿನಗಳಲಿ ಈ ಫಿಲಂ ಸಿಟಿ ಪ್ರವಾಸೋದ್ಯ ತಾಣವಾಗಿಯೂ ಮಾರ್ಪಟ್ಟಿದೆ. ಜನಪ್ರಿಯ ಸಿನೆಮಾ “ಬಾಹುಬಲಿ’ ಇಲ್ಲೇ ಚಿತ್ರೀಕರಣ ಗೊಂಡಿ ದೆ. ಆಗ ನಿರ್ಮಾಣ ಮಾಡಲಾದ ಸೆಟ್‌ಗಳು ಜನರನ್ನು ಸೆಳೆಯುತ್ತಿವೆ. ಪ್ರತೀ ವರ್ಷ 15 ಲಕ್ಷ ಜನರು ಇಲ್ಲಿಗೆ ಭೇಟಿ ನೀಡು ತ್ತಾರೆ. ಸಿನೆಮಾ ಚಿತ್ರೀಕರಣಕ್ಕೆ ಅಗತ್ಯವಾದ ಗಾರ್ಡನ್‌, ಹೊಟೇಲ್‌, ರೈಲ್ವೇ ಸ್ಟೇಷನ್‌, ಏರ್‌ಪೋರ್ಟ್‌, ಅಪಾರ್ಟ್‌ಮೆಂಟ್‌ ಇತ್ಯಾದಿ ಸೌಲಭ್ಯಗಳು ಇಲ್ಲಿವೆ.

ಪ್ರಿಯಾ ಉಪ್ಪಿನಕಾಯಿ ವ್ಯಾಪಾರ
1980ರಲ್ಲಿ ಪ್ರಿಯಾ ಫ‌ುಡ್ಸ್‌ ಮೂಲಕ ಉಪ್ಪಿನಕಾಯಿ ವ್ಯವಹಾರವನ್ನು ಆರಂಭಿಸಿ, ಅದರಲ್ಲೂ ಸಕ್ಸೆಸ್‌ ಕಂಡರು.
ರಮಾದೇವಿ ಪಬ್ಲಿಕ್‌ ಸ್ಕೂಲ್‌, ಈ ನಾಡು ಜರ್ನ ಲಿಸಮ್‌ ಸ್ಕೂಲ್‌,ಡಾಲ್ಫಿನ್‌ ಹೊಟೇಲ್ಸ್‌, ಇಮೇಜಸ್‌ ಅಡ್ವಟೈìಸಿಂಗ್‌ ಏಜೆನ್ಸಿ, ವಸುಂಧರಾ ಫ‌ರ್ಟಿಲೈರ್ಸ್‌, ಕಿರಣ್‌ ಆ್ಯಡ್ಸ್‌, ಸೇರಿ ಹಲವು ಸಂಸ್ಥೆ, ಕಂಪೆನಿ ಆರಂಭಿಸಿ ಯಶಸ್ಸು ಕಂಡಿದ್ದಾರೆ.

ಹೆಸರು: ಚೆರುಕೂರಿ ರಾಮೋಜಿ ರಾವ್‌
ಜನನ: 1936 ನವೆಂಬರ್‌ 16
ಜನ್ಮಸ್ಥಳ: ಪೆದಪುರುಪೂಡಿ, ಕೃಷ್ಣಾ ಜಿಲ್ಲೆ.
ತಂದೆ, ತಾಯಿ: ಚೆರುಕೂರಿ ವೆಂಕಟಸುಬ್ಬಯ್ಯ ಮತ್ತು ವೆಂಕಟ ಸುಬ್ಬಮ್ಮ
ಪತ್ನಿ: ರಮಾದೇವಿ, ಮಕ್ಕಳು: ಸುಮನ್‌ ಪ್ರಭಾಕರ್‌(2012ರಲ್ಲಿ ನಿಧನ) ಮತ್ತು ಕಿರಣ್‌ ಪ್ರಭಾಕರ್‌
ನೆಚ್ಚಿನ ಆಟ: ಕ್ರಿಕೆಟ್‌

ದೇಶಕ್ಕೆ ತುಂಬಲಾರದ ನಷ್ಟ
ರಾಮೋಜಿ ರಾವ್‌ ನಿಧನದೊಂದಿಗೆ ಭಾರತ ಮಾಧ್ಯಮ ಮತ್ತು ಮನೋರಂಜನ ಕ್ಷೇತ್ರದ ದಿಗ್ಗಜನನ್ನು ಕಳೆದುಕೊಂಡಂತಾಗಿದೆ.
-ದ್ರೌಪದಿ ಮುರ್ಮು, ರಾಷ್ಟ್ರಪತಿ

ಕೊಡುಗೆ ಅನನ್ಯ
ಪತ್ರಿಕೋದ್ಯಮ, ಸಿನೆಮಾ ಮತ್ತು ಮನೋರಂಜನೆ ಕ್ಷೇತ್ರಕ್ಕೆ ರಾಮೋಜಿ ರಾವ್‌ ಕೊಡುಗೆ ಶಾಶ್ವತವಾದ ಪರಿಣಾಮ ವನ್ನು ಬೀರಿದೆ. ಮಾಧ್ಯಮ ಕ್ಷೇತ್ರವನ್ನು ಪರಿವರ್ತಿಸಿದೆ.
-ರಾಹುಲ್‌ ಗಾಂಧಿ,ಕಾಂಗ್ರೆಸ್‌ ನಾಯಕ

ಸದಾ ನೆನಪು
ರಾಮೋಜಿ ರಾವ್‌ ಅವರು ಸಿನೆಮಾ ಮತ್ತು ಮಾಧ್ಯಮ ಲೋಕಕ್ಕೆ ನೀಡಿದ ಕೊಡುಗೆ ಅನನ್ಯ. ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ಸಾಧಿಸಿದ ವಿಶಿಷ್ಟ ಸಾಧನೆ ಮತ್ತು ಪದ್ಧತಿಗಳಿಗಾಗಿ ಸದಾ ನೆನಪಿನಲ್ಲಿ ಇರುತ್ತಾರೆ.
-ದತ್ತಾತ್ರೇಜಯ ಹೊಸಬಾಳೆ, ಆರೆಸ್ಸೆಸ್‌ ಸರಕಾರ್ಯವಾಹ

ನನ್ನ ಮಾರ್ಗದರ್ಶಿ
ಪತ್ರಿಕೋದ್ಯಮ, ಸಿನೆಮಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ ರಾಮೋಜಿ ರಾವ್‌ ರಾಜಕಾರಣದಲ್ಲಿ ಕಿಂಗ್‌ಮೇಕರ್‌ ಆಗಿದ್ದರು. ಅವರು ನನ್ನ ಮಾರ್ಗದರ್ಶಿ ಮತ್ತು ಸ್ಫೂರ್ತಿ.
-ರಜನಿಕಾಂತ್‌, ನಟ

ಭಾರತರತ್ನ ನೀಡಿ
50 ವರ್ಷಗಳ ಸತತ ಪ್ರಯತ್ನ ಮತ್ತು ಹೊಸತನ ಮೂಲಕ ಲಕ್ಷಾಂತರ ಜನರಿಗೆ ಬದುಕು ಕೊಟ್ಟು, ಭರವಸೆ ಮೂಡಿಸಿದ ರಾಮೋಜಿ ರಾವ್‌ಗೆ “ಭಾರತರತ್ನ’ವಷ್ಟೇ ಶ್ರದ್ಧಾಂಜಲಿ ಸಲ್ಲಿಸುವ ಏಕೈಕ ಮಾರ್ಗವಾಗಿದೆ.
-ಎಸ್‌.ಎಸ್‌.ರಾಜಮೌಳಿ, ನಿರ್ದೇಶಕ

ಸಿನಿಕರ್ಮಿಗಳ ಹೆಗ್ಗುರುತು
ಜಗತ್ತಿನ ಅತೀದೊಡ್ಡ ಫಿಲಂ ಸ್ಟುಡಿಯೋ ರಾಮೋಜಿ ಫಿಲಂ ಸಿಟಿಯು ಜಗತ್ತಿನಾದ್ಯಂತ ಸಿನಿಕರ್ಮಿಗಳ ಹೆಗ್ಗುರುತಾಗಿದೆ. ತೆಲುಗು ಜನರಿಗೆ ಅವರು ನೀಡಿದ ಕೊಡುಗೆಗಾಗಿ ಸದಾ ನೆನಪಿನಲ್ಲಿ ಉಳಿಯಲಿದ್ದಾರೆ.
-ರಾಮ್‌ ಚರಣ್‌, ನಟ

Advertisement

Udayavani is now on Telegram. Click here to join our channel and stay updated with the latest news.

Next