Advertisement

ಪ್ರಧಾನಿ ಮೋದಿ ಆಡಳಿತದಿಂದ ದೇಶದಲ್ಲಿ ಶೈಕ್ಷಣಿಕ ಕ್ರಾಂತಿ

02:49 PM Apr 13, 2019 | pallavi |
ಗದಗ: ಸರ್ವ ಶಿಕ್ಷಣ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನಗಳ ಮೂಲಕ ದೇಶದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕೇಂದ್ರ ಸರಕಾರ ತನ್ನ ಬಜೆಟ್‌ನಲ್ಲಿ 93,848 ಕೋಟಿ ರೂ. ತೆಗೆದಿರಿಸಿದೆ. ಶಿಕ್ಷಣಕ್ಕೆ ಒತ್ತು ನೀಡುವ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮನವಿ ಮಾಡಿದರು.
ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ, ಅಂಜುಮನ್‌ ಪಾಲಿಟೆಕ್ನಿಕ್‌, ಜಗದ್ಗುರು ಪಂಚಾಚಾರ್ಯ ಶಿಕ್ಷಣ
ಮಹಾವಿದ್ಯಾಲಯ, ಪಂಡಿತ ಪುಟ್ಟರಾಜ ಶಿಕ್ಷಣ ಮಹಾವಿದ್ಯಾಲಯ ಮತ್ತಿತರೆ ಕಾಲೇಜುಗಳಿಗೆ ಭೇಟಿ ನೀಡಿ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರ ಪರ ಮತಯಾಚಿಸಿದರು.
ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕಳೆದ ಐದು ವರ್ಷಗಳಲ್ಲಿ 7 ಐಐಟಿ, 7 ಐಐಎಂ, ಎನ್‌ಐಟಿ ಹಾಗೂ 14 ಐಐಐಟಿ, 106 ಕೇಂದ್ರೀಯ ವಿದ್ಯಾಲಯಗಳನ್ನು ಹೊಸದಾಗಿ ಪ್ರಾರಂಭಿಸಿದೆ. ವಿಶೇಷವಾಗಿ ತಾಂತ್ರಿಕ ಶಿಕ್ಷಣ ಮತ್ತು ವ್ಯವಹಾರ ಅಧ್ಯಯನ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು, ದೇಶದ ಶೈಕ್ಷಣಿಕ ಕ್ಷೇತ್ರವನ್ನು ಉನ್ನತೀಕರಿಸಿದ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಶಹರ ಘಟಕದ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಎಂ.ಎಂ. ಹಿರೇಮಠ ಇದ್ದರು.
ಇಟಲಿ ಹುಡುಗ ಬೇಡ: ಗದಗ ತಾಲೂಕಿನ ನೀಲಗುಂದ, ಚಿಂಚಲಿ, ಕಲ್ಲೂರ ಮತ್ತು ಮುಳಗುಂದ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಯುವ ಮುಖಂಡ ಅನಿಲ ಮೆಣಸಿನಕಾಯಿ ಚುನಾವಣಾ ಪ್ರಚಾರ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಯುಪಿಎ ಆಡಳಿತದ 10 ವರ್ಷಗಳ ಕಾಲ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮಾಡಿರುವ ಅಭಿವೃದ್ಧಿ ಮತ್ತು ಸುಧಾರಣೆ ಕ್ರಮಗಳಿಂದ ಭಾರತ ಪ್ರಗತಿಯತ್ತ ಸಾಗುತ್ತಿದೆ. ಆದರೆ, ಅಧಿಕಾರವಿಲ್ಲದೇ, ವಿಲವಿಲನೇ ಒದ್ದಾಡುತ್ತಿರುವ ವಿಪಕ್ಷಗಳು ಕೇವಲ ಮೋದಿಯನ್ನು ದೂರವಿಡಲು ಮಹಾಮೈತ್ರಿ ಮಾಡಿಕೊಂಡಿವೆ. ವಿರೋಧಿ  ಪಕ್ಷಗಳಿಗೆ ದೇಶದ ಅಭಿವೃದ್ಧಿ ಕುರಿತು ಕಿಂಚಿತ್ತೂ ಕಾಳಜಿಯಿಲ್ಲ. ತಮ್ಮ ಅಕ್ರಮ ಸಂಪದಾನೆಗೆ ಅನುವಾಗಲೆಂದು ಇಟಲಿ ಹುಡುಗ ರಾಹುಲ್‌ ಗಾಂಧಿಯನ್ನು ಪ್ರಧಾನಿಯನ್ನಾಗಿಸುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಎರಡು ಅವಧಿಗೆ ಹಾವೇರಿ ಕ್ಷೇತ್ರವನ್ನು ಪ್ರತಿನಿಧಿರುವ ಶಿವಕುಮಾರ ಉದಾಸಿ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮೋದಿ ಅವರು ಐದು ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ಆಡಳಿತ ನಡೆಸಿದ್ದಾರೆ. ಮತ್ತೂಮ್ಮೆ ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಪ್ರಮುಖರಾದ ರಾಜು ಕುರಡಗಿ, ಶ್ರೀಕಾಂತ ಖಟವಟೆ, ಅಶೋಕ ಸಂಕಣ್ಣವರ, ಸಿದ್ದು ಪಲ್ಲೇದ, ಭದ್ರೇಶ ಕೂಸಲಾಪೂರ, ಮಹಾಂತೇಶ ಬೆನಕಣ್ಣವರ, ಉಮೇಶ ನೀಲಗುಂದ, ರವಿ ವಗ್ಗನವರ, ಈರಪ್ಪಾ ಶಿಗ್ಗಾಂವಿ, ರಾಜು ಕುಲಕರ್ಣಿ, ಬಸನಗೌಡ, ಬೂದಪ್ಪ ಹಳ್ಳಿ, ಬಸವಣ್ಣೆಯ್ಯ ಹಿರೇಮಠ, ವೈ.ಟಿ.ಅಟ್ನೂರು, ಪ್ರಕಾಶ ಕುಲಕರ್ಣಿ, ಪ್ರಕಾಶ ನೀಲಗುಂದ ಇದ್ದರು.
ರೇವಣ್ಣ ರಾಜಕೀಯ ನಿವೃತ್ತಿ ಖಚಿತ
ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ, ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಮೋದಿ ಅವರ ಸಾಧನೆಗಳು ಇಡೀ ದೇಶಕ್ಕೆ ಗೊತ್ತಿದೆ. ಕಿಸಾನ್‌ ಸಮ್ಮಾನ ಯೋಜನೆಯಡಿ ಈಗಾಗಲೇ ಮೊದಲ ಕಂತಿನ 2 ಸಾವಿರ ರೂ. ರೈತರ ಖಾತೆಗೆ ಜಮಾ ಆಗಿದೆ. ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿ ದೇಶದ ಪ್ರತಿಯೊಬ್ಬರೂ ಬಿಜೆಪಿಗೆ ಮತ ನೀಡಲಿದ್ದು, ಮತ್ತೆ ಮೋದಿ ಪ್ರಧಾನಿಯಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಹೀಗಾಗಿ ತಕ್ಷಣದಿಂದಲೇ ಎಚ್‌.ಡಿ.ರೇವಣ್ಣ ರಾಜಕೀಯ ನಿವೃತ್ತಿಗೆ ಸಿದ್ಧತೆ ಮಾಡಿಕೊಳ್ಳಲಿ.
ಅನಿಲ ಮೆಣಸಿನಕಾಯಿ, ಬಿಜೆಪಿ ಮುಖಂಡ.
Advertisement

Udayavani is now on Telegram. Click here to join our channel and stay updated with the latest news.

Next