Advertisement

ಸಿನಿಮಾಧ್ಯಮ ಕ್ಷೇತ್ರಕ್ಕೆ ಬೇಕು ಶೈಕ್ಷಣಿಕ ಶಿಸ್ತು

12:05 PM Jul 16, 2017 | Team Udayavani |

ಧಾರವಾಡ: ಇಡೀ ಭಾರತೀಯ ಚಲನಚಿತ್ರ ಮಾಧ್ಯಮ ಕ್ಷೇತ್ರವು ಶೈಕ್ಷಣಿಕ ಅಶಿಸ್ತಿನ ದಾಳಿಗೆ ಒಳಗಾಗಿದೆ ಎಂದು ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಹೇಳಿದರು. ನಗರದ ಕವಿಸಂನಲ್ಲಿ ನ್ಯಾಯವಾದಿ ಎಂ.ಸಿ.ಶಾಂತನಗೌಡರ ದತ್ತಿ ಕಾರ್ಯಕ್ರಮ ಅಂಗವಾಗಿ ಹಮ್ಮಿಕೊಂಡಿದ್ದ “ಚಲನಚಿತ್ರ ಮಾಧ್ಯಮ ಮತ್ತು ಸಮಾಜ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

Advertisement

ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಶೈಕ್ಷಣಿಕವಾಗಿ ಶಿಸ್ತು ಇಲ್ಲ. ಬರೀ ಕನಸು ಹೊತ್ತು, ಭ್ರಮಾ ಲೋಕದಲ್ಲಿ ಬರುವುದರಿಂದ ಈ ಕ್ಷೇತ್ರ ಶಿಸ್ತು ಕಳೆದುಕೊಂಡಿದೆ. ಈ ಶಿಸ್ತು ಅಳವಡಿಸಿಕೊಂಡಾಗಲೇ ಅದರ ಅಸ್ತಿತ್ವ ಉಳಿಯುವುದರ ಜೊತೆಗೆ ಸಮಾಜಕ್ಕೂ ಒಳ್ಳೆಯ ಕೊಡುಗೆ, ಸಂದೇಶ ನೀಡಲು ಸಾಧ್ಯ ಎಂದರು. 

ಶೈಕ್ಷಣಿಕವಾಗಿ ಬೆಳೆಯಬೇಕಿದ್ದ ಸಿನಿಮಾ ಇಂದಿನ ದಿನಗಳಲ್ಲಿ ಸಾಮಾಜಿಕ ದುರವಸ್ಥೆಗೆ ಕಾರಣವಾಗಿ ಬೆಳೆಯುತ್ತಿದೆ. ಭಾರತೀಯ ಸಿನಿಮಾ ರಂಗಕ್ಕೆ ಶೈಕ್ಷಣಿಕ ಶಿಸ್ತು ಇಲ್ಲದ್ದರಿಂದ ಕೇವಲ ಭ್ರಮಾಲೋಕದ ಚಿತ್ರಗಳು ಸೃಷ್ಟಿಯಾಗುತ್ತಿವೆ. ಇದೇ ಕಾರಣದಿಂದ ಈ ಕ್ಷೇತ್ರ ಬ್ರಹ್ಮ ರಾಕ್ಷಕನ ರೂಪ ತಾಳುತ್ತಿದೆ.

ಡಿಜಿಟಲ್‌ ಮಾಧ್ಯಮವನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಪ್ರಸ್ತುತ ಯಾರೂ ಬೇಕಾದರೂ ಎಂತಹ ಸಿನಿಮಾಗಳನ್ನು ಸಿದ್ಧಪಡಿಸುವ ಅಶಿಸ್ತು ಕ್ಷೇತ್ರದ ಊನಗಳಲ್ಲಿ ಪ್ರಮುಖವಾಗಿದೆ ಎಂದರು. ಒಂದು ಕಾಲದಲ್ಲಿ ಕಲೆ ಆಗಿದ್ದ ಚಲನಚಿತ್ರ ಮಾಧ್ಯಮ ಈಗ ಉದ್ಯಮವಾಗಿ ಮಾರ್ಪಟ್ಟಿದೆ. 

ಬದಲಾದ ಕಾಲಮಾನಕ್ಕೆ ತಕ್ಕಂತೆ ಬದಲಾಗಿರುವ ಜನರ ಅಭಿರುಚಿ ತಕ್ಕಂತೆ ಸಿನಿಮಾ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯ ಸಿನಿಮಾಗಳು ತಯಾರಾಗುತ್ತಿಲ್ಲ. ಇನ್ನು ಕುಟುಂಬ ಸಮೇತವಾಗಿ ವೀಕ್ಷಿಸುತ್ತಿದ್ದ ಸಿನಿಮಾಗಳ ಕಾಲ ಮುಗಿದು, ಸಿನಿಮಾ ನೋಡುವ ಜನರ ವಿಭಾಗ, ವರ್ಗವನ್ನೇ ಮಾಡಲಾಗಿದೆ.

Advertisement

ಯುವಕರಿಗಾಗಿ ಮಾತ್ರ, ಯುವತಿಯರಿಗಾಗಿ ಮಾತ್ರ ಅಥವಾ ಬುದ್ಧಿವಂತರಿಗೆ ಮಾತ್ರವೇ ಈ ಸಿನಿಮಾ ಎಂಬ ವರ್ಗ ರೂಪಿಸಿ, ಇಡೀ ಕುಟುಂಬಕ್ಕೆ ಬೇಕಾಗಿದ್ದ ಸಿನಿಮಾ ಈಗ ವೈಯಕ್ತಿಕವಾಗಿ ಬಿಟ್ಟಿದೆ ಎಂದರು. ರಾಮ ಸಂಸ್ಕೃತಿ ಹೊರತು ರಾವಣ ಸಂಸ್ಕೃತಿಯತ್ತ ಸಮಾಜ ಹೊರಟಿದೆ. ಸಾಮಾಜಿಕ ವಸ್ತು ಸ್ಥಿತಿ ಬದಲಾದ ಪರಿಣಾಮ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಸಂಸ್ಕೃತಿಯ ಅಧಃಪತನ ಆಗಿದೆ.

ಇದರಿಂದ ಸಾಮಾಜಿಕ ಕಳಕಳಿಯ ಚಿತ್ರಗಳು ಬಂದರೂ ಆರ್ಥಿಕ ಪೆಟ್ಟು ತಿನ್ನುವಂತಾಗಿವೆ. ಹೀಗಾಗಿ ನಿರ್ದೇಶಕ, ನಿರ್ಮಾಪಕ, ಪ್ರೇಕ್ಷಕನ ಜೊತೆ ಈ ವ್ಯವಸ್ಥೆ ಒಂದಾಗಿ ಕೆಲಸ ಮಾಡಬೇಕು ಎಂದರು. ಅತಿಥಿಯಾಗಿದ್ದ ಚಲನಚಿತ್ರ ನಿರ್ಮಾಪಕ, ಮಾಜಿ ಶಾಸಕ ಬಿ.ಸಿ. ಪಾಟೀಲ ಮಾತನಾಡಿ, ವ್ಯಕ್ತಿ ಸಮಾಜದಲ್ಲಿ ಎಷ್ಟೇ ಉನ್ನತ ಸ್ಥಾನಕ್ಕೆ ತಲುಪಿದರೂ ತಾನು ಹುಟ್ಟಿದ ನೆಲ, ಸಂಸ್ಕೃತಿಯನ್ನು ಎಂದಿಗೂ ಮರೆಯಬಾರದು.

ಇಂದಿನ ದಿನಗಳಲ್ಲಿ ಜನರು  ಉನ್ನತ ಸ್ಥಾನಕ್ಕೇರಿದ ನಂತರ ತನ್ನ ಸಂಸ್ಕೃತಿ, ನೆಲ ಹಾಗೂ ಜನರನ್ನು ಮರೆಯುವ ಸ್ಥಿತಿ ಇದೆ. ಆದರೆ ನ್ಯಾಯಮೂರ್ತಿ ಮೋಹನ ಶಾಂತನಗೌಡರ ತಾವು ಅತ್ಯುನ್ನತ ಸ್ಥಾನಕ್ಕೇರಿದರೂ ತಮ್ಮ ಜನರನ್ನು ಮರೆತಿಲ್ಲ. ಇಂದಿನ ದಿನಗಳಲ್ಲಿ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. 

ಸರ್ವೋಚ್ಚ ನ್ಯಾಯಾಲಯ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಮಾತನಾಡಿ, ಜೀವನದಲ್ಲಿ ಹಿರಿಯರು, ಕುಟುಂಬದ ಜನರೊಂದಿಗೆ ಯಾವ ರೀತಿ ಇರಬೇಕು ಎಂಬುದನ್ನು ಚಲನಚಿತ್ರಗಳಿಂದ ಕಲಿತಿದ್ದೇವೆ. ಸಿನಿಮಾಗಳು ಸಮಾಜದ ಮೇಲೆ ಸಹ ಸಾಕಷ್ಟು ಪರಿಣಾಮ ಬೀರುತ್ತವೆ. ಆದರೆ ಇಂದಿನ ದಿನಗಳಲ್ಲಿ ಬಹಳ ಶಕ್ತಿಯುತವಾಗಿರುವ ಮಾಧ್ಯಮವನ್ನು ಜನರು ನಂಬುತ್ತಾರೆ.

ಹೀಗಾಗಿ ಅವುಗಳಲ್ಲಿ ಜನರಿಗೆ ಹಾನಿಯಾಗುವಂತಹದ್ದನ್ನು ಬಿತ್ತರಿಸದಂತೆ ಎಚ್ಚರ ವಹಿಸಬೇಕು ಎಂದರು. ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಕವಿಸಂ ಕಾರ್ಯಾಧ್ಯಕ್ಷ ಡಿ.ಎಂ.ಹಿರೇಮಠ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಸಪ್ರಭು ಹೊಸಕೇರಿ, ಗುರು ಹಿರೇಮಠ ಸೇರಿದಂತೆ ಹಲವರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next