Advertisement

ಪರಿಣಾಮ ಬೀರದ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು

10:09 AM Dec 25, 2019 | sudhir |

ಸ್ಪರ್ಧಾತ್ಮಕ ಜಗತ್ತು, ಔದ್ಯೋಗಿಕ ಅವಕಾಶವೆನ್ನುತ್ತಾ ನಮ್ಮ ಶಾಲೆಗಳನ್ನೆಲ್ಲಾ ಅಂಕಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಂಕಾಧಾರಿತ ಫ‌ಲಿತಾಂಶವನ್ನೇ ಗುಣಾತ್ಮಕ ಶಿಕ್ಷಣವೆಂದು ಪರಿಗಣಿಸಲಾಯಿತು. ಹೆಚ್ಚು ಫ‌ಲಿತಾಂಶ ಅತಿ ಹೆಚ್ಚು ಅಂಕ ಪಡೆದ, ಹೆಚ್ಚು ಬಹುಮಾನ ಪಡೆದ, ಹೆಚ್ಚು ಫ‌ಸ್ಟ್‌ ಬಂದ ಶಾಲೆಗಳೇ ಶ್ರೇಷ್ಠವೆಂದು ಬಿಂಬಿಸಿ ಸನ್ಮಾನಿಸಲಾಯಿತು.

Advertisement

ಕಳೆದೆರಡು ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ ಸರಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿಯವರೆಗೆ 2017-18 ರಲ್ಲಿ. 44,575,35 ಮಂದಿ ವಿದ್ಯಾರ್ಥಿಗಳಿದ್ದರೆ, 2019-20ರಲ್ಲಿ ಅಂದ್ರೆ ಈ ಶೈಕ್ಷಣಿಕ ವರ್ಷದಲ್ಲಿ 42,73,871ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ 41,10,402 ಇದ್ದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ 2019-20ರಲ್ಲಿ 42,73,871ಕ್ಕೆ ಏರಿದೆ. ಶಾಲೆಗಳ ಸಂಖ್ಯೆಯ ಬಗ್ಗೆ ಹೇಳುವುದಿದ್ದರೆ ಸರಕಾರಿ ಶಾಲೆಗಳು 48,690 ಇದ್ದರೆ ಖಾಸಗಿ ಶಾಲೆಗಳು 21,104 ಮಾತ್ರ. ಇದು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯಾ ವರದಿ.

ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿದದ್ದು ದಿನ ಬೆಳಗಾಗುವಾಗ ಗುಡ್ಡ ಕುಸಿದಂತೆಯೋ? ಇಳಿಕೆ ಏಕಾಏಕಿ ದಿಢೀರೆಂದು ಸಂಭವಿಸಿದ್ದಲ್ಲ. ಈ ಬಗ್ಗೆ ಯಾರಿಗೆ ಗೊತ್ತಿರಬೇಕೊ ಅವರಿಗೆ ಸ್ಪಷ್ಟವಾದ ಮಾಹಿತಿ ಇದ್ದೇ ಇರುತ್ತದೆ. ಇಳಿಕೆಯಾಗುವುದನ್ನು ಮನಗಂಡೇ ಸಾಲು ಸಾಲು ಸುಧಾರಣಾ ಕ್ರಮಗಳು, ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರಕಾರಿ ಶಾಲೆಗಳ ಉಳಿವು, ಅಭಿವೃದ್ಧಿ ಎಂಬ ಕೂಗು ಬಲವಾಯಿತು. ಖಾಸಗಿ ಶಾಲೆಗಳಿಗೆ ಸ್ಪರ್ಧಾತ್ಮಕವಾಗಿ ಮತ್ತು ಗುಣಾತ್ಮಕ ಶಿಕ್ಷಣ ವ್ಯವಸ್ಥೆಗಾಗಿ ಮಾಡಿದ ಹಾಗೂ ಮಾಡುತ್ತಿರುವ ಖರ್ಚಂತೂ ಅಪಾರ (ರಾಜ್ಯ ಸರಕಾರ 2018-19ನೇ ಸಾಲಿನ ಬಜೆಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ 22,350 ಕೋ.ರೂ. ಗಳನ್ನು ಮೀಸಲಿರಿಸಿದೆ). ಉಚಿತ ವಿತರಣೆಗಳೇನು, ರಿಯಾಯಿತಿ ಗಳೇನು ಒಂದೇ ಎರಡೇ… ಸಾಲದ್ದಕ್ಕೆ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ, ಕೆಜಿಯಿಂದಲೇ ಆಂಗ್ಲ ಶಿಕ್ಷಣ, ಆಂಗ್ಲ ಮಾಧ್ಯಮ ವಸತಿ ಶಾಲೆಗಳು, ಪಬ್ಲಿಕ್‌ ಶಾಲೆಗಳೆಂಬ ಹೆಸರಿನಲ್ಲಿ ನೂತನ ಶಿಕ್ಷಣ ವ್ಯವಸ್ಥೆ. ಹೀಗೆ ಹತ್ತಾರು ವಿಧದ ಶೈಕ್ಷಣಿಕ ಯೋಜನೆಗಳನ್ನು ಜಾರಿಗೆ ತರಲಾಯಿತು. ಸಾಲದ್ದಕ್ಕೆ ಶೈಕ್ಷಣಿಕ ವ್ಯವಸ್ಥೆಯನ್ನು ಇನ್ನಷ್ಟು ಆಂಗ್ಲಮಯವಾಗಿಸಲು ತಯಾರಿ ನಡೆಸಲಾಗುತ್ತಿದೆ. ಸಾರ್ವಜನಿಕ ಬೇಡಿಕೆ, ಒತ್ತಾಯಗಳನ್ನು ಪರಿಶೀಲಿಸಲಾಗುತ್ತಿದೆಯೆಂಬ ಭರವಸೆ. ಆದರೂ ಆಗುತ್ತಿರುವುದೇನು?.

ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು, ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳನ್ನು ಹೆಚ್ಚಿಸಲು ಜಾರಿಗೆ ತಂದ ಯಾವುದೇ ಉಪಕ್ರಮಗಳು ಸಫ‌ಲವಾಗಿಲ್ಲವೆಂಬುವುದೇ ಸ್ಪಷ್ಟ. ಇದೇ ಪರಿಸ್ಥಿತಿ ಮಂದುವರಿದರೆ ಕನ್ನಡ ಶಾಲೆಗಳ (ಸರಕಾರಿ, ಖಾಸಗಿ ಕನ್ನಡ ಶಾಲೆಗಳು ಸೇರಿ) ಅಸ್ತಿತ್ವಕ್ಕೆ ಬಹಳ ದೊಡ್ಡ ಪ್ರಶ್ನೆ ಎದುರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸರಕಾರಿ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳನ್ನಾಗಿ ಪರಿವರ್ತಿಸಿದರೂ ಅವುಗಳು ಉಳಿಯಲಾರವು ಎಂಬುದು ಅಷ್ಟೆ ಸತ್ಯ. ಇಷ್ಟಿದ್ದರೂ ನಮ್ಮ ಆಡಳಿತಗಾರರು, ಜನಪ್ರತಿನಿಧಿಗಳು ಸಿಕ್ಕ ಸಿಕ್ಕಲ್ಲಿ, ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸರಕಾರಿ ಶಾಲೆ ಉಳಿಸಿ, ಸರಕಾರಿ ಶಾಲೆಗಳನ್ನು ಉಳಿಸಲು ಊರವರು ಮುಂದೆ ಬನ್ನಿ, ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ಎಂದೆಲ್ಲ ಘೋಷಣೆ ಕೂಗುತ್ತಾರಲ್ಲ ಇದಕ್ಕೆ ಅರ್ಥವೇ ಇಲ್ಲ. ಸರಕಾರಿ ಶಾಲೆಗಳನ್ನು ಉಳಿಸಬೇಕು, ಬೆಳೆಸಬೇಕು ಎಂಬ ಕಾಳಜಿ ಬಗ್ಗೆ ಆಕ್ಷೇಪಗಳಿಲ್ಲ. ಆದರೆ ಶಾಲೆಗಳನ್ನು ಉಳಿಸಲು, ಬೆಳೆಸಲು ಈವರೆಗೆ ಮಾಡಿದ ಕಾರ್ಯಗಳು ಯಶಸ್ವಿಯಾಗಿಲ್ಲ. ಹಾಗಾಗಿ ಬರೀ ಘೋಷಣೆಗಳಿಂದ ಅದು ಸಾಧ್ಯ ಇಲ್ಲವೆಂಬ ಕನಿಷ್ಠ ಅರಿವಾದರೂ ಬೇಕು.

ಸರಕಾರಿ ಶಾಲೆಗಳನ್ನು ಉಳಿಸುವ ಕಾಳಜಿ ಇದ್ದರೆ ಮೊದಲು ಮಾಡಬೇಕಾದ್ದು ವಸ್ತುಸ್ಥಿತಿಯ ಅಧ್ಯಯನ. ಜನರ ಬಳಿ ತೆರಳಬೇಕು, ಶಿಕ್ಷಕರ ಅಭಿಪ್ರಾಯ ಸಂಗ್ರಹಿಸಬೇಕು, ಶೈಕ್ಷಣಿಕ ಸುಧಾರಣಾ ವರದಿಗಳನ್ನು, ಶಿಕ್ಷಣ ತಜ್ಞರ, ಶೈಕ್ಷಣಿಕ ಮನೋವಿಜ್ಞಾನಿಗಳ ವಿಚಾರಗಳನ್ನು ಸ್ವೀಕರಿಸಬೇಕು.

Advertisement

ಯಾವಾಗ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೊರಗಿಟ್ಟು ಸರಕಾರಿ ಶಾಲೆಗಳನ್ನು ಸುಧಾರಿಸುವ ಯೋಜನೆ ತಯಾರಿಸಲಾಯಿತೊ, ಘೋಷಣೆ ಕೂಗಲಾರಂಭಿಸಿದರೊ ಅಲ್ಲಿಂದ ಅದರ ಕುಸಿತ ಆರಂಭವಾಗಿದೆ.

ಹೆಜ್ಜೆಹೆಜ್ಜೆಗೂ ಸರಕಾರಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳೆಂಬ ತಾರತಮ್ಯ ನೀತಿ, ಶೈಕ್ಷಣಿಕ ವ್ಯವಸ್ಥೆ ಮಾತ್ರವಲ್ಲ ಸಾಮಾಜಿಕ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಸ್ಪರ್ಧಾತ್ಮಕ ಜಗತ್ತು, ಔದ್ಯೋಗಿಕ ಅವಕಾಶವೆನ್ನುತ್ತಾ ನಮ್ಮ ಶಾಲೆಗಳನ್ನೆಲ್ಲಾ ಅಂಕಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಂಕಾಧಾರಿತ ಫ‌ಲಿತಾಂಶವನ್ನೇ ಗುಣಾತ್ಮಕ ಶಿಕ್ಷಣವೆಂದು ಪರಿಗಣಿಸಲಾಯಿತು. ಹೆಚ್ಚು ಫ‌ಲಿತಾಂಶ ಅತಿ ಹೆಚ್ಚು ಅಂಕ ಪಡೆದ, ಹೆಚ್ಚು ಬಹುಮಾನ ಪಡೆದ, ಹೆಚ್ಚು ಫ‌ಸ್ಟ್‌ ಬಂದ ಶಾಲೆಗಳೇ ಶ್ರೇಷ್ಠವೆಂದು ಬಿಂಬಿಸಿ ಸನ್ಮಾನಿಸಲಾಯಿತು. ಇಂತಹ ಶೈಕ್ಷಣಿಕ ಅಂಶಗಳು ನಮ್ಮ ಶಾಲೆಗಳನ್ನು ಕಳಪೆಯೆಂದು ಪರಿಗಣಿಸಲು, ಆ ಮೂಲಕ ಜನರನ್ನು ಶಾಲೆಗಳಿಂದ ವಿಮುಖರನ್ನಾಗಿಸಲು ಕಾರಣವಾಯಿತು. ಕನಿಷ್ಠ ಕಲಿಕಾ ಖಾತ್ರಿಯನ್ನೇ ನೀಡಲು ವಿಫ‌ಲವಾಗಿದ್ದೇವೆ. ಸರಿಯಾಗಿ ಭಾಷೆ ಕಲಿಸಲಾರದ ಸ್ಥಿತಿಗೆ ನಮ್ಮ ಶಾಲೆಗಳು ಬಂದು ತಲುಪಿದವು. ಒಂದನೇ ತರಗತಿಯಿಂದ ಆಂಗ್ಲ ಭಾಷಾ ಕಲಿಕೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಸೋತೆವು. ತರಗತಿಗೊಬ್ಬ ಶಿಕ್ಷಕರ ಕಲ್ಪನೆ ನಮಗೆ ಬರುವುದೇ ಇಲ್ಲ. ಇನ್ನೂ ಶಾಲೆಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಕೊಡುವಲ್ಲಿ ಎಡವುತ್ತಲೇ ಇದ್ದೇವೆ. ಕ್ರೀಡೆ, ಕಲೆಯಂತಹ ಸೃಜನಶೀಲ ಚಟುವಟಿಕೆಗಳು ಆದ್ಯತೆ ಪಡೆಯುವುದೇ ಇಲ್ಲ. ಈ ಎಲ್ಲಾ ಕೊರತೆ, ವೈಫ‌ಲ್ಯಗಳನ್ನು ಮುಚ್ಚಿಟ್ಟು ಹೇಳಿಕೆಗಳನ್ನೇ ಸುಧಾರಣೆಯೆನ್ನುವ ದುಃಸ್ಥಿತಿ ನಮ್ಮ ಶಿಕ್ಷಣ ವ್ಯವಸ್ಥೆಯದ್ದಾಯಿತು.

ಕನ್ನಡ ಶಾಲೆಗಳಲ್ಲಿ (ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ) ದಾಖಲಾತಿ ಕಡಿಮೆಯಾಗುತ್ತಿದೆಯೆಂಬ ವಿಚಾರ ಅರಿವಿಗೆ ಬಂದಾಗಲೇ ಇಲಾಖೆಯಾಗಲಿ, ಸರಕಾರವಾಗಲಿ ಎಚ್ಚೆತ್ತು ಕೊಳ್ಳಬೇಕಿತ್ತು. ಮಾಧ್ಯಮ ಮತ್ತು ಶಿಕ್ಷಣದ ನಿಜ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಣ ನೀತಿಗಳನ್ನು ರೂಪಿಸುವವರೇ ಶಿಕ್ಷಣವನ್ನು ಉದ್ಯಮವಾಗಿಸಿದ್ದರ ಫ‌ಲ ಈಗ ಕಾಣುತ್ತಿದೆ ಅಷ್ಟೆ. ಹೂರಣದ ಬಗ್ಗೆ ಮಾತನಾಡದೆ ಆವರಣವನ್ನೇ ಬಿಗಿಗೊಳಿಸುತ್ತಾ ಬಂದು ಶಾಲೆಗಳು ದಾಖಲೆಗಳ ಮತ್ತು ವಿತರಣೆಗಳ ಕೊಠಡಿಗಳಾಗಿ, ಮಾಹಿತಿಗಳ ವಿನಿಮಯ ಕೇಂದ್ರಗಳಾಗಿ ಪರಿವರ್ತಿತವಾಯಿತು.

ಸರಕಾರಿ ಶಾಲೆಗಳಲ್ಲಿ (ಕನ್ನಡ ಶಾಲೆಗಳಲ್ಲಿ) ಸರಿಯಾಗಿ ಪಾಠ ನಡೆಯುವುದಿಲ್ಲ, ಶಿಕ್ಷಕರು ನಿತ್ಯ ತರಬೇತಿ, ವರದಿ, ಮೀಟಿಂಗ್‌ ಎನ್ನುತ್ತಾರೆಂಬ ಪೋಷಕರ ನಂಬುಗೆಯಿಂದಾಗಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು. ಉನ್ನತ ಶಿಕ್ಷಣಕ್ಕೆ, ಔದ್ಯೋಗಿಕ ಅವಕಾಶಕ್ಕೆ ಆಂಗ್ಲ ಭಾಷೆ ಇದ್ದರೆ ಸುಲಭವೆನ್ನುತ್ತಾ ಅನಂತರ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಲಭ್ಯ ಎಂಬಲ್ಲಿಯವರೆಗೆ ಶೈಕ್ಷಣಿಕ ವಾತಾವರಣ ಬದಲಾಯಿತು. ಪಿ.ಯು.ಸಿ. ಹಂತಕ್ಕಾಗಲಿ, ಉನ್ನತ ಶಿಕ್ಷಣಕ್ಕಾಗಲಿ, ಸ್ಪರ್ಧಾತ್ಮಕ ಹಾಗೂ ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿ ಕನ್ನಡ ಭಾಷೆಯನ್ನು ಜ್ಞಾನ ಶಾಖೆಯಾಗಿ, ಒಂದು ಸಲಕರಣೆಯಾಗಿ ಮತ್ತು ಮಾಧ್ಯಮವಾಗಿ ಬೆಳೆಸುವುದರಲ್ಲಿ, ಬಳಸುವುದರಲ್ಲಿ ಪೂರ್ಣ ವಿಫ‌ಲರಾಗಿದ್ದೇವೆ. ಇದಕ್ಕೆಲ್ಲ ಆಡಳಿತದ ನೀತಿಯೇ ಕಾರಣ. ಇದನ್ನು ಅರ್ಥೈಸಿಕೊಳ್ಳಲು ಬೃಹಸ್ಪತಿಜ್ಞಾನ ಬೇಕಿಲ್ಲ. ಸಾಮಾನ್ಯ ಜ್ಞಾನದ ಅರಿವಿನಿಂದ ಮೂಲಕ್ಕೆ ಚಿಕಿತ್ಸೆ ನೀಡುವ ಗಟ್ಟಿತನ ಬೇಕಾಗಿದೆ. ಅದಿಲ್ಲದೆ ಸುಧಾರಣೆಗಳನ್ನು ಮಾಡ ಹೊರಡುವುದೆಂದರೆ ಬಯಲಲ್ಲಿ ಬೆತ್ತಲಾದಂತೆ.

– ರಾಮಕೃಷ್ಣ ಭಟ್‌, ಚೊಕ್ಕಾಡಿ

Advertisement

Udayavani is now on Telegram. Click here to join our channel and stay updated with the latest news.

Next