Advertisement

ಬಡ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ಧಾರ ಅತಂತ್ರ

03:29 PM Aug 21, 2021 | Team Udayavani |

 

Advertisement

ವರದಿ: ಹೇಮರಡ್ಡಿ ಸೈದಾಪುರ

ಹುಬ್ಬಳ್ಳಿ: ಶಾಲೆಗಳ ಆರಂಭಕ್ಕೆ ಸರಕಾರ ಸಮಯ ನಿಗದಿ ಮಾಡಿ ಮಾರ್ಗಸೂಚಿಗಳನ್ನೇನೋ ಹೊರಡಿಸಿದೆ. ಆದರೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಭೀತಿಯಿಂದಾಗಿ “ಶಾಲೆಯೋ, ಜೀವವೋ’ ಎನ್ನುವ ಆತಂಕವಿದೆ. ಪರಿಸ್ಥಿತಿ ಹೀಗಿರುವಾಗ ಆನ್‌ಲೈನ್‌, ಆಫ್‌ ಲೈನ್‌ ತರಗತಿಗಳಿಗೆ ಅಗತ್ಯ ಸೌಲಭ್ಯ ಹೊಂದಿರದ ವಿದ್ಯಾರ್ಥಿಗಳಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ 23,724 ವಿದ್ಯಾರ್ಥಿಗಳು ಪರ್ಯಾಯ ಶಿಕ್ಷಣಕ್ಕೆ ಬೇಕಾದ ಮೊಬೈಲ್‌, ಟಿವಿ ಇತರೆ ಯಾವುದೇ ಸೌಲಭ್ಯ ಹೊಂದಿಲ್ಲ. ಶಾಲೆಯಿಂದ ಮಕ್ಕಳು ದೂರ ಉಳಿದರೆ ಬಾಲ ಕಾರ್ಮಿಕ, ಬಾಲ್ಯ ವಿವಾಹ, ಶಾಲೆ ಮತ್ತು ಮಕ್ಕಳ ಸಂಬಂಧ ದೂರವಾಗುತ್ತದೆ ಎನ್ನುವ ಕಾರಣದಿಂದ ಸರಕಾರ 9, 10 ತರಗತಿಗಳ ಆರಂಭಕ್ಕೆ ವೇಳಾಪಟ್ಟಿ ಹಾಗೂ ಮಾರ್ಗಸೂಚಿ ನೀಡಿದೆ. ಇದರೊಂದಿಗೆ 7 ಮತ್ತು 8ನೇ ತರಗತಿ ಆರಂಭಕ್ಕೂ ಚಿಂತನೆ ನಡೆದಿದೆ.

ಶಾಲೆಗೆ ಕಳುಹಿಸುವ ಆಯ್ಕೆ ಪಾಲಕರಿಗೆ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದೋ ಅಥವಾ ಆನ್‌ ಲೈನ್‌ ಶಿಕ್ಷಣವೋ ಎನ್ನುವ ಗೊಂದಲ ಪಾಲಕರಲ್ಲಿದೆ. ಇದೊಂದು ವರ್ಷ ಇದ್ದಿದ್ದರಲ್ಲೇ ಮುಂದೂಡಿದರಾಯ್ತು ಎನ್ನುವ ಅಭಿಮತ ಪಾಲಕರದ್ದಾಗಿದೆ. ಆದರೆ ಪರ್ಯಾಯ ಶಿಕ್ಷಣಕ್ಕೆ ಬೇಕಾದ ಪರಿಕರಗಳ ಕೊರತೆ ಅನುಭವಿಸುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ಧಾರ ಅತಂತ್ರವಾಗಿದೆ.

Advertisement

ಸಾಧನಗಳ ಕೊರತೆ: 2021-22 ಸಾಲಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪರ್ಯಾಯ ಶಿಕ್ಷಣಕ್ಕೆ ಪೂರಕ ಸಾಧನಗಳನ್ನು ಹೊಂದಿರುವ ವಿದ್ಯಾರ್ಥಿಗಳ ಸಮೀಕ್ಷೆ ಮಾಡಿದೆ. ಜಿಲ್ಲೆಯಲ್ಲಿ 1-10 ತರಗತಿವರೆಗೆ ಗಂಡು 1,51,419 ಹಾಗೂ ಹೆಣ್ಣು 1,66,619 ಸೇರಿ ಒಟ್ಟು 3,17,610 ವಿದ್ಯಾರ್ಥಿಗಳಿದ್ದಾರೆ. ಇವರ ಪೈಕಿ ಮೊಬೈಲ್‌, ಟಿವಿ ಹಾಗೂ ಇಂಟರ್‌ ನೆಟ್‌ ಹೊಂದಿರುವವರು 1,44,395 ವಿದ್ಯಾರ್ಥಿಗಳಿದ್ದಾರೆ. ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಸಂವೇದ ಕಾರ್ಯಕ್ರಮ ವೀಕ್ಷಣೆಗಾಗಿ ಟಿವಿ ಹೊಂದಿರುವ 86,747 ವಿದ್ಯಾರ್ಥಿಗಳಿದ್ದಾರೆ. ಕೀ ಪ್ಯಾಡ್‌ ಮೊಬೈಲ್‌ ಹೊಂದಿರುವವರು 62,735 ವಿದ್ಯಾರ್ಥಿಗಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಗಂಡು 10,779 ಹಾಗೂ ಹೆಣ್ಣು 12,944 ಸೇರಿ ಒಟ್ಟು 23,724 ವಿದ್ಯಾರ್ಥಿಗಳು ಮೊಬೈಲ್‌, ಟಿವಿ, ಇಂಟರ್‌ನೆಟ್‌ ಸೇರಿದಂತೆ ಪರ್ಯಾಯ ಶಿಕ್ಷಣಕ್ಕೆ ಬೇಕಾದ ಯಾವುದೇ ಸೌಲಭ್ಯ ಹೊಂದಿಲ್ಲ. ಸೌಲಭ್ಯ ಹೊಂದಿರದ ವಿದ್ಯಾರ್ಥಿಗಳ ಪ್ರಮಾಣ ಹೆಚ್ಚಿದ್ದು, ಒಂದಿಷ್ಟು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೂ ಈ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಒತ್ತು: ಸೌಲಭ್ಯ ಹೊಂದಿರುವ ಹಾಗೂ ಹೊಂದಿರದ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣ ನೀಡುವುದು ಶಿಕ್ಷಕರಿಗೆ ಸವಾಲಿನ ಕಾರ್ಯವಾಗಿದೆ. ವಿವಿಧ ಸೌಲಭ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಯಾವುದೇ ಸೌಲಭ್ಯಗಳನ್ನು ಹೊಂದಿರದ ವಿದ್ಯಾರ್ಥಿಗಳನ್ನು ಕೊಂಡೊಯ್ಯುವುದು ಕಷ್ಟ. ಇಂತಹ ವಿದ್ಯಾರ್ಥಿಗಳನ್ನು ವಿವಿಧ ಸೌಲಭ್ಯ ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಟ್ಯಾಗ್‌ ಮಾಡುವ ಕೆಲಸ ಆಗಿದೆಯಾದರೂ ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿದೆ. ಕೆಲವೆಡೆ ಸ್ಥಳೀಯವಾಗಿ ಶಿಕ್ಷಣದ ಬಗ್ಗೆ ಕಾಳಜಿಯುಳ್ಳವರಿಗೆ ವಿದ್ಯಾರ್ಥಿಗಳ ಹೊಣೆಗಾರಿಕೆ ನೀಡಿದ್ದಾರೆ. ಇವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ವಾರಕ್ಕೊಮ್ಮೆ ಶಿಕ್ಷಕರು ವಿದ್ಯಾರ್ಥಿ ಮನೆಗೆ ಭೇಟಿ, ಸೂಕ್ತ ಮುನ್ನೆಚ್ಚರಿಕೆಯಿಂದ ಪಾಲಕರೊಂದಿಗೆ ಶಾಲೆಗೆ ಕರೆಯಿಸಿಕೊಂಡು ಪಾಠ ಪ್ರವಚನಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next