Advertisement

ಬಳ್ಳಕ ಅಂಗನವಾಡಿ ಮಕ್ಕಳಿಗೆ ಟ್ಯಾಬ್‌ ಮೂಲಕ ಶಿಕ್ಷಣ

11:23 AM Apr 02, 2018 | Team Udayavani |

ಸುಬ್ರಹ್ಮಣ್ಯ: ಈ ಅಂಗನವಾಡಿಗೆ ಬರಲು ಮಕ್ಕಳು ಹಿಂದೇಟು ಹಾಕುವುದಿಲ್ಲ, ರಚ್ಚೆ ಹಿಡಿದು ಅಳುವುದಿಲ್ಲ. ಆಧುನಿಕ ಶೈಲಿಯಲ್ಲಿ ಶಿಕ್ಷಣ ನೀಡುತ್ತಿರುವ ಈ ಕೇಂದ್ರವೀಗ ಎಲ್ಲರ ಗಮನ ಸೆಳೆಯುತ್ತಿದೆ.

Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ ಅಂಗನವಾಡಿ ಕೇಂದ್ರವಿದೆ. ಪಂಜ- ಗುತ್ತಿಗಾರು ರಸ್ತೆಯ ಒಳಗಿನ ಕಾಡಿನ ಮಧ್ಯೆ ಜನವಸತಿ ವಿರಳವಿರುವಲ್ಲಿ ಇದು ಕಾರ್ಯಾಚರಿಸುತ್ತಿದೆ. ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಅಂಗನವಾಡಿ ಕೇಂದ್ರವಿದು. ನಗರದ ಆಂ.ಮಾ.ಶಾಲೆಗಳಲ್ಲೂ ಇಲ್ಲದಿರುವ ವ್ಯವಸ್ಥೆಗಳು ಇಲ್ಲಿವೆ.

ಇಲ್ಲಿ ಈ ಹಿಂದೆ ಸರಕಾರಿ ಶಾಲೆ ಕಟ್ಟಡದ ಜತೆ ಅಂಗನವಾಡಿ ಕೇಂದ್ರವಿತ್ತು. ಬಳಿಕ ಸರಕಾರದ ಅನುದಾನದ ಜತೆಗೆ ಊರಿನ ದಾನಿಗಳು, ಪೋಷಕರು ಮತ್ತು ಸಂಘ – ಸಂಸ್ಥೆಗಳ ನೆರವಿನಿಂದ 14 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. 

ಭವಿಷ್ಯ ಬೆಳಗಿಸುತ್ತಿದೆ
ಶಿಕ್ಷಕಿಯಾಗಿ ಬಂದಾಗಿಂದ ಏನಾದರೂ ಹೊಸತನ ತರಬೇಕು ಎಂಬ ಯೋಚನೆಯಿತ್ತು. ಪರಿಸರದ ಮಕ್ಕಳ ಪೋಷಕರನ್ನು ಸವಲತ್ತಿಗಾಗಿ ಕೇಳಿಕೊಂಡೆ. ಕೇಳಿದ ತತ್‌ಕ್ಷಣ ಯಾರೊಬ್ಬರೂ ಹಿಂಜರಿಯದೆ ಸ್ಪಂದಿಸಿ ಶಾಲೆಗೆ ಬೇಕಾದ ಎಲ್ಲ ಸವಲತ್ತು ಒದಗಿಸಿದರು. ನಿರೀಕ್ಷೆ ಮೀರಿದ ಸೊತ್ತುಗಳು ಒದಗಿ ಅಚ್ಚರಿ ಮೂಡಿತು. ಕೇಳುವ ಮನಸ್ಸಿದ್ದರೆ ಕೊಡುವ ಕೈಗಳಿರುತ್ತವೆ, ಬಾಲವಿಕಾಸ ಸಮಿತಿ, ಕಟ್ಟಡ ಸಮಿತಿ, ಪೋಷಕರು, ಸಂಘ-ಸಂಸ್ಥೆಗಳ ನೆರವು ಇಲ್ಲಿ ಮಕ್ಕಳ ಭವಿಷ್ಯ ಬೆಳಗಿಸುತ್ತಿದೆ.
-ಲತಾ ಅಂಬೆಕಲ್ಲು ,
ರಾಜ್ಯ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆ ಪುರಸ್ಕೃತೆ, ಬಳ್ಳಕ

ಒಗ್ಗಟ್ಟಿನ ಮೂಲಕ ಪರಿಹಾರ
ಶಾಲೆಯ ಕುರಿತು ಗ್ರಾಮದಲ್ಲಿ ಅಭಿಮಾನ ಇದ್ದಾಗ ತನ್ನಿಂತಾನೆ ಸವಲತ್ತು ಒದಗುತ್ತದೆ. ಸ್ಥಳೀಯವಾಗಿ ಹೊಂದಾಣಿಕೆ ಇದ್ದಾಗ ಸುಂದರ ಸುಸಜ್ಜಿತ ಕೇಂದ್ರ ನಿರ್ಮಾಣವಾಗಲು ಸಾಧ್ಯ. ಇಲ್ಲಿ ಇಲಾಖೆ, ಕಾರ್ಯಕರ್ತೆ, ಸಿಬಂದಿ, ಪೋಷಕರು ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ಸರಕಾರದ ಇತ್ತೀಚಿನ ಧೋರಣೆಗಳು ಮಕ್ಕಳ ಶಿಕ್ಷಣವನ್ನು ಅಧಃಪತನಗೊಳಿಸುತ್ತಿವೆ. ಒಗ್ಗಟ್ಟಿನ ಮೂಲಕವೇ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬಹುದು.
-ಜಯಪ್ರಕಾಶ ಮೊಗ್ರ,ಕಟ್ಟಡ ಸಮಿತಿ ಅಧ್ಯಕ್ಷರು

Advertisement

ಆಧುನಿಕ ಶೈಲಿಯ ಶಿಕ್ಷಣ
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಇಲ್ಲಿ ಪ್ರೋತ್ಸಾಹ ಸಿಗುತ್ತಿದೆ. ನಗರ ಶಾಲೆಗಳಿಗೆ ಕಮ್ಮಿ ಇಲ್ಲದಂತೆ ಶಾಲೆ ಆಧುನಿಕ ಶೈಲಿಯಲ್ಲಿ ಶಿಕ್ಷಣ ದೊರಕುತ್ತಿದೆ. ಇದು ನಮಗೆ ಹೆಮ್ಮೆ ತಂದಿದೆ.
-ಮಿತ್ರಕುಮಾರಿ ಚಿಕ್ಮುಳಿ,
ಬಾಲವಿಕಾಸ ಸಮಿತಿ ಅಧ್ಯಕ್ಷೆ 

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next