Advertisement
ಪರೀಕ್ಷೆಗಳಲ್ಲೂ ಹತ್ತಾರು ವಿಧಗಳಿವೆ. ಆದರೆ ಪ್ರಸ್ತುತ ಪರೀಕ್ಷೆಗಳೆಂದರೆ ಬೇರೆ ಯಾವುದೇ ವಿಧಾನ ನೆನಪಾಗುವುದಿಲ್ಲ. ಕೇವಲ ಲಿಖೀತ ಪರೀಕ್ಷೆ… ಅದೂ ಪಾಸು ಅಥವಾ ಫೈಲು ನಿರ್ಧರಿಸುವ ಪರೀಕ್ಷೆ. ಪೋಷಕರಿಗಂತೂ ನೀವು ಏನೇ ಮಾಡಿ ಅವರಿಗದು ಮುಖ್ಯವಾಗುವುದೇ ಇಲ್ಲ. ಪರೀಕ್ಷೆಯ ಬಗ್ಗೆ , ಹೋಂ ವರ್ಕ್ ಬಗ್ಗೆ ಮಾತ್ರ ಬಹುತೇಕ ಪೋಷಕರು ತಲೆ ಕೆಡಿಸಿಕೊಳ್ಳುತ್ತಾರೆ. ಹೋಂ ವರ್ಕ್ ಅಂದ್ರೆ ಪಾಠ… ಪರೀಕ್ಷೆ….ಅಂಕ ಸಂಬಂಧಿಯೇ ಆದ್ರೆ ಮಾತ್ರ ಹೋಂ ವರ್ಕ್. ಹಾಗಾಗಿ ಪ್ರಸ್ತುತದ ಪರೀಕ್ಷೆ ಎಂದರೆ ಅಂಕ… ಪಾಸು….ನೂರು ಶೇಕಡಾ…ಹೈಯೆಸ್ಟ್ ಎಂಬಿತ್ಯಾದಿ ವಿಷಯದ ಸುತ್ತಲೇ ಸುತ್ತುತ್ತದೆ. ಯಾವಾಗ ನೀವು ಶಾಲಾ ಶಿಕ್ಷಣದೊಳಗೆ ಕಾಲಿಟ್ಟಿರೊ…ಆವಾಗಿನಿಂದಲೆ ಒಂದಲ್ಲ ಒಂದು ರೂಪದ ಪರೀಕ್ಷೆ ಗಳನ್ನು(ಅಂಗನವಾಡಿ ಮಕ್ಕಳಿಗೂ ಪರೀಕ್ಷೆ ಮಾಡು ತ್ತಾರಂತೆ…) ನಿತ್ಯ ಎಂಬಂತೆ ಎದುರಿಸಲೇ ಬೇಕಾ ಗುವ ಪರಿಸ್ಥಿತಿ ಇದೆ. ಶಾಲೆ ಎಂದರೆ ಪರೀಕ್ಷೆ… ಪರೀಕ್ಷೆ ಎಂದರೆ ಕಲಿಕೆ….ಪಾಸು ಫೈಲು…ಇಷ್ಟಕ್ಕೇ ಶೈಕ್ಷಣಿಕ ವ್ಯವಸ್ಥೆ ಸೀಮಿತವಾಗಿಬಿಟ್ಟಿದೆಯೋ… ಎಂಬಂತೆ ಮಕ್ಕಳಿಗೆ ಈಗೀಗ ಎರಡೇ ಕಾಲ – ಒಂದು ಪರೀಕ್ಷಾ ಕಾಲ, ಇನ್ನೊಂದು ಪರೀಕ್ಷಾ ತಯಾರಿ ಕಾಲ ಅಷ್ಟೆ.
Related Articles
Advertisement
ಪರೀಕ್ಷಾ ಸುಧಾರಣೆಯ ಬಗ್ಗೆ ಸಾಕಷ್ಟು ವರದಿ ಗಳು, ಸಮೀ ಕ್ಷೆಗಳ ಶಿಫಾ ರಸುಗಳು, ಶೈಕ್ಷಣಿಕ ಚಿಂತನೆಗಳು ನಮ್ಮ ಮುಂದಿದೆ. ಪ್ರಸ್ತುತ ಅಂಕಾ ಧಾರಿತವಾದ ಪರೀಕ್ಷಾ ವ್ಯವಸ್ಥೆ ಇದೆ (ಅದರಲ್ಲಿ ಬಿ ಭಾಗವೂ ಸೇರಿ). ಅಂತಿಮವಾಗಿ ನೀನು ಎಷ್ಟು ಅಂಕ ಪಡೆದಿದ್ದಿ, ಶಾಲೆಗೆ ಎಷ್ಟು ಫಲಿತಾಂಶ ಬಂದಿದೆ ಎಂಬಲ್ಲಿಗೆ ಗುಣಮಟ್ಟದ ನಿರ್ಧಾರವೂ… ಸಾಧನೆಯ ಲೆಕ್ಕಾಚಾರವೂ… ಮಾನ ಸಮ್ಮಾನದ ಅಳತೆಯೂ ಮುಗಿತಾಯವಾಗುತ್ತದೆ. ಎಲ್ಲಿಯವರೆಗೆ ಈ ರೀತಿಯ ಅಂಕಾಧಾರಿತವಾದ ಮೌಲ್ಯಮಾಪನ, ಫಲಿತಾಂಶ, ಮಾನ ಸಮ್ಮಾನದ ವ್ಯವಸ್ಥೆ ಇರುತ್ತದೊ ಅಲ್ಲಿಯವರೆಗೆ ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಸವಾಲಾಗಿಯೇ ಇರುತ್ತದೆ.
ಸುಧಾರಣೆ ಆಗಬೇಕಾದ್ದು ಪರೀಕ್ಷೆ , ಮೌಲ್ಯಮಾಪನ ಮತ್ತು ಫಲಿತಾಂಶದ ವ್ಯವಸ್ಥೆಯಲ್ಲಿ. ಅದಕ್ಕಾಗಿ ಅಂಕ ನಮೂದಿಲ್ಲದ ಗ್ರೇಡ್ ಆಧಾರಿತ ಫಲಿತಾಂಶ(ಫೇಲಿಲ್ಲದ) ವ್ಯವಸ್ಥೆ, ಆ ನಿಟ್ಟಿನಲ್ಲಿ ಮೌಲ್ಯಮಾಪನ ಕ್ರಮ, ಅನ್ವಯ ಆಧಾರಿತ ಪ್ರಶ್ನಾ ಪತ್ರಿಕೆ, ತೆರೆದ ಪುಸ್ತಕದ ಪರೀಕ್ಷೆ, ಒಟ್ಟು ಸಾಧನೆಗೆ(ವೈಯಕ್ತಿಕವಾಗಿ ವಿದ್ಯಾರ್ಥಿಗಳ ಮತ್ತು ಸಂಸ್ಥೆಗಳ) ಪುರಸ್ಕಾರ ಮಾನ್ಯತೆ, ಪರೀಕ್ಷೆ ಹಾಗೂ ಮೌಲ್ಯಮಾಪನದಲ್ಲಿ ವಿಕೇಂದ್ರೀಕೃತ ವ್ಯವಸ್ಥೆ….ಇತ್ಯಾದಿಗಳ ಜಾರಿಗೆ ಚಿಂತನೆ ನಡೆಯಬೇಕು.
ಬಹಳ ಮುಖ್ಯವಾಗಿ ಮತ್ತು ಮೊದಲಾಗಿ ಆಗಬೇಕಾದ್ದು ಕಲಿಕಾ ವ್ಯವಸ್ಥೆಯ ಸುಧಾರಣೆ(ಕೆಳ ಹಂತದಿಂದಲೆ). ಈ ಹಿನ್ನೆಲೆಯಲ್ಲಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಪಠ್ಯಗಳ ರೂಪಣೆ, ಅಭ್ಯಾಸ ಪ್ರಶ್ನೆಗಳ ಬದಲಾವಣೆ, ಕಲಿಕೆಗೆ ಮತ್ತು ಬೋಧನೆಗೆ ಹೊರೆಯಾಗುವ ಪುಸ್ತಕದ(ಪಾಠಗಳ)ಭಾರ ಮತ್ತು ವಿಷಯಗಳಲ್ಲಿರುವ ಕಠಿನತೆಯನ್ನು ತಗ್ಗಿಸುವಿಕೆ, ಶಿಕ್ಷಕರ ಲಭ್ಯತೆ, ಶಿಕ್ಷಕರ ಇತರ ಹೊರೆಗಳ(ವಿವಿಧ ರೂಪದ)ತಗ್ಗಿಸುವಿಕೆಯೇ ಮೊದಲಾದ ಕಾರ್ಯಕ್ರಮಗಳ ಕುರಿತ ಚರ್ಚೆ, ಚಿಂತನೆ, ಕಾರ್ಯ ಯೋಜನೆ ಆದ್ಯತೆ ಪಡೆಯಬೇಕು.
ಶಾಲೆಗಳು ಸಮುದಾಯದ ಪ್ರತಿಬಿಂಬ ಎಂಬ ಮಾತಿದೆ. ಆದ್ದರಿಂದ ಪ್ರಸ್ತುತ ಸಾಮಾಜಿಕ ಪರಿಸ್ಥಿತಿ ಶೈಕ್ಷಣಿಕ ವ್ಯವಸ್ಥೆಯದೇ ಒಂದು ರೂಪ ಎನ್ನಬೇಕಾ ಗುತ್ತದೆ. ಚಿಂತನೆಗೆ, ಪ್ರಶ್ನೆಗಳಿಗೆ, ಅವಲೋಕನಕ್ಕೆ, ವಿಮರ್ಶಾ ಸಾಮರ್ಥ್ಯಕ್ಕೆ, ನ್ಯಾಯಾನ್ಯಾಯ ವಿವೇಚನೆಗೆ, ನಿರ್ಧಾರದ ಶಕ್ತಿ ತುಂಬುವುದಕ್ಕೆ, ಸಾಮಾಜಿಕ ಪ್ರಜ್ಞೆ , ಕೌಟುಂಬಿಕ ಮೌಲ್ಯ, ಜೀವನ ಕೌಶಲ, ದುಡಿಮೆಯ ಸಂಸ್ಕೃತಿ…ಹೀಗೆ ಸಾಲು ಸಾಲು ಕೌಶಲ ಮತ್ತು ಮೌಲ್ಯಗಳ ಪೋಷಣೆ ಹಾಗೂ ಬೆಳೆಸುವಿಕೆಗೆ ಶಿಕ್ಷಣ ಕಾರಣವಾಗಬೇಕು.
ಪರೀಕ್ಷಾ ವ್ಯವಸ್ಥೆಯ ಸುಧಾರಣೆಯಿಂದ ಶಿಕ್ಷಣದ ಗುಣಮಟ್ಟ ಎತ್ತರಿಸಲಾಗದು. ಬದಲಾಗ ಬೇಕಾದ್ದು ಪರೀಕ್ಷಾ ರೂಪವೇ ಹೊರತು ಪರೀಕ್ಷಾ ವ್ಯವಸ್ಥೆಯಲ್ಲ. ಅದಕ್ಕಾಗಿ ಮೊದಲು ಬದಲಾಗಬೇಕಾದ್ದು ನಾವೆ.
ರಾಮಕೃಷ್ಣ ಭಟ್ ಚೊಕ್ಕಾಡಿ, ಬೆಳಾಲು