ನವದೆಹಲಿ:ಶಾಲೆಗಳು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣವನ್ನು ಕೇವಲ ನಾಲ್ಕು ಗೋಡೆ ಮಧ್ಯೆ ಸೀಮಿತಗೊಳಿಸದೇ ಅದನ್ನು ಹೊರಜಗತ್ತಿನ ಜತೆ ಸಂಪರ್ಕಿಸುವ ಕೆಲಸ ಮಾಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ (ಸೆಪ್ಟೆಂಬರ್ 11, 2020) ಶಾಲಾ ಶಿಕ್ಷಣ ಕುರಿತ ಶಿಕ್ಷಾ ಪರ್ವ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಪಠ್ಯಪುಸ್ತಕದ ಹೊರೆಯನ್ನು ಕಡಿಮೆ ಮಾಡಲಿದೆ ಮತ್ತು ವಿನೋಧಾರಿತ ಕಲಿಕೆಯ, ಸಂಪೂರ್ಣ ಅನುಭವ ನೀಡುವ ಶಿಕ್ಷಣವಾಗಲಿದೆ. ನಾವು ನೂತನ ಶಿಕ್ಷಣ ಪದ್ಧತಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಹೇಳಿದರು.
2022ರ ಹೊತ್ತಿಗೆ ನಮ್ಮ ವಿದ್ಯಾರ್ಥಿಗಳು ನೂತನ ವಿದ್ಯಾಭ್ಯಾಸ ಕ್ರಮಕ್ಕೆ ಕೈಜೋಡಿಸುವ ಮೂಲಕ ಹೊಸ ಶಿಕ್ಷಣದತ್ತ ಹೆಜ್ಜೆ ಇಡಬೇಕಾಗಿದೆ. ಇದೊಂದು ಭವಿಷ್ಯದ ತಯಾರಿ ಮತ್ತು ವೈಜ್ಞಾನಿಕ ವ್ಯಾಸಂಗ ಕ್ರಮವಾಗಿದೆ. ಇನ್ಮುಂದೆ ಶಿಕ್ಷಣ ಭವಿಷ್ಯದಲ್ಲಿ ಕ್ಲಿಷ್ಟಕರ ಚಿಂತನೆ, ಕ್ರಿಯೇಟಿವಿಟಿ, ಸಂವಹನ ಮತ್ತು ಕುತೂಹಲವನ್ನೊಳಗೊಂಡ ನೂತನ ಕೌಶಲವನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಪ್ರಶಾಂತ್ ಸಂಬರಗಿಗೆ ನೋಟಿಸ್ ನೀಡಿದ ಸಿಸಿಬಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು 5Eಗಳ ಸೂತ್ರವನ್ನು ನೀಡಿದ್ದಾರೆ. ಅವುಗಳೆಂದರೆ ಎಂಗೇಜ್ (ತೊಡಗಿಸಿಕೊಳ್ಳುವಿಕೆ), ಎಕ್ಸ್ ಪ್ಲೋರ್ (ಶೋಧನೆ), ಎಕ್ಸ್ ಪಿರಿಯನ್ಸ್ (ಅನುಭವ), ಎಕ್ಸ್ ಪ್ರೆಸ್ (ಅಭಿವ್ಯಕ್ತಿ) ಮತ್ತು ಎಕ್ಸೆಲ್ (ಶ್ರೇಷ್ಠತೆ)…ಇವು ಮಕ್ಕಳಿಗೆ ನೂತನ ಕಲಿಕೆಯ ವಿಧಾನಗಳಾಗಿವೆ. ಎನ್ ಇಪಿಯನ್ನು ಮುಖ್ಯವಾಗಿ ಮಕ್ಕಳನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಅಭಿವೃದ್ದಿಪಡಿಸಲಾಗಿದ್ದು, ಒತ್ತಡದ ಪಠ್ಯಕ್ರಮದಿಂದ ವಿನೋದ, ಹುಡುಕಾಟ ಮತ್ತು ಚಟುವಟಿಕೆಗೆ ಪೂರಕವಾಗಿರುವಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.