Advertisement

ಶಿಕ್ಷಣಕ್ಕೆ ಹೆಚ್ಚಿನ ಹಣ ಬಳಕೆ ಅಗತ್ಯ

12:51 PM Aug 02, 2018 | Team Udayavani |

ಮೈಸೂರು: ಸರ್ಕಾರಗಳು ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹಂಚಿಕೆ ಮಾಡುವ ಹಣದ ಪ್ರಮಾಣ ತೀರಾ ಕಡಿಮೆಯಾಗಿದ್ದು, ಶಿಕ್ಷಣಕ್ಕಾಗಿ ಶೇ.3.5 ಹಣ ಮಾತ್ರವೇ ನೀಡುತ್ತಿದ್ದು, ಇದು ದೇಶದ ಜಿಡಿಪಿಯಲ್ಲಿ ಶೇ.8 ಆಗಿದೆ ಎಂದು ಭಾರತರತ್ನ ಪ್ರೊ. ಸಿ.ಎನ್‌.ಆರ್‌.ರಾವ್‌ ಬೇಸರ ವ್ಯಕ್ತಪಡಿಸಿದರು. 

Advertisement

ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆ(ಆರ್‌ಐಇ)ಯಲ್ಲಿ  ನಡೆದ 56ನೇ ಸಂಸ್ಥಾಪನಾ ದಿನಾಚರಣೆಯಲ್ಲಿ “ಸರ್ದಾರ್‌ ಪಣಿಕ್ಕರ್‌ ಸ್ಮಾರಕ’ ಕುರಿತು ಮಾತನಾಡಿದ ಅವರು, ದೇಶದಲ್ಲಿ ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಹಣ ಬಳಕೆ ಮಾಡದ ಹೊರತು, ಈ ಕ್ಷೇತ್ರಗಳಿಂದ ಗುಣಮಟ್ಟದ ನಿರೀಕ್ಷೆ ಮಾಡುವುದು ಕಷ್ಟವಾಗಿದೆ.

ಶಿಕ್ಷಣ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಹಣ ಬಳಸುವುದಾಗಿ ಪ್ರತಿ ಪ್ರಧಾನಿಯೂ ಭರವಸೆ ನೀಡಿದರೂ, ಅದನ್ನು ಈಡೇರಿಸುವಲ್ಲಿ ವಿಫ‌ಲರಾಗಿದ್ದಾರೆ. ಈ ರೀತಿಯ ವ್ಯವಸ್ಥೆಗಳಿಂದ ನಮ್ಮ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಹೀಗಾಗಿ ಶಿಕ್ಷಣದಲ್ಲಿ ಮಕ್ಕಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಶಿಕ್ಷಣವನ್ನು ಆನಂದಿಸುವಂತೆ ಮಾಡಬೇಕಿದೆ ಎಂದರು. ವಿಶ್ವದಲ್ಲಿ ಕೇಂಬ್ರಿಡ್ಜ್ ಮತ್ತು ಆಕ್ಸ$#ರ್ಡ್‌ ವಿವಿಗಳು ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಒದಗಿಸುತ್ತಿವೆ. ಅಂತಹ ಶಾಲೆಗಳು ನಮ್ಮಲ್ಲಿ ಎಲ್ಲಿವೆ.

ಸರ್ಕಾರಗಳು ಎಲ್ಲವನ್ನೂ ಮಾಡಿದರೂ, ಪ್ರಮುಖವಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿವೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಹಣವನ್ನು ಪಡೆಯುವ ನಿಟ್ಟಿನಲ್ಲಿ ಹಲವು ವರ್ಷಗಳ ಕಾಲ ಸಾಕಷ್ಟು ಪ್ರಯತ್ನಿಸಲಾಗಿದ್ದರೂ, ವಾಸ್ತವವಾಗಿ ಇಂದಿಗೂ ಸಾಕಾರವಾಗಿಲ್ಲ.

Advertisement

ಶಿಕ್ಷಣದ ಮಹತ್ವವನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಶಿಕ್ಷಣ ಮತ್ತು ಶಿಕ್ಷಕರಿಗೆ ಹೆಚ್ಚು ಗೌರವ, ಪ್ರಾಮುಖ್ಯತೆ ನೀಡುವ ಪ್ರಯತ್ನ ಮಾಡಲಾಗಿದ್ದರೂ, ಇದು ಸಾಕಾರಗೊಳ್ಳಲು ಈವರೆಗೂ ಸಾಧ್ಯವಾಗಿಲ್ಲ ಎಂದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ ಮಾತನಾಡಿ, ಶಿಕ್ಷಣ ಎಂಬುದು ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿ ಬದಲಾಗಿದೆ. ಬಡ ಮತ್ತು ಮಧ್ಯಮ ವರ್ಗದವರು ಗುಣಮಟ್ಟದ ಶಿಕ್ಷಣ ಪಡೆಯುವುದು ಕಷ್ಟಕರವಾಗಿದೆ. ದೇಶದಲ್ಲಿ ಸಾಮಾನ್ಯ ಶಿಕ್ಷಣವನ್ನು ರಚಿಸದ ಹೊರತು ದೇಶಕ್ಕೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗುವುದಿಲ್ಲ.

ಮಕ್ಕಳನ್ನು ಉತ್ತಮ ರೀತಿಯಲ್ಲಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ನಾವು ನಮ್ಮ ಮಕ್ಕಳಿಗೆ ಉತ್ತಮ ಬೋಧನೆ ಮಾಡಲು ಸಾಧ್ಯವಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ವಿಷಾದಿಸಿದರು.

ನಮ್ಮಲ್ಲಿ ಅರೆಕಾಲಿಕ ಉಪನ್ಯಾಸಕರ ಭವಿಷ್ಯ ತಲೆಕೆಳಗಾದ ಸ್ಥಿತಿಯಲ್ಲಿದ್ದು, ಬಹುತೇಕ ಕಾಲೇಜುಗಳಲ್ಲಿ ಶೇ.60-70 ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದು, ಶೇ.30 ಉಪನ್ಯಾಸಕರು ಕಾಯಂ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಾಯಂ ಉಪನ್ಯಾಸಕರಿಗೆ ಲಕ್ಷಗಟ್ಟಲೆ ವೇತನ ನೀಡಲಾಗುತ್ತಿದ್ದು, ಅರೆಕಾಲಿಕ ಉಪನ್ಯಾಸಕರಿಗೆ ಕೇವಲ 6 ಸಾವಿರ ರೂ. ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಮುಂದಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಆರ್‌ಐಐನ ಪ್ರಧಾನ ಮುಖ್ಯಸ್ಥ ಪಿ. ಶ್ರೀಕಾಂತ್‌ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next