ನೆಲಮಂಗಲ: ರಾಜ್ಯದಲ್ಲಿ ಶಿಕ್ಷಣ ಮತ್ತು ಇತರ ಧರ್ಮಕಾರ್ಯಗಳ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ಪ್ರಮುಖವಾದದ್ದು. ಇತರೆ ಧರ್ಮಗಳ ಸಮುದಾಯಗಳ ಮಠಗಳೂ ಉತ್ತಮ ಸೇವೆ ನಡೆಸಿಕೊಂಡು ಬರುತ್ತಿವೆ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆಯ ಶ್ರೀಹೊನ್ನಮ್ಮ ಗವಿ ಮಠದಲ್ಲಿ ನಡೆದ ಜಾತ್ರಾ ಮಹೋತ್ಸವ, ಮಠದಲ್ಲಿ ಅನಾಥಶ್ರಮ, ವೃದ್ಧಾಶ್ರಮ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿಯೇ ಶಿವಗಂಗೆ ಭಾಗದಲ್ಲಿ ಹೆಚ್ಚಿನ ಮಠಗಳು ಇದ್ದು, ಉತ್ತಮ ಸಮಾಜ ಸೇವೆಯನ್ನು ನಡೆಸಿಕೊಂಡು ಬರುತ್ತಿವೆ. ಇಲ್ಲಿನ ಪೀಠಾಧ್ಯಕ್ಷರು ಜನರಿಗೆ ಉತ್ತಮ ಶಿಕ್ಷಣ, ಧಾರ್ಮಿಕ ಬೋಧನೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ತಿಳಿಸುತ್ತಿದ್ದಾರೆ. ಉತ್ತಮ ಸ್ಪಂದನೆ ಹೊಂದಿದ್ದಾರೆ. ಇಲ್ಲಿಯ ಮಠದ ಪೂಜ್ಯರು ಚಿಕ್ಕ ವಯಸ್ಕರಾದರೂ ಹೆಚ್ಚಿನ ಶ್ರಮದಿಂದ ಮಠವನ್ನು ಅಭಿವೃದ್ಧಿ ಪಡಿಸಿದ್ದಾರೆ ಮತ್ತು ಇತರ ಸ್ವಾಮೀಜಿಯವರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ವಿವರಿಸಿದರು.
ಎರಡು ರಥೋತ್ಸವ, ದನಗಳ ಜಾತ್ರೆ: ದೊಡ್ಡಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಶಿವಗಂಗೆಯಲ್ಲಿನ ಶ್ರೀ ಸ್ವಾರ್ಣಾಂಬ ದೇವಿಯ ಶಕ್ತಿ ಅಪಾರವಾದದ್ದು, ಆದ್ದರಿಂದ ದೇವಿಯ ಶಕ್ತಿಯ ಆರಾಧಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ದೇವಿಗೆ ಪ್ರತಿವರ್ಷವು ವಿಶೇಷವಾಗಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕ್ಷೇತ್ರದಲ್ಲಿ ವರ್ಷಕ್ಕೆ ಎರಡು ದನಗಳ ಜಾತ್ರೆ ಮತ್ತು ಎರಡು ರಥೋತ್ಸವಗಳು ನಡೆಯುತ್ತಿವೆ.
ಮುಖ್ಯವಾಗಿ ಸಂಕ್ರಾಂತಿಯ ಹಬ್ಬದಂದು ಗಂಗಾಧರೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ ಮತ್ತು ಏಪ್ರಿಲ್‌ನಲ್ಲಿ ಹೊನ್ನಮ್ಮ ದೇವಿ ಜಾತ್ರೆ ಹಾಗೂ ರಥೋತ್ಸವಗಳು ನಡೆಯುತ್ತವೆ ಎಂದು ಹೇಳಿದರು. ವಿಶೇಷವೆಂದರೆ ಉತ್ಸವಗಳನ್ನು ಸರಕಾರದ ವತಿಯಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲದೆ, ಹೊನ್ನಮ್ಮಗವಿ ಮಠದ ವತಿಯಿಂದ ವಿಶೇಷವಾದ ಮಡೆ (ಆರತಿ)ಮತ್ತು ತೆಪ್ಪೋತ್ಸವ ಸೇರಿದಂತೆ ವಿವಿಧ ಪೂಜೆ ಉತ್ಸವಗಳನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಹೊನ್ನಮ್ಮ ಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ದೊಡ್ಡ ಬಳ್ಳಾಪುರ ಕ್ಷೇತ್ರದ ಶಾಸಕ ವೆಂಕಟರಮಣಪ್ಪ, ಶಿವಗಂಗೆಯ ಗಿರಿಪ್ರದಕ್ಷಿಣೆ ಸಂಘದ ಅಧ್ಯಕ್ಷ ಚಂದ್ರಪ್ಪ, ಸೇವಾಕರ್ತರಾದ ರೂಪ ಶಿವಾನಂದ ಮೂರ್ತಿ, ಹೇಮಲತ ಶುಭಾಸ್, ಲತಾ ಪರಮೇಶ್, ಗೌರಿಶಂಕರ್ ಅಂಚೆಮನೆ ರುದ್ರಪ್ಪ, ಪ್ರಕಾಶ್, ಉಮೇಶ್, ಚೌಡಯ್ಯ, ತಿರುಮಲ್ಲೇಶ್, ರವಿಕುಮಾರ್, ಸಿದ್ದರಾಜು ಭಾಗವಹಿಸಿದ್ದರು.