ಹರಿಹರ: ಚಿಕ್ಕಂದಿನಲ್ಲೇ ಮಕ್ಕಳಿಗೆ ಪೋಷಕರು ಶ್ರೇಷ್ಠ ಶಿಕ್ಷಣ, ಸಂಸ್ಕಾರ ನೀಡಿದರೆ ಮಾತ್ರ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಾಣೇಹಳ್ಳಿ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಶ್ರೀಗಳ ಪ್ರವಚನ ಮಾಲಿಕೆ ನಡೆಯುತ್ತಿರುವ ನಗರದ ಗಿರಿಯಮ್ಮ ಪದವಿ ಕಾಲೇಜು ಆವರಣದಲ್ಲಿ ಭಾನುವಾರ ಸಿದ್ದೇಶ್ವರ ಶ್ರೀಗಳ ಬಳಗ ಮತ್ತು ದೊಡ್ಡಬಾತಿ ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಉಚಿತ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರಕ್ಕೆ ಸಸಿಗಳಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬಹುತೇಕ ಪೋಷಕರು ಕೇವಲ ಶಾಲಾ- ಲೇಜುಗಳಲ್ಲಿ ದೊರೆಯುವ ಲೌಕಿಕ ಶಿಕ್ಷಣವನ್ನೇ ಅವಲಂಬಿಸಿರುತ್ತಾರೆ. ಇದರಿಂದ ಮಕ್ಕಳು ಉತ್ತಮ ಅಂಕ ಗಳಿಸಿ, ಒಳ್ಳೆಯ ಉದ್ಯೋಗ ನಂತರ ಹಣವನ್ನೂ ಸಂಪಾದನೆ ಮಾಡಬಹುದು. ಆದರೆ, ಬದುಕಿನಲ್ಲಿ ನೆಮ್ಮದಿಯಿಂದ ಇರುತ್ತಾರೆ ಎಂಬುದು ಖಾತ್ರಿಯಿಲ್ಲ ಎಂದರು. ಶಾಲಾ ಶಿಕ್ಷಣದ ಜತೆಗೆ ಪೋಷಕರು ಮಕ್ಕಳಿಗೆ ಸಚ್ಚಾರಿತ್ರ, ಸದ್ಭಾವನೆ ರೂಢಿಸಿಕೊಳ್ಳುವಂತಹ ನೈತಿಕ ಶಿಕ್ಷಣವನ್ನೂ ನೀಡಬೇಕು.
ನಗರದಲ್ಲಿ ಆಯೋಜಿಸಿರುವ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಪ್ರವಚನ ಇದಕ್ಕೆ ಅತ್ಯುತ್ತಮ ಅವಕಾಶವಾಗಿದೆ. ಯಾವುದೇ ಜಾತಿ, ಧರ್ಮಗಳಿಗೆ ಸೀಮಿತವಾಗದ ಶ್ರೀಗಳ ಪ್ರವಚನ ಪ್ರತಿಯೊಬ್ಬರಿಗೂ ಅತ್ಯುತ್ತಮ ರೀತಿಯಲ್ಲಿ ಬದುಕುವುದನ್ನು ಕಲಿಸಿಕೊಡುತ್ತದೆ ಎಂದರು.
ಮನುಷ್ಯ ದೈಹಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕವಾಗಿ ಬಲಿಷ್ಠನಾಗಿದ್ದರೆ ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಸರ್ವ ರೀತಿಯಲ್ಲಿ ಸಮರ್ಥಗೊಳಿಸುವ ಶಕ್ತಿ ಇರುವ ಶ್ರೀಗಳ ಪ್ರವಚನವನ್ನು ಕುಟುಂಬದ ಎಲ್ಲ ಸದಸ್ಯರೂ ಬಂದು ಕೇಳಿದರೆ ಶ್ರೀಗಳ ಹಿತವಚನಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.
ತಪೋವನ ಆಯುರ್ವೇದ ಆಸ್ಪತ್ರೆಯ ವೈದ್ಯರ ತಂಡ ಪ್ರವಚನಕ್ಕೆ ಕೇಳಲು ಆಗಮಿಸಿದ್ದ ಸಾವಿರಾರು ಭಕ್ತ ಜನರ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿದರು. ಸಿದ್ದೇಶ್ವರ ಶ್ರೀಗಳು, ಸೇವಾ ಬಳಗದ ಗೌರವಾಧ್ಯಕ್ಷ ಎನ್.ಜಿ. ನಾಗನಗೌಡ, ಅಧ್ಯಕ್ಷ ಶರತ್ ಕೊಣ್ಣೂರ್, ಪ್ರಧಾನ ಕಾರ್ಯದರ್ಶಿ ಎಸ್.ಎಚ್. ಪ್ಯಾಟಿ, ದಿನೇಶ್ ಕೊಣ್ಣೂರ್, ಆರ್. ಪ್ರಕಾಶ್, ಬೆಳ್ಳೂಡಿ ರಾಮಚಂದ್ರಪ್ಪ, ಆರ್.ಆರ್. ಕಾಂತರಾಜ್ ಶ್ರೇಷ್ಠಿ, ಎಂ.ಆರ್. ಸತ್ಯನಾರಾಯಣ, ತಪೋವನದ ಅಧ್ಯಕ್ಷ ಶಶಿಕುಮಾರ್ ಮತ್ತಿತತರಿದ್ದರು.