Advertisement

ಶಿಕ್ಷಣ ನೀತಿ ಬಡವರ ಮಕ್ಕಳ ವಿರುದ್ಧದ ಕುತಂತ್ರ : ಪದ್ಮಶ್ರೀ ಡಾ.ಗಣೇಶ ದೇವಿ

06:10 PM Sep 24, 2021 | Team Udayavani |

ಧಾರವಾಡ : ಪಾಶ್ಚಿಮಾತ್ಯ ಜ್ಞಾನವನ್ನು ವಿರೋಧಸುವ ಬಿಜೆಪಿ ಶಾಸಕರು, ಸಚಿವರ ಬಹುತೇಕ ಮಕ್ಕಳು ವಿದೇಶಗಳಲ್ಲಿ ಓದುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಬಡವರ ಮಕ್ಕಳನ್ನು ವಿಜ್ಞಾನ ಮತ್ತು ವೈಚಾರಿಕ ಶಿಕ್ಷಣದಿಂದ ದೂರ ಮಾಡುವ ಕುತಂತ್ರವಾಗಿದೆ ಎಂದು ಭಾಷಾ ಶಾಸ್ತ್ರಜ್ಞ ಪದ್ಮಶ್ರೀ ಡಾ|ಗಣೇಶ ಎನ್ ದೇವಿ ಹೇಳಿದರು.

Advertisement

ನಗರದ ಸಾಹಿತ್ಯ ಭವನದಲ್ಲಿ ಎಸ್ಎಫ್ಐ-ಡಿವೈಎಫ್ಐ ಜಿಲ್ಲಾ ಸಮಿತಿಗಳು ಹಮ್ಮಿಕೊಂಡಿದ್ದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಪಾಶ್ಚಿಮಾತ್ಯ ಶಿಕ್ಷಣದ ನಿಯಂತ್ರಣ ಮತ್ತು ಪ್ರಾಚೀನ ಶಿಕ್ಷಣ ವ್ಯವಸ್ಥೆಯನ್ನು ಸನಾತನ ಧರ್ಮದ ಆಧಾರದಲ್ಲಿ ರಾಷ್ಟ್ರ ಕಟ್ಟುವ ಗುರಿಯನ್ನು ಹೊಂದಿದೆ. ಸನಾತನ ಧರ್ಮ ಎಂದರೆ ಮನುಸ್ಮೃತಿ ಆಧಾರದಲ್ಲಿ ಮಹಿಳೆಯರು ಹಾಗೂ ಶೋಷಿತ ಜನಾಂಗಗಳಿಗೆ ಶಿಕ್ಷಣದ ಹಕ್ಕನ್ನು ಮೊಟಕುಗೊಳಿಸುವ ಹುನ್ನಾರವಾಗಿದೆ ಎಂದರು.

ದೇಶದಲ್ಲಿನ ಒಕ್ಕೂಟ ವ್ಯವಸ್ಥೆಯನ್ನೇ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಕಗ್ಗೊಲೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ.

ಸಂವಿಧಾನದ ಶೆಡ್ಯೂಲ್ 7 ರಲ್ಲಿ ಶಿಕ್ಷಣ ಬರುವುದರಿಂದ ಶಿಕ್ಷಣಕ್ಕೆ ಸಂಬಂಽಸಿದ ನೀತಿ ನಿರೂಪಣೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಲು ಅವಕಾಶವಿದೆ. ಆದರೆ ಎನ್ಇಪಿಯಡಿ ರಾಷ್ಟ್ರೀಯ ಶಿಕ್ಷಾ ಆಯೋಗ ರಚನೆ ಮಾಡುವುದರ ಮೂಲಕ ರಾಜ್ಯಗಳಿಗೆ ಇರುವ ಶಿಕ್ಷಣ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

ಇದನ್ನೂ ಓದಿ :ಸಭಾಧ್ಯಕ್ಷರು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸಿದರೆ ಆ ಹುದ್ದೆಗೆ ಮಹತ್ವವೇನಿದೆ : ಸಿದ್ದು

ಶಿಕ್ಷಣ ತಜ್ಞ ಶಂಕರ ಹಲಗತ್ತಿ ಮಾತನಾಡಿ, ಒಕ್ಕೂಟ ಸರಕಾರವು ಜಾರಿ ಮಾಡುತ್ತಿರುವ ಎನ್ಇಪಿಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣದಲ್ಲಿ ಕೌಶಲ್ಯಾಭಿವೃದ್ದಿ ಕಲಿಸುವ ಘೋಷಣೆಯ ಹಿಂದೆ ಬಹುರಾಷ್ಟ್ರೀಯ ಕಾರ್ಪೋರೆಟ್ ಕಂಪೆನಿಗಳಿಗೆ ಕೇವಲ ಕಾರ್ಮಿಕರನ್ನು ಸೃಷ್ಟಿಸುವ ನೀತಿ ಹೊಂದಿದೆ. ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲಿ ಕಲಿಸಬೇಕು ಎನ್ನುವ ಈ ಕಾಯಿದೆಯು ಖಾಸಗಿ ಶಾಲೆಗಳಲ್ಲಿ ಮಾತೃ ಭಾಷೆಯಲ್ಲಿ ಕಲಿಸಬಹುದು ಎಂದು ಸೂಚಿಸುತ್ತಿರುವುದರ ಕುಟಿಲತೆಯನ್ನು ಅರಿಯಬೇಕು ಎಂದರು.

ಕವಿವಿ ನಿವೃತ್ತ ಕುಲಸಚಿವ ಡಾ| ಕೆ.ಆರ್.ದುರ್ಗಾದಾಸ್ ಮಾತನಾಡಿ, ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ಒಕ್ಕೂಟ ಸರಕಾರವು, ಕೇವಲ ಒಂದು ಪಕ್ಷದ ವಕ್ತಾರನಾಗಿ ಕೆಲಸ ಮಾಡುತ್ತಿದೆಯೆ ವಿನಃ, ದೇಶದ ಸರ್ವ ಜನರನ್ನು ಸಮಾನವಾಗಿ ನೋಡಲು ವಿಷಯದಿಂದ ಹಿಂದೆ ಸರಿದಿದೆ. ಆಳುವವರ ಗುರಿಗೆ ತಕ್ಕಂತೆ ಮಕ್ಕಳನ್ನು ಬಳಸಿಕೊಳ್ಳಲು ಎನ್ಇಪಿ ಮೂಲಕ ಯೋಜನೆ ರೂಪಿಸಿರುವರು ಎಂದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತೆ ಶಾರದಾ ದಾಬಡೆ, ಶಿಕ್ಷಕರ ಸಂಘಟನೆಯ ರಾಷ್ಟ್ರೀಯ ಮುಖಂಡ ಬಸವರಾಜ ಗುರಿಕಾರ, ಗೋಪಾಲ ದಾಬಡೆ, ಕೆ.ವಾಸುದೇವರೆಡ್ಡಿ, ಕೆ.ಎಚ್ ಪಾಟೀಲ ಮಾತನಾಡಿದರು.

ಸಾಹಿತಿ ಎಸ್ ನಾಗಕಲಾಲ್, ಸಿಐಟಿಯು ಕಾರ್ಯದರ್ಶಿ ಮಹೇಶ ಪತ್ತಾರ, ಎ.ಎಂ ಖಾನ್, ಡಾ|ಆರ್.ಎನ್ ಪಾಟೀಲ, ಕೀರ್ತಿವತಿ, ರಾಜೇಶ್ವರಿ ಜೋಷಿ, ಬಿ.ಎನ್.ಪೂಜಾರಿ, ಎಂ.ವಿ ಗಡಾದ ಇದ್ದರು. ಅಮರೇಶ ಕಡಗದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಸವರಾಜ ಸಾರಥಿ ಸ್ವಾಗತಿಸಿ, ನಿರೂಪಿಸಿದರು. ಗಣೇಶ ರಾಠೋಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next