ಕಲಬುರಗಿ: ಬಲಿಷ್ಠ ರಾಷ್ಟ್ರ ನಿರ್ಮಾಣವಾಗುವಲ್ಲಿ ಶಿಕ್ಷಣ ಪಾತ್ರವೇ ಬಹು ಮುಖ್ಯಪಾತ್ರ ವಹಿಸುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರ ಹೊರ ವಲಯ ನಂದೂರ ಕೈಗಾರಿಕಾ ಪ್ರದೇಶ ಬಳಿಯ ನ್ಯಾಷನಲ್ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗುಣಮಟ್ಟದ ಶಿಕ್ಷಣ ನೀಡುವ ವಿದ್ಯಾ ಸಂಸ್ಥೆ ಭವಿಷ್ಯದಲ್ಲಿ ಉತ್ತಮ ಪ್ರಜೆಗಳನ್ನು ನೀಡುತ್ತದೆಯಲ್ಲದೇ ಈ ನಿಟ್ಟಿನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಸಾಕಷ್ಟು ಶ್ರಮ ವಹಿಸಿ ಇಂತಹ ನ್ಯಾಷನಲ್ ಪಬ್ಲಿಕ್ ಶಾಲೆ ತಂದಿದ್ದಾರೆ ಎಂದು ಶ್ಲಾಘಿಸಿದರು.
ನಗರದಲ್ಲಿ ಹೆಸರಾಂತ ಶಿಕ್ಷಣ ಸಂಸ್ಥೆಗಳು ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನ ರೂಪಿಸುತ್ತಿದೆ. ಅವುಗಳ ಸಾಲಿಗೆ ನ್ಯಾಷನಲ್ ಪಬ್ಲಿಕ್ ಶಿಕ್ಷಣ ಸಂಸ್ಥೆ ಸೇರಿರುವುದು ಸಂತೋಷದಾಯಕವಾಗಿದೆ ಎಂದು ಹೇಳಿದರು.
ನ್ಯಾಷನಲ್ ಪಬ್ಲಿಕ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಡಾ| ಕೆ.ಪಿ. ಗೋಪಾಲಕೃಷ್ಣ, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಡಾ| ಅಜಯಸಿಂಗ್, ರಾಜಕುಮಾರ ಪಾಟೀಲ ತೇಲ್ಕೂರ, ಬಿ.ಜಿ. ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ, ಹೈದ್ರಾಬಾದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ ಮುಂತಾದವರು ವೇದಿಕೆ ಮೇಲಿದ್ದರು.
ಹೆಡಗಿಮದ್ರಿಯ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ, ಎಚ್‌ಕೆಇ ಮಾಜಿ ಅಧ್ಯಕ್ಷರು ಹಾಗೂ ನ್ಯಾಷನಲ್ ಪಬ್ಲಿಕ್ ಶಾಲೆ ಅಧ್ಯಕ್ಷ ಶಶೀಲ ನಮೋಶಿ ಅಧ್ಯಕ್ಷತೆ ವಹಿಸಿ, ಈ ಭಾಗದಲ್ಲೂ ಮುಂದುವರಿದ ನಗರಗಳಲ್ಲಿ ಸ್ಪರ್ಧಾತ್ಮಕವಾಗಿ ಮಕ್ಕಳನ್ನು ರೂಪಿಸಲು ಈ ನೂತನ ಶಾಲೆ ಶಕ್ತಿ ನೀಡಲಿದೆ ಎಂದರು.
ನಗರದ ವಿವಿಧ ಗಣ್ಯರು, ವಿವಿಧ ರಾಜಕೀಯ ಪಕ್ಷಗಳು ಮುಖಂಡರು, ಪ್ರಮುಖರು, ಶಾಲೆ ಆಡಳಿತ ಮಂಡಳಿತ ನಿರ್ದೇಶಕರು, ಪ್ರಾಚಾರ್ಯರು, ಸಿಬ್ಬಂದಿ ಹಾಜರಿದ್ದರು.