Advertisement

ಸಂವಿಧಾನಕ್ಕೆ ಅಗೌರವ ; ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು

11:25 AM Nov 14, 2019 | Hari Prasad |

ಬೆಂಗಳೂರು: ಸಂವಿಧಾನ ದಿನದ ಆಚರಣೆಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಯ ಕೈಪಿಡಿಯನ್ನು ಪರಾಮರ್ಶಿಸದೆ ಶಿಕ್ಷಣ ಇಲಾಖೆಯ ವೆಬ್ ಸೈಟ್ಗೆ ಅಪಲೋಡ್ ಮಾಡಿ ಶಿಕ್ಷಣ ಇಲಾಖೆಗೆ ಕೆಟ್ಟ ಹೆಸರು ತಂದ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ನಿರ್ದೇಶಕ ಶ್ರೀಮಣಿ ಮತ್ತು ಮೂವರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರೌಢ ಶಿಕ್ಷಣ ಇಲಾಖೆ ನಿರ್ದೇಶಕರನ್ನು ಅಮಾನತು ಮಾಡಿದಲ್ಲದೇ ಇವರ ಮೇಲೆ ಇಲಾಖಾ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

Advertisement

ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬ ವಿಚಾರವನ್ನು ಆ ಕೈಪಿಡಿಯಲ್ಲಿ ಬರೆಯಲಾಗಿತ್ತು. ಕೋರಮಂಗಲದ ಸಿಎಂಸಿಎ ಎಂಬ ಖಾಸಗಿ ಸಂಸ್ಥೆ ಈ ಕೈಪಿಡಿ ತಯಾರಿಸಿತ್ತು. ಹಲವು ಜನರಿಂದ ಕೂಡಿದ್ದ ಸಂವಿಧಾನ ರಚನಾ ಸಭೆ ಎಂದು ಕರೆಯಲ್ಪಟ್ಟ ತಂಡದಿಂದ ಭಾರತೀಯ ಸಂವಿಧಾನವನ್ನು ರಚಿಸಲಾಗಿತ್ತು. ಆದರೆ ಈ ವಿಚಾರ ನಮ್ಮಲ್ಲಿ ಸಾಕಷ್ಟು ಜನರಿಗೆ ತಿಳಿದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಮಾತ್ರವಲ್ಲದೇ ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ನಮ್ಮ ಸಂವಿಧಾನದ ಪಿತಾಮಹ ಎಂದು ಕರೆಯುತ್ತೇವೆ. ಆದರೆ ಹಲವು ಸಮಿತಿಗಳು ಬರೆದಂಥದ್ದನ್ನು ನೋಡಿ, ಅವುಗಳನ್ನು ಒಟ್ಟುಗೂಡಿಸಿ ನಮ್ಮ ಸಂವಿಧಾನದ ಅಂತಿಮ ಕರಡನ್ನು ತಯಾರಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಾರ್ಯವಾಗಿತ್ತು. ಅವರು ಕರಡು ಸಮಿತಿಯ ಅಧ್ಯಕ್ಷರಾಗಿದ್ದರಷ್ಟೇ ಎಂದು ಬರೆಯಲಾಗಿತ್ತು.

ಈ ಕೈಪಿಡಿಯನ್ನು ವೆಬ್ಸೈಟ್ಗೂ ಅಪ್ಲೋಡ್ ಮಾಡಲಾಗಿತ್ತು. ಇದಕ್ಕೆ ದೇಶಾದ್ಯಂತ ಆಕ್ಷೇಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಾಲತಾಣದಿಂದ ತೆಗೆದು ಹಾಕಲಾಗಿದೆ. ಬಳಿಕ ಈ ಎಡವಟ್ಟಿಗೆ ರಾಜ್ಯಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖೇದ ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅವರ ಬಗ್ಗೆ ದೇಶದ ಜನರಲ್ಲಿ ಗೌರವ ಇದೆ. ಅಂತಹ ಮಹಾನ್ ನಾಯಕನಿಗೆ ಅವಮಾನವಾಗುವುದನ್ನು ಸಹಿಸಲು ಆಗದು. ಇಲಾಖೆಯ ನಿರ್ದೇಶಕರಿಂದ ಕರ್ತವ್ಯ ಲೋಪವಾಗಿದ್ದು, ಕೂಡಲೇ ಅವರನ್ನು ಅಮಾನತು ಮಾಡಲಾಗುತ್ತದೆ ಎಂದು ಹೇಳಿದ್ದರು.

ಅಂಬೇಡ್ಕರ್ ಕುರುತು ಆಕ್ಷೇಪಾರ್ಹ ಹೇಳಿಕೆಗಳು ಕೈಪಿಡಿಯಲ್ಲಿ ಬಂದ ಬಳಿಕ ರಾಜ್ಯ ಸರಕಾರದ ನಡೆಯನ್ನು ಖಂಡಿಸಲಾಗಿತ್ತು. ಬಿಜೆಪಿ ಅಂಬೇಡ್ಕರ್ ಹೆಸರನ್ನು ಕೆಡಿಸಲು ಹೊರಟಿದೆ ಎಂದು ಆಕ್ರೋಶದ ಮಾತುಗಳು ಹೊರ ಬಂದಿತ್ತು. ಇದರಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಯನ್ನು ಮನಗಂಡ ಸರಕಾರ ಇಲಾಖಾ ನಿರ್ದೇಶಕರನ್ನು ಅಮಾನತುಗೊಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next