Advertisement

ಈ ವರ್ಷದಿಂದಲೇ 5, 8ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ: ನಾಗೇಶ್‌

09:18 PM Oct 13, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಕಲಿಕೆ ತರಗತಿಗೆ ತಕ್ಕಂತೆ ಇಲ್ಲವೆಂಬ ವಾದವಿದೆ. ಹೀಗಾಗಿ  5 ಮತ್ತು 8ನೇ ತರಗತಿಯಲ್ಲಿ ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ ಚರ್ಚಿಸಲಾಗುತ್ತಿದೆ. ಅಂತಿಮ ರೂಪುರೇಷೆ ಸಿದ್ಧಪಡಿಸಿ ಈ ವರ್ಷದಿಂದಲೇ ಪರೀಕ್ಷೆ ಜಾರಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

Advertisement

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತರಗತಿವಾರು ಮತ್ತು ವಯಸ್ಸಿಗೆ ಅನುಗುಣ ವಾಗಿ ಮಕ್ಕಳ ಕಲಿಕೆಯಾಗಬೇಕು ಎಂಬುದು ಇಲಾಖೆಯ ಉದ್ದೇಶ. ಈ ಹಿನ್ನೆಲೆಯಲ್ಲಿ ಕಲಿಕೆಗೆ ಒತ್ತು ನೀಡಿ ಮೌಲ್ಯಾಂಕನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

1ನೇ ತರಗತಿಗೆ ವಯೋಮಿತಿಗೆ 2 ವರ್ಷ ವಿನಾಯಿತಿ:

ರಾಜ್ಯದ ಶಾಲೆಗಳಲ್ಲಿ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು 6 ವರ್ಷ ಕಡ್ಡಾಯವಾಗಿ ತುಂಬಿರಬೇಕು ಎಂಬ ನಿಯಮವನ್ನು 2024-25ನೇ ಸಾಲಿನಿಂದ ಅಧಿಕೃತವಾಗಿ ಜಾರಿ ಮಾಡ ಲಾಗುತ್ತದೆ. ದಾಖಲಾತಿ ಸಂಬಂಧ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಆದರೆ ಕೆಲವು ಪೋಷಕರು ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 2 ವರ್ಷ ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ಮತ್ತೂಂದೆಡೆ, ಒಂದನೇ ತರಗತಿ ದಾಖಲಾತಿಗೆ 6 ವರ್ಷ ತುಂಬಿರಬೇಕು ಎಂಬುದು ಕೇಂದ್ರ ಸರ್ಕಾರದ ನಿಯಮ. ಈ ನಿಯಮ ದೇಶದ 23 ರಾಜ್ಯಗಳಲ್ಲಿ ಅನುಷ್ಠಾನವಾಗಿದೆ. ರಾಜ್ಯದಲ್ಲಿ ಮತ್ತೂಮ್ಮೆ ಬದಲಾವಣೆ ಅಥವಾ ವಿನಾಯಿತಿ ನೀಡಲು ಸಾಧ್ಯವಿಲ್ಲ. 2023-24ನೇ ಸಾಲಿನಿಂದಲೇ ಅನುಷ್ಠಾನವಾಗಲಿದೆ ಎಂಬ ಮಾಹಿತಿ ಕೂಡ ಇದೆ.

Advertisement

 ಪರೀಕ್ಷೆ ಅಗತ್ಯ ಇದೆಯೆ?:

ವಿದ್ಯಾರ್ಥಿಗಳಿಗೆ ಈಗಾಗಲೇ ಮಾಸಿಕ ಪರೀಕ್ಷೆ, ಮಧ್ಯವಾರ್ಷಿಕ ಹಾಗೂ ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರ ಜತೆಗೆ 5ನೇ ತರಗತಿಗೆ ಜಿಲ್ಲಾ ಮಟ್ಟದಲ್ಲಿ ಮತ್ತು 8ನೇ ತರಗತಿಗೆ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸುವುದು ಅನಾವಶ್ಯಕ. ರಾಜ್ಯಮಟ್ಟದ ಪರೀಕ್ಷೆ  ಎಂದಾಗ ವಿದ್ಯಾರ್ಥಿಗಳು ಸಹಜವಾಗಿ ಪರೀಕ್ಷಾ ಭಯಕ್ಕೆ ಒಳಗಾಗುತ್ತಾರೆ. ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ 8ನೇ ತರಗತಿ ವರೆಗೂ ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮವಿದೆ. ಹೀಗಿದ್ದಾಗ ಪರೀಕ್ಷೆ ಅಗತ್ಯ ಇದೆಯೇ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಪರೀಕ್ಷೆ ನಡೆಸುವುದನ್ನು ಸಮರ್ಥಿಸಿಕೊಂಡಿರುವ ಸಚಿವರು, ಮಕ್ಕಳಲ್ಲಿ ಪರೀಕ್ಷಾ ಭಯ ಇಲ್ಲದಿರುವುದರಿಂದಲೇ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಶಿಕ್ಷಕರು ಕೂಡ ಮಕ್ಕಳಿಗೆ ಕಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.  ಈ ಬಗ್ಗೆ ದೂರುಗಳು ಕೇಳಿಬಂದಿವೆ. ಪರೀಕ್ಷೆ ಎಂದಾಕ್ಷಣ ಕೊನೆ ಪಕ್ಷ ಪಾಸ್‌ ಆಗಬೇಕು ಎಂಬ ಆಲೋಚನೆಯಿಂದ ಕಲಿಕೆಯಲ್ಲಿ ತೊಡಗುತ್ತಾರೆ ಎಂಬ ಸಮರ್ಥನೆ ನೀಡಿದರು ಎಂದು ಹೇಳಲಾಗಿದೆ.

ವೆಬ್‌ ಪೋರ್ಟಲ್‌ಗೆ ಚಾಲನೆ :

ಬೆಂಗಳೂರು: ಶಿಕ್ಷಣ ಇಲಾಖೆಯ ಯೋಜನೆಗಳು, ಕಾರ್ಯಕ್ರಮಗಳ ಪ್ರಗತಿಯನ್ನು ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತಿಳಿಸುವ “ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರ ವೆಬ್‌ ಪೋರ್ಟಲ್‌’ ಹಾಗೂ ಶಿಕ್ಷಕರ ಕಲ್ಯಾಣ ನಿಧಿಯ ಆನ್‌ಲೈನ್‌ ಸೇವೆಗೆ ಇಲಾಖೆ ಸಚಿವ ಬಿ.ಸಿ. ನಾಗೇಶ್‌ ಗುರುವಾರ ಚಾಲನೆ ನೀಡಿದರು.  ಇಲಾಖೆಯ ಸಂಪೂರ್ಣ ಮಾಹಿತಿಯನ್ನು  https://schooleducationminister.karnataka.gov.in  ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು ಎಂದು ಹೇಳಿದರು.

31 ಕೋಟಿ ಮರುಪಾವತಿ:

ಶಿಕ್ಷಕರು ಮತ್ತು ಮಕ್ಕಳ ಕಲ್ಯಾಣ ನಿಧಿಯಲ್ಲಿದ್ದ 35 ಕೋಟಿ ರೂ.ಗಳನ್ನು ಆದಾಯ ತೆರಿಗೆ ಇಲಾಖೆಯವರು ಸರಿಯಾದ ದಾಖಲೆಗಳು ಇಲ್ಲವೆಂದು ಜಪ್ತಿ ಮಾಡಿದ್ದರು. ಇದರಲ್ಲಿ 31 ಕೋಟಿ ರೂ.ಗಳನ್ನು ಮರಳಿ ಪಡೆದಿದ್ದೇವೆ ಎಂದು ಇಲಾಖೆ ಆಯುಕ್ತ ಡಾ| ಆರ್‌.ವಿಶಾಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next