ಉಡುಪಿ: ಕೇವಲ ಪದವಿಗಳಿಂದ ಉತ್ತಮ ಮನುಷ್ಯನಾಗಲು ಸಾಧ್ಯವಿಲ್ಲ. ಉತ್ತಮ ಮನುಷ್ಯನನ್ನಾಗಿ ರೂಪಿಸುವ ಶಿಕ್ಷಣ ಅಗತ್ಯ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಶ್ರೀಕೃಷ್ಣಮಠದಲ್ಲಿ ಮಂಗಳವಾರ ಅದಮಾರು ಮಠ ಪರ್ಯಾಯದ ವಿಶ್ವಾರ್ಪಣಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಈಗಿನ ನೂತನ ಶಿಕ್ಷಣ ನೀತಿಯಲ್ಲಿ ಕೌಶಲಕ್ಕೆ ಆದ್ಯತೆ ಕೊಡಲಾಗುತ್ತಿದೆ. ಶಿಕ್ಷಣದಲ್ಲಿ ಸಂಸ್ಕಾರವನ್ನು ಬೋಧಿಸುವ ಶಿಕ್ಷಕರು ತಾಯಿ ಪ್ರೀತಿಯನ್ನು ಮಕ್ಕಳ ಮೇಲೆ ತೋರಬೇಕು. ಭಾರತದ ಆತ್ಮವೇ ತ್ಯಾಗ ಮತ್ತು ಸೇವೆ. ಇದಕ್ಕನುಗುಣವಾಗಿ ಶಿಕ್ಷಣ ಕ್ಷೇತ್ರಗಳು ರೂಪುಗೊಳ್ಳಬೇಕು ಎಂದರು.
ಸಮಾಜಕ್ಕೂ, ಮಠಗಳಿಗೂ ಅವಿನಾ ಭಾವ ಸಂಬಂಧವಿದೆ. ಈ ಸಂಬಂಧ ನೀರು ಮತ್ತು ಮೀನಿನಂತೆ ಇರಬೇಕು. ಕರ್ನಾಟಕದಲ್ಲಿ ಉತ್ತಮ ಸಾಕ್ಷರತೆ ಇದ್ದರೆ ಅದಕ್ಕೆ ಮಠಗಳ ಕೊಡುಗೆ ಅಪಾರ ವಾದುದು. ಇಂತಹ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ ಅದಮಾರು ಮಠದ ಶ್ರೀವಿಬುಧೇಶತೀರ್ಥರ ಕೊಡುಗೆ ಅನುಪಮವಾದುದು ಎಂದು ಹೇಳಿದರು.
ಇದನ್ನೂ ಓದಿ:“ಭಾರತ ವಿರೋಧಿ ಕೃತ್ಯ’: 20 ಯೂಟ್ಯೂಬ್ ಚಾನೆಲ್, 2 ವೆಬ್‌ಸೈಟ್ ಬ್ಲಾಕ್
ಪರ್ಯಾಯ ಶ್ರೀಈಶ ಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ಟಿ. ದೇವಿದಾಸ್ ಉಪನ್ಯಾಸ ನೀಡಿದರು. ಡಾ| ವಿ.ಎಸ್. ಆಚಾರ್ಯರ ಪರವಾಗಿ ಪುತ್ರ ಡಾ| ರವಿರಾಜ ಆಚಾರ್ಯ, ಚೆನ್ನೈ ಉದ್ಯಮಿ ಗಳಾದ ಕೆ. ಲಕ್ಷ್ಮೀನಾರಾಯಣ ರಾವ್, ರಾಮಪ್ರಸಾದ ಭಟ್ ಅವರನ್ನು ಪುರಸ್ಕರಿಸಲಾಯಿತು. ಪೌರಕಾರ್ಮಿಕರಾದ ತಾರಾಮಿ ಬಾಯಿ, ಲಕ್ಷ್ಮಣರನ್ನು ಸಮ್ಮಾನಿ ಸಲಾಯಿತು. ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.