ಚನ್ನಪಟ್ಟಣ: ವಿದ್ಯಾರ್ಥಿಗಳ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಜೀವನದ ಸವಾಲುಗಳನ್ನು ಯಶಸ್ವಿಯಾಗಿಸಲು ಶಿಕ್ಷಣ ಬಹು ಮುಖ್ಯ ಸಾಧನ ಎಂದು ಚೆನ್ನಾಂಬಿಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪೂರ್ಣಿಮಾ ತಿಳಿಸಿದರು.
ಪಟ್ಟಣದ ಚೆನ್ನಾಂಬಿಕ ಪದವಿ ಕಾಲೇಜಿನ ಆವರಣದಲ್ಲಿ ಪ್ರಥಮ ಬಿ.ಕಾಂ. ವಿದ್ಯಾರ್ಥಿಗಳಿಗೆ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿ, ಮಾನಸಿಕ ಮತ್ತು ದೈಹಿಕವಾಗಿ ಸದೃಢರಾದ ಯುವ ಜನತೆ, ಈ ದೇಶದ ಅತ್ಯಮೂಲ್ಯ ಸಂಪತ್ತು. ಸಮಯದ ಸದ್ಬಳಕೆಯ ಮೂಲಕ ತಮ್ಮ ಭವಿಷ್ಯದ ದಿನಗಳನ್ನು ಉಜ್ವಲಗೊಳಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಯುವಕರಿಗೆ ಜವಾಬ್ದಾರಿಯ ಅರಿವಿರಲಿ: ಕಾಲೇಜಿನ ವ್ಯವಸ್ಥಾಪಕ ಬಾಲಕೃಷ್ಣ ಮಾತನಾಡಿ, ಯುವ ಜನರಿಗೆ ಜವಾಬ್ದಾರಿಗಳ ಅರಿವಿರಬೇಕು. ಸಮಾಜಕ್ಕೆ ತನ್ನದೇ ಆದ ಕಾಣಿಕೆ ನೀಡುವ ಮೂಲಕ ತಾಯಿ ನೆಲದ ಋಣ ತೀರಿಸಬೇಕು ಎಂದರು.
ಸಮಾಜದ ನಿರೀಕ್ಷೆಗೆ ಬದ್ಧರಾಗಿ: ಪ್ರಾಂಶುಪಾಲ ವಿಜಯ್ ರಾಂಪುರ ಮಾತನಾಡಿ, ವಿದ್ಯಾರ್ಥಿಗಳು ಪೋಷಕರ ಹಾಗೂ ಸಮಾಜದ ನಿರೀಕ್ಷೆಗಳಿಗೆ ಬದ್ಧರಾಗಿರಬೇಕು. ಕಿರಿಯ ವಿದ್ಯಾರ್ಥಿಗಳಲ್ಲಿ ವಿಶ್ವಾಸ ವೃದ್ಧಿಸುವ ಮೂಲಕ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗಬೇಕು. ವ್ಯಾಸಂಗದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಯಾಶೀಲ ಬದುಕನ್ನು ರೂಡಿಸಿಕೊಳ್ಳಬೇಕು. ವೈಜ್ಞಾನಿಕ ಹಾಗೂ ವೈಚಾರಿಕ ನಿಲುವನ್ನು ಹೊಂದುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಹೇಳಿದರು.
ಪ್ರತಿಭಾವಂತರಿಗೆ ಸನ್ಮಾನ: ಈ ಸಂದರ್ಭದಲ್ಲಿ ಅಂತಿಮ ಬಿ.ಕಾಂ ಪದವಿ ಪರೀಕ್ಷೆಯಲ್ಲಿ ಶೇಕಡ ನೂರರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿ ಸಾಧನೆಗೈದ 16 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ಗಾಯಕ ಚೌ.ಪು.ಸ್ವಾಮಿ, ಉಪನ್ಯಾಸಕರಾದ ಜಿ.ಕೆ. ಸೀಮಾ, ಎಚ್.ಕೆ.ದಿನೇಶ್, ಸಿ.ಜಗದೀಶ್, ಕೆ.ಸಿ. ರಕ್ಷಿತಾ, ಅಮ್ರೀನ್, ಜ್ಯೋತಿ, ಶಾಹಿಸ್ತಾ ಹಾಜರಿದ್ದರು.