ಕುಂದಾಪುರ: ಶಿಕ್ಷಣವೆಂದರೆ ಕೇವಲ ಜ್ಞಾನ ಅರಿವು, ಮಾಹಿತಿ ಮಾತ್ರವಲ್ಲ, ಮಾನವನ ವಿಕಾಸವೇ ನಿಜವಾದ ಶಿಕ್ಷಣ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ| ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಗುರುವಾರ ನಡೆದ ಕುಂದಾ ಪುರದ ಸಂತ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಧಿಕಾರಿ ಅಶೋಕ್ ಕಾಮತ್ ಮಾತನಾಡಿ ಇಂದು ಮಕ್ಕಳು ಒಳ್ಳೆಯ ಕೆಲಸ ಮಾಡುವಂತೆ ಪ್ರೇರೇಪಿಸುವುದು ಶಿಕ್ಷಕರ ಕೆಲಸ ಮಾತ್ರವಲ್ಲ. ಹೆತ್ತವರ ಮೇಲೂ ಹೆಚ್ಚಿನ ಹೊಣೆಗಾರಿಕೆ ಇದೆ ಎಂದರು.
ಪುರಸಭೆಯ ಉಪಾಧ್ಯಕ್ಷ, ಹಳೆ ವಿದ್ಯಾರ್ಥಿ ರಾಜೇಶ್ ಕಾವೇರಿ ಶುಭಕೋರಿದರು. ಪ್ರಥಮ ಮುಖ್ಯೋಪಾಧ್ಯಾಯ ವಂ| ಫಾ| ಅಲೆಕ್ಸಾಂಡರ್ ಲೋಬೊ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಶಿಕ್ಷಕರು, ದಾನಿಗಳು, ಶಾಲೆಗೆ ಸಹಕರಿಸಿದವರನ್ನು ಗೌರವಿಸಲಾಯಿತು. ಶಿಕ್ಷಕ ದಿನಮಣಿಯ ಸಂಪಾದಕತ್ವದ “ನೆನಪಿನ ಸಂಚಿಕೆ’ಯನ್ನು ಬಿಡುಗಡೆಗೊಳಿಸಲಾಯಿತು.
ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿ’ಮೆಲ್ಲೊ, ಸಂತ ಮೇರಿಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ರೆ| ಫಾ| ಪ್ರವೀಣ್ ಅಮೃತ್ ಮಾರ್ಟಿಸ್, ಸಿಸ್ಟರ್ ಜೊಯ್ಸ ಲಿನ್, ಡೋರಾ ಸುವಾರಿಸ್, ಶೈಲಾ ಅಲ್ಮೇಡಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವೈವಿಧ್ಯ ಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಲುವಿಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಶಿಕ್ಷಕ ಭಾಸ್ಕರ ಗಾಣಿಗ, ಸ್ಮಿತಾ, ಪ್ರೀತಿ, ಅಸುಂಪ್ತಾ ಸಹಕರಿಸಿದರು, ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನಾ ವಂದಿಸಿದರು.