ಈಶ್ವರಮಂಗಲ: ದೇಶದಲ್ಲಿ ಶಿಕ್ಷಣ ಪಡೆದವರ ಪ್ರಮಾಣ ಹೆಚ್ಚುತ್ತಿದೆ. ಆದರೆ ಸಂಸ್ಕಾರವಂತರ ಪ್ರಮಾಣ ಕಡಿಮೆಯಾಗುತ್ತಿದೆ. ಇದು ರಾಷ್ಟ್ರ ನಿಷ್ಠೆಗೆ ಸವಾಲಾಗಿದೆ. ಸಂಸ್ಕಾರ ನೀಡುವ ಶಿಕ್ಷಣ ಇಂದು ಅತ್ಯಗತ್ಯವಾಗಿದೆ. ರಾಷ್ಟ್ರಕ್ಕಾಗಿ ಚಿಂತನೆ, ತ್ಯಾಗ ಮಾಡುವ ಜತೆಗೆ ದೇಶದ ಶಕ್ತಿಯಾಗಿರುವ ರೈತರು, ಸೈನಿಕರಿಗೆ ನಾವು ನೆರವಾಗಬೇಕು ಎಂದು ರಾಜ್ಯಪಾಲ ವಜೂಭಾಯಿ ರುಡಾಭಾಯಿ ವಾಲಾ ಹೇಳಿದರು.
ಅವರು ಹನುಮಗಿರಿಯಲ್ಲಿ ಶನಿವಾರ ಭಕ್ತಾಂಜನೇಯ ಸಹಿತ ಶ್ರೀ ಕೋದಂಡರಾಮ ರಾಮ ದೇವರು ಮತ್ತು ಬಾಲಗಣಪತಿ ದೇವರ ಪ್ರತಿಷ್ಠಾ ಬ್ರಹ್ಮಕಲಶದ ಸಂದರ್ಭ ಬಾಲಿವುಡ್ ನಟ ನಾನಾ ಪಾಟೇಕರ್ ಅವರಿಗೆ ಧರ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನಾನಾ ಪಾಟೇಕರ್ ಅವರು ದೇಶಕ್ಕಾಗಿ, ಸಂಸ್ಕೃತಿಗಾಗಿ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಮ್ಮಲ್ಲಿ ಜಾnನವಿದ್ದರೂ ಕರ್ಮದಲ್ಲಿ ತೋರಿಸದಿದ್ದರೆ ವ್ಯರ್ಥ. ಸಮಾಜ ಸೇವೆಯನ್ನು ಜೀವನದಲ್ಲಿ ಮಾಡಿ ತೋರಿಸುವ ಅವರ ಗುಣ ವೈಶಾಲ್ಯತೆಗೆ ಧರ್ಮಶ್ರೀ ಪ್ರಶಸ್ತಿ ಸಂದಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿದ ನಾನಾ ಪಾಟೇಕರ್ ಮಾತನಾಡಿ, ಸಮಾಜ ನನಗೆ ನೀಡಿದ್ದನ್ನು ಸಮಾಜಕ್ಕೇ ಅರ್ಪಿಸುತ್ತಿದ್ದೇನೆ. ಪಾರಂಪರಿಕವಾಗಿ ಕೃಷಿ ಮಾಡುವವರ ಮಕ್ಕಳು ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ಕೆಲಸ ಆಗಬೇಕು. ದೇಶಕ್ಕೆ ಗೌರವ ತರುವ ರೈತರು ಹಾಗೂ ಯೋಧರ ಕುಟುಂಬಕ್ಕೆ ನೆರವಾಗಬೇಕು ಎಂದು ವಿನಂತಿಸಿದರು.
ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕೇಂದ್ರ ಸಚಿವ ಡಿ.ವಿ.
ಸದಾನಂದ ಗೌಡ ಮಾತನಾಡಿದರು. ಎಸ್.ಕೆ. ಅನಂದ್ ಅವರಿಗೆ ನಿರ್ಮಾಣ ರತ್ನ ಪ್ರಶಸ್ತಿ, ರಾಜೇಶ್ ಆಚಾರ್ಯ ಅವರಿಗೆ ಶಿಲ್ಪರತ್ನ ಪ್ರಶಸ್ತಿ ಹಾಗೂ ರಾಮ ಬಸಿರಡ್ಕ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರಸಲಾಯಿತು.
ಧರ್ಮಶ್ರೀ ಪ್ರತಿಷ್ಠಾನದ ಮಹಾಪೋಷಕ ಕೊನೆತೋಟ ಮಹಾಬಲೇಶ್ವರ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಸಮಿತಿಯ ಗೌರವ ಮಾರ್ಗದರ್ಶಕಿ, ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯಾಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಹೇಶ ಕಜೆ ಕಾರ್ಯಕ್ರಮ ನಿರ್ವಸಿದರು.