ರಾಮದುರ್ಗ: ಸಮಾಜ ಅಭಿವೃದ್ಧಿಗೆ ಶಿಕ್ಷಣ ಅಗತ್ಯವಿದ್ದು, ಸಮಾಜದ ಜನತೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕು ಎಂದು ಜಿಪಂ ಸದಸ್ಯ ರೇಣಪ್ಪ ಸೋಮಗೊಂಡ ಹೇಳಿದರು. ತಾಲೂಕಿನ ತುರನೂರ ಸಿದ್ದಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ತಾಲೂಕು ಕುರುಬ ಹಿತವರ್ಧಕ ಸಂಘ ಹಾಗೂ ಕುರುಬ ನೌಕರರ ಸಂಘದ ನೇತೃತ್ವದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಶನಿವಾರ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಣ್ಣಿಕೇರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಎಸ್. ಕಂಬಳಿ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಸೂಕ್ತ ಯೋಜನೆ ಹಾಕಿಕೊಂಡು ನಿರಂತರ ಅಧ್ಯಯನ ಕೈಗೊಂಡಾಗ ಮಾತ್ರ ನಿಶ್ಚಿತ ಗುರಿ ತಲುಪಲು ಸಾಧ್ಯ. ಎಸ್‌ಎಸ್ ಎಲ್‌ಸಿ ನಂತರ ವಿದ್ಯಾರ್ಥಿಗಳು ಉನ್ನತ ಗುರಿ ನಿರ್ಣಯಿಸಿಕೊಂಡು ತಮ್ಮ ಆಸಕ್ತ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕು ಎಂದರು.
ತಾಲೂಕು ಕುರುಬರ ಹಿತವರ್ಧಕ ಸಂಘದ ಅಧ್ಯಕ್ಷ ರವಿ ಮೊರಬದ, ಹಾಲುಮತ ಮಾಸ ಪತ್ರಿಕೆಯ ಸಂಪಾದಕ ಸೋಮಣ್ಣ ಮಲ್ಲೂರ, ಕಸಾಪ ತಾಲೂಕಾಧ್ಯಕ್ಷ ಪಾಂಡುರಂಗ ಜಟಗನ್ನವರ ಮಾತನಾಡಿದರು. ತುರನೂರ ಗ್ರಾಪಂ ಅಧ್ಯಕ್ಷ ಲಕ್ಕಪ್ಪ ಕ್ವಾರಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಪಡೆದ 95 ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಈ ವೇಳೆ ಅಶೋಕ ಮೆಟಗುಡ್ಡ, ಕೆಂಪಣ್ಣ ಕ್ವಾರಿ, ತಿಪ್ಪಣ್ಣ ಪೂಜೇರ, ಶೇಖರ ಸಿದ್ಲಿಂಗಪ್ಪನವರ, ಮಲ್ಲಪ್ಪ ಸೋಮಗೊಂಡ, ಎಫ್.ಎಸ್. ಕೊಂಗವಾಡ, ಎಚ್.ಐ. ಪೂಜಾರ ಶಾಂತಾ ಚೂರಿ ಸೇರಿದಂತೆ ಇತರರು ಇದ್ದರು. ಕೆ.ಎನ್. ಯಡ್ರಾವಿ ಸ್ವಾಗತಿಸಿದರು. ಎಂ. ಎನ್. ಗವನ್ನವರ ನಿರೂಪಿಸಿದರು. ಮಾರುತಿ ಅದ್ದೂರಿ ವಂದಿಸಿದರು.