ಕೊಪ್ಪಳ: ಪ್ರತಿಯೊಂದು ಸಮಾಜವು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅಗತ್ಯವಾಗಿ ಬೇಕಾಗಿದೆ. ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಸರ್ವ ಕ್ಷೇತ್ರವೂ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಮುಫ್ತಿ ಮೌಲಾನಾ ಮಹ್ಮದ್ ನಜೀರ್ ಅಹಮದ್ ಖಾದ್ರಿ-ವ-ತಸ್ಕಿನಿ ಹೇಳಿದರು.
ನಗರದ ಫಿರ್ದೋಸ್ ಮಸೀದಿ ಆವರಣದಲ್ಲಿ ಮುಸ್ಲಿಂ ನೌಕರರ ಸಂಘ ಹಾಗೂ ಇದರೆ ಅದಬೆ ಇಸ್ಲಾಮಿ ಸಂಘಟನೆ ಆಶ್ರಯದಲ್ಲಿ ಪ್ರವಾದಿಗಳ ಜೀವನ ಚರಿತ್ರೆ ಅಂಗವಾಗಿ ಜರುಗಿದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ. ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಪ್ರವಾದಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಇಂದು ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಇತರೆ ಶಿಕ್ಷಣವನ್ನು ಬೋಧನೆ ಮಾಡಬೇಕಾಗಿದೆ. ಮಕ್ಕಳಲ್ಲಿ ಜಾಗೃತಿ ಮೂಡಿಸಿ ಧರ್ಮ, ಸಮಾಜದೊಂದಿಗೆ ಎಲ್ಲರೂ ಒಗ್ಗಟಾಗಿ ಬಾಳಲು ರಾಷ್ಟ್ರೀಯ ಭಾವೈಕ್ಯತೆ ಮೂಡಿಸಬೇಕು ಎಂದರು.
ನಗರಸಭೆ ಸದಸ್ಯ ಅಮ್ಜದ್ ಪಟೇಲ್ ಮಾತನಾಡಿ, ಮನುಷ್ಯ ಇಂದಿನ ದಿನಮಾನಗಳಲ್ಲಿ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಸಮಾಜ ಸುಧಾರಣೆಯಾಗಬೇಕೆಂದರೆ ಮೊದಲು ಮನುಷ್ಯ ತನ್ನ ಜೀವನದಲ್ಲಿ ಸುಧಾರಣೆ ಕಂಡುಕೊಳ್ಳಬೇಕು ಎಂದರು. ಪ್ರವಾದಿಯವರ ಜಿವನ ಚರಿತ್ರೆ ಕುರಿತು ಏರ್ಪಡಿಸಿದ ಸುಮಾರು 20ಕ್ಕೂ ಅಧಿಕ ಅರಬ್ಬಿ ಮದರಸಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ
ವಿತರಿಸಲಾಯಿತು.
ಮುಸ್ಲಿಂ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಬದಿಯುದ್ದೀನ್ ನವಿದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯದ್ ಜುಲ್ಲು ಖಾದರ್ ಖಾದ್ರಿ, ಫಿರ್ದೋಸ್ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷ ಉಸ್ಮಾನ್ ಅಲಿ ಖಾನ್ ಸಾಹೇಬ್, ರಾಬಿತಾ ಮಿಲ್ಲತ್ ಜಿಲ್ಲಾಧ್ಯಕ್ಷ ಎಂ. ಲಾಯಕ್ ಅಲಿ, ನಿವೃತ್ತ ಅಧಿಕಾರಿ ಮೌನುದ್ದೀನ್ ಹುಸೇನಿ, ಗಣ್ಯರಾದ ಅನ್ವರ್ ಹುಸೇನ್, ಎಂ. ಸಾದೀಕ್ ಅಲಿ,
ಮುಸ್ತಾಫ್ ಕುದುರೆಮೊತಿ, ಮಹ್ಮದ್‌ಅಲಿ ಹಿಮಾಯಿತಿ, ಮೌಲಾನಾ ಸಿರಾಜುದ್ದೀನ್, ಮೌಲಾನಾ ಹೈದರ್ ಸಾಹೇಬ್ ಸೇರಿದಂತೆ ಸೇರಿ ಇತರರು ಉಪಸ್ಥಿತರಿದ್ದರು.