Advertisement

ಶಿಕ್ಷಣಕ್ಕಿದೆ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ: ಡಾ|ನ.ವಜ್ರಕುಮಾರ

04:26 PM Feb 19, 2022 | Team Udayavani |

ಧಾರವಾಡ: ಇಂದಿನ ಎಲ್ಲ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಶಕ್ತಿ ಶಿಕ್ಷಣಕ್ಕಿದೆ ಎಂದು ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ|ನ.ವಜ್ರಕುಮಾರ ಹೇಳಿದರು. ನಗರದ ವಿದ್ಯಾಗಿರಿಯ ಜೆಎಸ್ಸೆಸ್‌ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಶಿಕ್ಷಣವೆಂಬುದು ನಿಧಾನವಾದರೂ ನಿರಂತರ ಸಾಧನೆ, ತಪಸ್ಸು. ಶಿಕ್ಷಣ ಎಂದೂ ನಿಲ್ಲದ ಪ್ರವಾಹ. ಅದು ವ್ಯಕ್ತಿಯ ಸಮಗ್ರ ವ್ಯಕ್ತಿತ್ವ ಆಳ್ವಿಕೆ. ಇದಕ್ಕೆ ವಯಸ್ಸಿನ, ಲಿಂಗಭೇದಗಳ ಜಾತಿ-ಮತಗಳ, ಅಧಿ ಕಾರ-ಅಂತಸ್ತಿನ ಅಡ್ಡಗೋಡೆಗಳಿಲ್ಲ. ಶಿಕ್ಷಣದಲ್ಲಿ ಒತ್ತಡವಿರಬಾರದು. ಮನಸಾರೆ ಒಪ್ಪಿ  ಸಂತೋಷದಿಂದ ಪಡೆಯುವ ಶಿಕ್ಷಣ ಹೆಚ್ಚು ಪರಿಣಾಮಕಾರಿ ಹಾಗೂ ಶಾಶ್ವತವಾದುದು ಎಂದರು.

ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಇದೀಗ ದಶಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕ ಶಿಕ್ಷಣ ಜತೆಗೆ ವಿಭಿನ್ನವಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆ 2500 ವಿದ್ಯಾರ್ಥಿಗಳನ್ನು ಹೊಂದಿದ್ದು, ಡಾ|ಅಜಿತ ಪ್ರಸಾದ ಅವರ ದೂರದೃಷ್ಟಿ ಈ ಸಂಸ್ಥೆಯನ್ನು ಅಗ್ರ ಶ್ರೇಯಾಂಕದಲ್ಲಿ ಇರುವಂತೆ ಮಾಡಿದೆ ಎಂದರು.

ಜೆಎಸ್‌ಎಸ್‌ ವಿತ್ತಾಧಿಕಾರಿ ಡಾ|ಅಜಿತ ಪ್ರಸಾದ ಮಾತನಾಡಿ, ಯಾವುದೇ ಒಂದು ಶಿಕ್ಷಣ ಸಂಸ್ಥೆ ಬೆಳೆಯಬೇಕಾದರೆ ಪ್ರತಿಯೊಬ್ಬ ಸಿಬ್ಬಂದಿ ಸಹಕಾರ ಅಗತ್ಯವಾದುದು. ಎಲ್ಲವೂ ದೊರೆತಾಗ ಶಿಕ್ಷಣ ಸಂಸ್ಥೆ ಪ್ರಗತಿ ಸಾಧಿಸಲು ಸಾಧ್ಯ ಎಂದರು. ಡಾ|ವೆಂಕಟ್‌ ನರಸಿಂಹ ಜೋಶಿ ಮಾತನಾಡಿ, ಹಸಿದವರಿಗೆ ಅನ್ನ ನೀಡಿದಾಗ ಅದು ಕ್ಷಣಿಕ ಆದರೆ ಅದೆ ವಿದ್ಯೆ ನೀಡಿದಾಗ ಅದು ವಿದ್ಯಾರ್ಥಿ ಜೀವನ ಪರ್ಯಂತ ಉಳಿಯುವಂತಹದ್ದು. ಈ ದೂರದೃಷ್ಟಿಯನ್ನಿಟ್ಟುಕೊಂಡು ದೂರದ ದಕ್ಷಿಣ ಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು, ಪೂಜ್ಯ ವಿಶ್ವೇಶತೀರ್ಥ ಶ್ರೀಪಾದಂಗಳವರ ಅಪೇಕ್ಷೆಯಂತೆ 1973ರಲ್ಲಿ ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆ ಪಡೆದು ಅದಕ್ಕೆ ಸಾರಥಿಯನ್ನಾಗಿ ಪ್ರೊ|ನ. ವಜ್ರಕುಮಾರ ಅವರನ್ನು ಕಳುಹಿಸಿಕೊಟ್ಟರು ಎಂದರು.

ಅದರಲ್ಲಿ ಜೆಎಸ್‌ಎಸ್‌ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ 2011ರ ಫೆ.16ರಂದು ಸ್ಥಾಪನೆಗೊಂಡು ಇದೀಗ 2500ಕ್ಕೂ ಅಧಿಕ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ದಾರಿ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿ. ಡಾ|ನ.ವಜ್ರಕುಮಾರ, ಅಜಿತ ಪ್ರಸಾದ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಯಮಗಳ ಪ್ರತೀಕವಾಗಿ ಜೆಎಸ್‌ ಎಸ್‌ ಸಂಸ್ಥೆಯ ಅಂಗಸಂಸ್ಥೆಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.

Advertisement

ಹಿರಿಯ ಕವಿ ನಾಡೋಜ ಡಾ|ಚನ್ನವೀರ ಕಣವಿ ಅವರ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ, ಸಂತಾಪ ಸೂಚಿಸಲಾಯಿತು. ದೀಪಾ ಪ್ರಾರ್ಥಿಸಿದರು. ಡಾ|ಸೂರಜ್‌ ಜೈನ್‌ ಸ್ವಾಗತಿಸಿದರು.ಡಾ|ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next