Advertisement

ಹೆಣ್ಮಕ್ಕಳ ಶಿಕ್ಷಣ ಭಾಗ್ಯ ಎಸ್ಸೆಸ್ಸೆಲ್ಸಿಗೆ ಸೀಮಿತ!

11:37 AM May 03, 2022 | Team Udayavani |

ವಾಡಿ: ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ್ದರು ಎಂಬ ಹೆಗ್ಗಳಿಕೆ ಹೊಂದಿರುವ ವಾಡಿ ಪಟ್ಟಣದಲ್ಲಿ ಸರ್ಕಾರಿ ಪಿಯು ಕಾಲೇಜು ಇಲ್ಲದೇ ಇರುವುದು ಬಹುತೇಕ ಬಡ ಹೆಣ್ಣುಮಕ್ಕಳ ಶಿಕ್ಷಣ ಭಾಗ್ಯ ಎಸ್ಸೆಸ್ಸೆಲ್ಸಿಗೆ ಕೊನೆಯಾಗುತ್ತಿದೆ!

Advertisement

ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣವು ಎಸಿಸಿ ಸಿಮೆಂಟ್‌ ಕಂಪನಿ ಹಾಗೂ ರೈಲ್ವೆ ಜಂಕ್ಷನ್‌ ಮೂಲಕ ದೇಶದ ಜನತೆಗೆ ಚಿರಪರಿಚಿತವಾಗಿದೆ. ಪುರಸಭೆ ಆಡಳಿತ ಕೇಂದ್ರವಾಗಿರುವ ಈ ಪಟ್ಟಣ ಚಿತ್ತಾಪುರ ವಿಧಾನಸಭೆ ಮೀಸಲು ಮತಕ್ಷೇತ್ರಕ್ಕೊಳಪಟ್ಟಿದೆ. ಹಾಲಿ ಶಾಸಕ ಪ್ರಿಯಾಂಕ್‌ ಖರ್ಗೆ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದು, ಈ ಹಿಂದೆ ಬಿಜೆಪಿ ಶಾಸಕರಾದ ಸುನೀಲ ವಲ್ಯಾಪುರೆ ಹಾಗೂ ದಿ.ವಾಲ್ಮೀಕಿ ನಾಯಕ ಕ್ಷೇತ್ರವನ್ನು ಆಳಿದ್ದಾರೆ. ಇದಕ್ಕೂ ಮುಂಚೆ ಕಾಂಗ್ರೆಸ್‌ನ ಮಾಜಿ ಸಚಿವ ಬಾಬುರಾವ್‌ ಚವ್ಹಾಣ, ಜೆಡಿಎಸ್‌ ಪಕ್ಷದ ದಿ.ಸಿ.ಗುರುನಾಥ, ದಿ.ಕೆ.ಬಿ.ಶಾಣಪ್ಪ ಶಾಸಕರಾಗಿದ್ದರು. ಡಾ| ಮಲ್ಲಿಕಾರ್ಜುನ ಖರ್ಗೆ ಅವರೂ ಕೂಡ ಒಂದು ವರ್ಷ ಶಾಸಕರಾಗಿದ್ದರು.

ಘಟಾನುಘಟಿ ನಾಯಕರು ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರೂ ವಾಡಿ ಪಟ್ಟಣಕ್ಕೆ ಸರ್ಕಾರಿ ಕಾಲೇಜು ಸ್ಥಾಪಿಸುವ ಮನಸ್ಸು ಮಾಡಲಿಲ್ಲ. 12 ಪ್ರೌಢ ಶಾಲೆಗಳು ಹಾಗೂ 15 ಪ್ರಾಥಮಿಕ ಶಾಲೆಗಳಿರುವ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಕಾಲೇಜು ಮಂಜೂರು ಮಾಡಬೇಕು. ಆ ಮೂಲಕ ಕಾರ್ಮಿಕರ ಮಕ್ಕಳಿಗೆ ಕಾಲೇಜು ಶಿಕ್ಷಣ ಕೊಡಿಸಬೇಕು ಎಂಬ ಕಾಳಜಿ ಯಾವ ನಾಯಕರಿಗೂ ಇರಲಿಲ್ಲ ಎಂಬುದೇ ದುರ್ದೈವದ ಸಂಗತಿ.

ಹೈಸ್ಕೂಲ್‌ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಕಲಬುರಗಿ, ಯಾದಗಿರಿ, ಶಹಾಬಾದ್‌, ಹೈದರಾಬಾದ್‌ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳತ್ತ ಪಯಣ ಬೆಳೆಸುತ್ತಾರೆ. ಇತ್ತ ಹತ್ತನೇ ಪಾಸ್‌ ಮಾಡಿದ ಗ್ರಾಮೀಣ ವಿದ್ಯಾರ್ಥಿನಿಯರ ಪಾಡು ಹೇಳತೀರದು. ಕಾಲೇಜೂ ಬೇಡ ಶಿಕ್ಷಣವೂ ಬೇಡ ಗಂಡನ ಮನೆಗೆ ಹೋಗು ಎಂಬ ಪೋಷಕರ ಮನಸ್ಥಿತಿಗೆ ಬಾಲಕಿಯರ ಅಕ್ಷರ ಭವಿಷ್ಯ ಬಲಿಯಾಗುತ್ತಿದೆ.

ಡಾ|ಬಿ. ಆರ್‌.ಅಂಬೇಡ್ಕರ್‌ ಪಾದಮೆಟ್ಟಿದ ನೆಲದಲ್ಲಿ ಕಾಲೇಜಿನ ಗಂಟೆಯ ಸದ್ದು ಕೇಳುವಂತೆ ಮಾಡುವ ಮೂಲಕ ಅಂಬೇಡ್ಕರ್‌ ಕನಸುಗಳಿಗೆ ಸರ್ಕಾರ ಬೆಲೆ ನೀಡಬೇಕು ಎಂಬುದು ಸ್ಥಳೀಯರ ಆಗ್ರಹ.

Advertisement

ಪಟ್ಟಣಕ್ಕೆ ಸರ್ಕಾರಿ ಕಾಲೇಜು ಕೊಡಿ ಎಂದು ಕಳೆದ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಜನಪ್ರತಿನಿಧಿ ಗೂ ಮನವಿ ಪತ್ರ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗೆ ಮತ್ತು ಸರ್ಕಾರದ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದೇವೆ. ಪತ್ರ ಚಳವಳಿ, ರಸ್ತೆ ತಡೆ, ತರಗತಿಗಳ ಬಹಿಷ್ಕರಿಸಿ ಹೋರಾಟ ಕಟ್ಟಿದ್ದೇವೆ. ಆದರೂ ಅಧಿಕಾರಕ್ಕೆ ಬಂದ ಸರ್ಕಾರಗಳು ವಿದ್ಯಾರ್ಥಿಗಳ ಕೂಗಿಗೆ ಕಿವಿಗೊಡುತ್ತಿಲ್ಲ. ಜುಲೈ ತಿಂಗಳಲ್ಲಿ ಮತ್ತೂಂದು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. –ವೆಂಕಟೇಶ ದೇವದುರ್ಗ. ಅಧ್ಯಕ್ಷರು, ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ

ಸಾವಿರಾರು ಮಕ್ಕಳು ಪ್ರೌಢ ಶಿಕ್ಷಣ ಪಡೆಯುತ್ತಿದ್ದಾರೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಎಸ್ಸೆಸ್ಸೆಲ್ಸಿ ಪಾಸ್‌ ಆಗುತ್ತಿದ್ದಾರೆ. ಇವರ ಮುಂದಿನ ಕಾಲೇಜು ಶಿಕ್ಷಣದ ಬಾಗಿಲುಗಳು ಮುಚ್ಚಿವೆ. ಹಣ ಉಳ್ಳವರು ಬೇರೆ ಬೇರೆ ಜಿಲ್ಲಾಕೇಂದ್ರಗಳ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಇಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಡೆತ ಬೀಳುತ್ತಿದೆ. ಕಾಲೇಜು ತೆರೆಯುವ ಅಗತ್ಯವಿದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಶಾಸಕರು ಕಾಲೇಜು ಸ್ಥಾಪನೆಗೆ ವಿಶೇಷ ಕಾಳಜಿ ವಹಿಸಬೇಕು. -ರವಿ ಎಸ್‌.ಬಡಿಗೇರ. ತಾಲೂಕು ಸಂಚಾಲಕರು, ಕರಾದಸಂಸ

-ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next