Advertisement

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

05:58 PM May 03, 2024 | Team Udayavani |

ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಆನಂದಸ್ವಾಮಿ ಗಡ್ಡದೇವರಮಠ ಅವರು ಶಿರಹಟ್ಟಿ
ಮಾಜಿ ಶಾಸಕ ಜಿ.ಎಸ್‌.ಗಡ್ಡದೇವರಮಠ ಅವರ ಪುತ್ರ. ತಂದೆಯ ಗರಡಿಯಲ್ಲಿ ಬೆಳೆದಿರುವ ಅವರು ಯಶಸ್ವಿ ಉದ್ಯಮಿಯಾಗಿ
ಗುರುತಿಸಿಕೊಂಡಿದ್ದಾರೆ. ಮೂಲತಃ ಲಕ್ಷ್ಮೇಶ್ವರದವರಾದ ಇವರು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಕ್ಷೇತ್ರ ಸಂಚಾರ ಮಾಡಿ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಲೋಕಸಭೆ ಪ್ರವೇಶಿಸುವ ಕನಸು ಕಂಡಿರುವ ಅವರು “ಉದಯವಾಣಿ’ ಗೆ ಸಂದರ್ಶನಗೆ ಸಂದರ್ಶನ ನೀಡಿದ್ದಾರೆ.

Advertisement

ಉದಯವಾಣಿ ಸಮಾಚಾರ
*ಚುನಾವಣಾ ಪ್ರಚಾರ ಹೇಗಿದೆ ?
ಹಾವೇರಿ-ಗದಗ ಲೋಕಸಭಾ ಕ್ಷೇತದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜತೆಗೆ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ಶಾಸಕರು, ಸಚಿವರು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಾಗಿ ನಮ್ಮ ಪರವಾಗಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

*ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಪರಿಕಲ್ಪನೆ ಹಾಗೂ ಭರವಸೆಗಳೇನು ?
ಈ ಭಾಗದಲ್ಲಿ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಹಾವೇರಿ ನಗರಕ್ಕೆ ರಿಂಗ್‌ ರೋಡ್‌ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಬ್ಯಾಡಗಿ  ಮೆಣಸಿಕಾಯಿ ಮಾರುಕಟ್ಟೆ ಅಭಿವೃದ್ಧಿಗೊಳಿಸಿ ರೈತರಿಗೆ ಆರ್ಥಿಕ ಶಕ್ತಿ ನೀಡಬೇಕಿದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ನಿರುದ್ಯೋಗಿ ಯುವಕ-ಯವತಿಯರಿಗೆ ಉದ್ಯೋಗ ಕಲ್ಪಿಸುವುದು, ಕೇಂದ್ರ ಸರ್ಕಾರದಿಂದ ಸಿಗುವ ಸೌಕರ್ಯ ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು. ಸಮಗ್ರ ನೀರಾವರಿ ಯೋಜನೆ ರೂಪಿಸುವುದು, ಕೆರೆಗಳ ನಿರ್ಮಾಣ, ಅಪ್ಪರ್‌ ತುಂಗಾ ಯೋಜನೆ ಇನ್ನಷ್ಟು ಅಭಿವೃದ್ಧಿ ಪಡಿಸುವುದು. ಜತೆಗೆ ಹಾನಗಲ್ಲ ಭಾಗದಲ್ಲಿ ಸಕ್ಕರೆ ಕಾರ್ಖಾನೆ, ಗಾರ್ಮೆಂಟ್ಸ್‌ ಸ್ಥಾಪಿಸುವುದು. ವರದಾ ನದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾರೇಜ್‌ ನಿರ್ಮಾಣ ಮಾಡಿ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುವುದು.

*ಕ್ಷೇತ್ರದಲ್ಲಿ ನೀವು ಗುರುತಿಸಿದ ಐದು ಪ್ರಥಮ ಆದ್ಯತೆಯ ಕೆಲಸಗಳೇನು ?
ಕ್ಷೇತ್ರದಲ್ಲಿನ ರೈಲು ಮಾರ್ಗಗಳ ಜೋಡಣೆಗೆ ಪ್ರಥಮ ಆದ್ಯತೆ ನೀಡಲಾಗುವುದು. ಗದಗ-ಯಲವಗಿ, ರಾಣಿಬೆನ್ನೂರ-ಶಿಕಾರಿಪುರ, ಗದಗ- ವಾಡಿ, ಮುಂಡರಗಿ-ಹರಪನಹಳ್ಳಿ ರೈಲು ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿ ಸುವುದು. ಕುಮದ್ವತಿ ನದಿಗೆ ಬ್ಯಾರೇಜ್‌
ನಿರ್ಮಾಣ ಮಾಡಿ 22 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ಜತೆಗೆ ಮಹದಾಯಿ ಯೋಜನೆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಈ ಭಾಗದಲ್ಲಿ ಮಹದಾಯಿ ಬಗ್ಗೆ ಗಟ್ಟಿ ಧ್ವನಿಯಾಗಬೇಕಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುವುದು, ರೋಣ ಭಾಗದಲ್ಲಿ ಕೆರೆಗಳನ್ನು ತುಂಬಿಸುವುದು, ಶಿರಹಟ್ಟಿ ಭಾಗದಲ್ಲಿ ನೇಕಾರರು ಹೆಚ್ಚಾಗಿದ್ದು, ಆ ಭಾಗದಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲು ಆದ್ಯತೆ ನೀಡಲಾಗುವುದು.

*ಗ್ಯಾರಂಟಿ ಅಲೆ ಅಥವಾ ಬೇರೆ ಯಾವ ಅಂಶಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ?
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿದ್ದು, ಬಡವರಿಗೆ ಆರ್ಥಿಕ ಶಕ್ತಿ ತುಂಬಿ ಹೊಸ ಕ್ರಾಂತಿ ಸೃಷ್ಟಿಸಿದೆ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕಾರ್ಯ, ಗ್ಯಾರಂಟಿ ಯೋಜನೆಗಳು ನನಗೆ ಶ್ರೀರಕ್ಷೆಯಾಗಿವೆ. ಜತೆಗೆ ಕ್ಷೇತ್ರದಲ್ಲಿ ಎಲ್ಲ ಕಾಂಗ್ರೆಸ್‌ ಶಾಸಕರು, ಸಚಿವರು, ಮುಖಂಡರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್‌ ಕಾರ್ಯಕರ್ತರು ಒಗ್ಗಟ್ಟಾಗಿ ಸಹಕಾರ ನೀಡುತ್ತಿದ್ದಾರೆ.

Advertisement

*ಜನ ನಿಮ್ಮನ್ನು ಏಕೆ ಬೆಂಬಲಿಸಬೇಕು ?
ಕ್ಷೇತ್ರದ ಮತದಾರರು ವೈಯಕ್ತಿಕವಾಗಿ ನನ್ನನ್ನು ಬೆಂಬಲಿಸಬೇಕು ಎನ್ನುವುದಕ್ಕಿಂತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜನರ ಆಶೀರ್ವಾದ ಕೇಳುತ್ತಿದ್ದೇನೆ. ಕಾಂಗ್ರೆಸ್‌ ಪಕ್ಷದ ಕೆಲಸಗಳು, ತತ್ವ-ಸಿದ್ಧಾಂತಗಳು ನನ್ನ ಶಕ್ತಿ, ಶ್ರೀರಕ್ಷೆಯಾಗಿವೆ. ಜತೆಗೆ ನಾನು ಕ್ಷೇತ್ರದಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಕೈಗೊಂಡಿದ್ದೇನೆ. ನಮ್ಮದೇ ಪ್ರತಿಷ್ಠಾನ ಮೂಲಕ ಕೆರೆಗಳ ನಿರ್ಮಾಣ,
ರೈತರಿಗಾಗಿ ಬೋರ್‌ವೆಲ್‌ ಕೊರೆಸಿದ್ದೇನೆ. ಇದೆಲ್ಲರದ ಜತೆ ಜನರ ಸಮಸ್ಯೆಗಳಿಗೆ ಕಿವಿಯಾಗಿ ಸಮಾಜದಲ್ಲಿ ನಾನು ಒಬ್ಬ ಎಂಬಂತೆ ನಡೆದುಕೊಂಡು ಬಂದಿದ್ದೇನೆ. ಇನ್ನು ಹೆಚ್ಚಿನ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಜನರ ಆಶೀರ್ವಾದ ಕೇಳುತ್ತಿದ್ದೇನೆ.

*ಪ್ರಚಾರದ ವೇಳೆ ಎದುರಿಸಿದ ಸವಾಲುಗಳೇನು ?
ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ವೇಳೆ ಯಾವುದೇ ಸವಾಲುಗಳು ಎದುರಾಗಿಲ್ಲ. ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ
ಹೊಂದಿದ್ದು, ಎಲ್ಲಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಗ್ರಾಮಗಳಿಗೆ ತೆರಳಿದಾಗ ಜನರು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದು, ಅವುಗಳನ್ನು ಸವಾಲುಗಳಾಗಿ ತೆಗೆದುಕೊಂಡು ಪರಿಹಾರ ಕಲ್ಪಿಸುವ ಭರವಸೆ ನೀಡುತ್ತಿದ್ದೇನೆ. ಕ್ಷೇತ್ರದಲ್ಲಿನ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲ ಸಿಗುವ ವಿಶ್ವಾಸವಿದೆ.

*ಚುನಾವಣೆ ಗೆಲ್ಲಲು ನಿಮ್ಮ ತಂತ್ರಗಾರಿಕೆ ಏನು?
ಚುನಾವಣೆಯಲ್ಲಿನ ತಂತ್ರಗಾರಿಕೆಯನ್ನು ತಮಗೆಲ್ಲ ಹೇಳುವುದಕ್ಕಿಂತ ಅದನ್ನು ಮಾಡಿ ತೋರಿಸುತ್ತೇವೆ.

*ನಿಮ್ಮ ಎದುರಾಳಿ ಯಾರು ? ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಎದುರಾಳಿ, ಅವರ ಬಗ್ಗೆ ಹೆಚ್ಚೇನೂ ಹೇಳಲು ಬಯಸಲ್ಲ. ಅವರು ಬಿಜೆಪಿ ಅಭ್ಯರ್ಥಿ ಅಷ್ಟೇ.

*ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next