ಬೆಂಗಳೂರು: ಹೊಸ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ವರ್ಗ ಮತ್ತು ಭಡ್ತಿ ಪ್ರಕ್ರಿಯೆ ಚುರುಕು ಪಡೆದಿದ್ದು, 22 ಹಿರಿಯ ಅಧಿಕಾರಿಗಳಿಗೆ ಭಡ್ತಿ ಸಹಿತ ವರ್ಗಾವಣೆ ಭಾಗ್ಯ ಲಭಿಸಿದೆ.
ಶಾಲಾ ಶಿಕ್ಷಣ ಇಲಾಖೆಯ 9 ಮಂದಿ ಉಪನಿರ್ದೇಶಕರು ಜಂಟಿ ನಿರ್ದೇಶಕರು ಮತ್ತು ತತ್ಸಮಾನ ಹುದ್ದೆಗೆ ಹಾಗೆಯೇ 13 ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ಮತ್ತು ತತ್ಸಮಾನ ವೃಂದಕ್ಕೆ ಭರ್ತಿ ನೀಡಲಾಗಿದೆ.
ಕಾರವಾರದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಈಶ್ವರ ಹನುಮಂತ ನಾಯ್ಕರನ್ನು ಜಮಖಂಡಿಯ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ)ಯ ಪ್ರಾಂಶುಪಾಲ ಹುದ್ದೆಗೆ, ಚಿತ್ರದುರ್ಗದ ಪ್ರವಾಚಕ ಟಿ. ಜಿ. ಲೀಲಾವತಿ ಅವರನ್ನು ಅದೇ ಸಂಸ್ಥೆಯ ಪ್ರಾಂಶುಪಾಲ ಹುದ್ದೆಗೆ, ಬೆಂಗಳೂರಿನ ಡಯಟ್‌ನ ಪ್ರಾಂಶುಪಾಲ ಹಸನ್ ಮೊಹಿದ್ದಿನ್ ಅವರನ್ನು ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ, ಮಧುಗಿರಿಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ. ಜಿ. ರಂಗಯ್ಯ ಅವರನ್ನು ಮೈಸೂರಿನ ಸಿಟಿಇಯ ಪ್ರಾಂಶುಪಾಲ ಹುದ್ದೆಗೆ ಪದೋನ್ನತಿ ನೀಡಿ ವರ್ಗಾಯಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿನ ಅಲ್ಪಸಂಖ್ಯಾಕರ ವಿಭಾಗದ ಉಪನಿರ್ದೇಶಕರಾಗಿದ್ದ ಶಮೀಮ್ ತಾಜ್ ಎಚ್. ಎ ಅವರನ್ನು ಸಮಗ್ರ ಶಿಕ್ಷಣ ಕರ್ನಾಟಕ (ಎಸ್‌ಎಸ್‌ಕೆ)ಯ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಜಂಟಿ ನಿರ್ದೇಶಕಿ, ಡಿಎಸ್‌ಇಆರ್‌ಟಿಯ ಉಪ ನಿರ್ದೇಶಕ ಎಸ್. ಕೆ. ಬಿ. ಪ್ರಸಾದ್ ಅವರನ್ನು ಎಸ್‌ಎಸ್‌ಕೆಯ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಜಂಟಿ ನಿರ್ದೇಶಕ, ಡಯಟ್ ರಾಮನಗರದ ಪ್ರಾಂಶುಪಾಲ ಎ. ಸೂರ್ಯಪ್ರಕಾಶ್ ಮೂರ್ತಿ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ಶಾಲಾ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ, ವಿಜಯಪುರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ)ರಾಗಿದ್ದ ಉಮೇಶ್ ಎಸ್. ಶಿರಹಟ್ಟಿ ಮಠ ಅವರನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಕಾರ್ಯದರ್ಶಿ ಮತ್ತು ಎಸ್‌ಎಸ್‌ಕೆಯ ಹಿರಿಯ ಕಾರ್ಯಕ್ರಮಾಧಿಕಾರಿ ಪಾಂಡುರಂಗ ಅವರನ್ನು ಎಸ್‌ಎಸ್‌ಕೆಯ ಜಂಟಿ ನಿರ್ದೇಶಕರನ್ನಾಗಿ ಪದೋನ್ನತಿ ನೀಡಿ ನೇಮಿಸಲಾಗಿದೆ.
ಇದೇ ರೀತಿ 13 ಶಿಕ್ಷಣಾಧಿಕಾರಿಗಳು ಉಪನಿರ್ದೇಶಕರು ಮತ್ತು ತತ್ಸಮಾನ ವೃಂದಕ್ಕೆ ಭಡ್ತಿ ಪಡೆದಿದ್ದಾರೆ. ಚಿತ್ರದುರ್ಗದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ)ಯ ಉಪನ್ಯಾಸಕ ಎಂ. ಆರ್. ಮಂಜುನಾಥ್ ಅವರನ್ನು ಮಧುಗಿರಿಯ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ ಸ್ಥಾನಕ್ಕೆ, ಬೆಂಗಳೂರಿನ ಶಿಕ್ಷಕರ ಕಲ್ಯಾಣ ನಿಧಿಯ ಕಾರ್ಯಕ್ರಮಾಧಿಕಾರಿ ಕೆ. ಕೆ. ನಾಗರತ್ನ ಅವರನ್ನು ಎಸ್‌ಎಸ್‌ಕೆಯ ರಾಜ್ಯ ಯೋಜನಾ ನಿರ್ದೇಶಕ ಕಚೇರಿಯ ಹಿರಿಯ ಕಾರ್ಯಕ್ರಮಾಧಿಕಾರಿ, ಬ್ಯಾಡಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಹೀರಪ್ಪ ಬಸಪ್ಪ ಬೆನಕಪ್ಪ ಅವರನ್ನು ಚಾಮರಾಜನಗರ ಜಿಲ್ಲೆಯ ಡಯಟ್‌ನ ಪ್ರಾಂಶುಪಾಲ, ಬೆಂಗಳೂರು ದಕ್ಷಿಣದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬಿ. ಎಚ್. ಶೇಖರಪ್ಪ ಅವರಿಗೆ ಡಿಎಸ್‌ಇಆರ್‌ಟಿ ಬೆಂಗಳೂರಿನ ಉಪನಿರ್ದೇಶಕ , ಎಸ್‌ಎಸ್‌ಕೆ ದಕ್ಷಿಣ ಕನ್ನಡದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಕೆ. ಎಲ್. ಮಂಜುಳಾ ಅವರನ್ನು ರಾಮನಗರದ ಡಯಟ್‌ನ ಪ್ರಾಂಶುಪಾಲ, ಕೂಡ್ಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ ನಾಯಕ್ ಅವರನ್ನು ವಿಜಯಪುರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಹಾಗೆಯೇ ಮಡಿಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಟಿ. ಮಂಜುನಾಥ್ ಅವರನ್ನು ಯಾದಗಿರಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ, ಕಾರವಾರದ ಆರ್‌ಎಂಎಸ್‌ಎಯ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಲತಾ ಮೋಹನ್ ದಾಸ್ ನಾಯಕ್ ಅವರನ್ನು ಕಾರವಾರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪನಿರ್ದೇಶಕ, ರಾಮನಗರದ ಡಯಟ್‌ನ ಹಿರಿಯ ಉಪನ್ಯಾಸಕ ರಂಗಸ್ವಾಮಿ ಎ. ಆರ್. ಅವರನ್ನು ಜಮಖಂಡಿ ಸಿಟಿಇಯ ಪ್ರವಾಚಕರು, ಮೈಸೂರು ಗ್ರಾಮಾಂತರದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಎ. ಮಲ್ಲೇಶ್ವರಿ ಚಾಮರಾಜನಗರ ಡಯಟ್‌ನ ಪ್ರಾಂಶುಪಾಲ, ಎಸ್‌ಎಸ್‌ಕೆಯ ಕಾರ್ಯಕ್ರಮಾಧಿಕಾರಿ ಐ. ಎಫ್. ಮ್ಯಾಗಿ ಅವರನ್ನು ಬೆಂಗಳೂರು ನಗರ ಜಿಲ್ಲೆಯ ಡಯಟ್‌ನ ಪ್ರಾಂಶುಪಾಲ, ಜಗಳೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಿ ಅವರನ್ನು ಚಿತ್ರದುರ್ಗ ಸಿಟಿಇಯ ಪ್ರವಾಚಕ, ತಿಪಟೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕೆ. ಪ್ರಭುಸ್ವಾಮಿ ಅವರನ್ನು ಬೆಂಗಳೂರಿನ ಆಯುಕ್ತರ ಕಚೇರಿಯ ಅಲ್ಪಸಂಖ್ಯಾಕ ವಿಭಾಗದ ಉಪನಿರ್ದೇಶಕರ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.