Advertisement

15 ಸಾವಿರ ಹುದ್ದೆಗೆ ಒಂದೂವರೆ ಲಕ್ಷ ಅರ್ಜಿ

10:46 PM Apr 21, 2022 | Team Udayavani |

ಬೆಂಗಳೂರು: ಶಿಕ್ಷಣ ಇಲಾಖೆಯು ಪದವೀಧರ ಪ್ರಾಥಮಿಕ ಶಾಲಾ (6-8ನೇ ತರಗತಿ) ಶಿಕ್ಷಕರ ನೇಮಕಾತಿಗಾಗಿ ಕರೆದಿರುವ 15 ಸಾವಿರ ಹುದ್ದೆಗಳಿಗೆ ದಾಖಲೆ ಮಟ್ಟದಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಬರೋಬ್ಬರಿ ಒಂದೂವರೆ ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

Advertisement

ಕಲ್ಯಾಣ ಕರ್ನಾಟಕದ 5 ಸಾವಿರ, ಇತರ ಜಿಲ್ಲೆಗಳ 10 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. ಮಾ.23ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಶುಕ್ರವಾರ (ಎ. 22) ಅರ್ಜಿ ಸಲ್ಲಿಸಲು ಕೊನೆಯ ದಿನ. ಮೇ 21 ಮತ್ತು 22ರಂದು ಸ್ಪರ್ಧಾತ್ಮಕ ಪರೀಕ್ಷೆಗಳು (ಸಿಇಟಿ) ನಡೆಯಲಿವೆ. ಗುರುವಾರ ಮಧ್ಯಾಹ್ನದ 1.20ರ ವೇಳೆಗೆ ಒಟ್ಟಾರೆ 1,46,386 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 94,136 ಮಂದಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 86,893 ಮಂದಿ ಶುಲ್ಕ ಪಾವತಿಸಿದ್ದಾರೆ.

ಸಮಾಜ ವಿಜ್ಞಾನ: 60 ಸಾವಿರ ಅರ್ಜಿ :

ಶೇ. 40ರಷ್ಟು ಅರ್ಜಿಗಳು ಸಮಾಜ ವಿಜ್ಞಾನ ವಿಷಯ ಬೋಧನೆಗೆ ಸಲ್ಲಿಕೆಯಾಗಿವೆ. ಕಲ್ಯಾಣ ಕರ್ನಾಟಕದಲ್ಲಿ 2,250 ಹಾಗೂ ಇತರೆ ಭಾಗಗಳಲ್ಲಿ 2,750 ಸೇರಿ ಒಟ್ಟಾರೆ 5 ಸಾವಿರ ಹುದ್ದೆಗಳಿವೆ. ಇದಕ್ಕೆ 60,825 ಅರ್ಜಿಗಳು ಸಲ್ಲಿಕೆಯಾಗಿವೆ. ಬಿ.ಇಡಿ ನಲ್ಲಿ ಕನ್ನಡ ಹಾಗೂ ಸಮಾಜ ವಿಜ್ಞಾನ ಎರಡೂ ವಿಷಯಗಳನ್ನು ಹೆಚ್ಚಿನ ಜನರು ಬೋಧನೆ ಮಾಡುತ್ತಾರೆ. ಹೀಗಾಗಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಅನಂತರದ ಸ್ಥಾನದಲ್ಲಿ ಗಣಿತ ಮತ್ತು ವಿಜ್ಞಾನ ಸೇರಿ 6,500 ಹುದ್ದೆಗಳಿದ್ದು, 17,551 ಅರ್ಜಿಗಳು ಬಂದಿವೆ. 1,500 ಇಂಗ್ಲಿಷ್‌ ಶಿಕ್ಷಕ ಹುದ್ದೆಗಳಿದ್ದು, 12,935 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, 2 ಸಾವಿರ ಹುದ್ದೆಗಳಿಗೆ ಜೀವ ವಿಜ್ಞಾನ ವಿಭಾಗದಲ್ಲಿ ಕೇವಲ 4 ಸಾವಿರ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. 2017 ಮತ್ತು 2019ರಲ್ಲಿ 10 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಕರೆದಿದ್ದ ಸಮಯದಲ್ಲಿ ಗರಿಷ್ಠ 70 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಈ ಬಾರಿ ಅತೀ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಅಭ್ಯರ್ಥಿಗಳ ಗೊಂದಲಗಳಿಗೆ ಪರಿಹಾರ :

Advertisement

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೊ) ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಗ್ರೇಡ್‌ ಮಾದರಿಯಲ್ಲಿ ಫ‌ಲಿತಾಂಶ ನೀಡಿವೆ. ಸಿಇಟಿ ಪರೀಕ್ಷೆಯಲ್ಲಿ ಅಂಕಗಳನ್ನು ಪರಿಗಣಿಸುವುದರಿಂದ ಗ್ರೇಡ್‌ ಮಾದರಿ ಫ‌ಲಿತಾಂಶವು ಅಭ್ಯರ್ಥಿಗಳಲ್ಲಿ ತಾಂತ್ರಿಕವಾಗಿ ಸಮಸ್ಯೆಯಾಗಬಹುದು ಎಂಬ ಆತಂಕ ಮೂಡಿಸಿತ್ತು. ಸಂಬಂಧಪಟ್ಟ ವಿವಿಗಳಿಂದ ಗ್ರೇಡ್‌ ಅನ್ನು ಅಂಕಗಳಿಗೆ ಪರಿವರ್ತಿಸಿ ವರದಿ ತರಿಸಿಕೊಳ್ಳಲಾಗಿದೆ. ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಪರೀಕ್ಷಾ ಪ್ರಾಧಿಕಾರವಾದ ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

ಕಾರಣವೇನು? :

 

  • ಸಿಇಟಿ ಅರ್ಹತಾ ಮಾನದಂಡದ ಅಂಕಗಳನ್ನು ಕಡಿಮೆ ಮಾಡಿರುವುದು. ಪತ್ರಿಕೆ-2ರಲ್ಲಿ ಈವರೆಗೆ ಅರ್ಹತೆ ಪಡೆಯಲು ಶೇ.50 ಅಂಕ ಬೇಕಿತ್ತು. ಇದನ್ನು ಶೇ. 45 ಅಂಕಗಳಿಗೆ ಇಳಿಸಲಾಗಿದೆ.
  • ಪತ್ರಿಕೆ-3ರಲ್ಲಿ ಶೇ.60 ಇದ್ದ ಅರ್ಹತಾ ಅಂಕವನ್ನು ಶೇ. 50ಕ್ಕೆ ಇಳಿಸಿರುವುದು.
  • ಒಂದು ಬಾರಿಗೆ ಎಲ್ಲ ವರ್ಗದವರಿಗೆ ಅನ್ವಯವಾಗುವಂತೆ 2 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿರುವುದು.
  • ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣ ರಾಗಿರುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು.
  • 3 ವರ್ಷಗಳ ಅನಂತರ ಹುದ್ದೆ ಭರ್ತಿಗೆ ಸರ್ಕಾರ ಮುಂದಾಗಿರುವುದು.

 

-ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next