Advertisement

ಮಕ್ಕಳಿಗಾಗಿ ಶಿಕ್ಷಣ ಅಟ್‌ ಹೋಂ ಕಾರ್ಯಕ್ರಮ

06:19 PM Aug 11, 2021 | Team Udayavani |

ತುಮಕೂರು: ಜಿಲ್ಲೆಯ ಎಲ್ಲಾ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲೆಯ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಅಟ್‌ ಹೋಮ್‌ ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.

Advertisement

ಪ್ರಸ್ತುತ ಕೋವಿಡ್‌ ಸನ್ನಿವೇಶದಲ್ಲಿ ಮಕ್ಕಳ ನಿರಂತರ ಕಲಿಕೆಗೆ ಹಿನ್ನೆಡೆ ಆಗಿರುವುದರಿಂದ ಪರಿಣಾಮಕಾರಿ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆ ಶಿಕ್ಷಣ ಫೌಂಡೇಶನ್‌ ಹಾಗೂ ಮೈಂಡ್‌ ಟ್ರೀ ಫೌ ಡೇಶನ್‌ ಸಹಯೋಗದಲ್ಲಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿ ಜಿಲ್ಲಾದ್ಯಂತ ಶಿಕ್ಷಣ
ಅಟ್‌ ಹೋಮ್‌ ಎಂಬ ವಿನೂತನ ಕಾರ್ಯಕ್ರಮ ರೂಪಿಸಲು ತಯಾರಿಯಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.

ಏನಿದು ಶಿಕ್ಷಣ ಅಟ್‌ ಹೋಂ?: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ನೀಡಲು ಹಾಗೂ
ಕೋವಿಡ್‌ ವೇಳೆ ನಿರಂತರ 2 ವರ್ಷಗಳಿಂದ ಶೈಕ್ಷಣಿಕ ಕೌಶಲ್ಯ ಮತ್ತು ಭಾಷಾ ಕೌಶಲ್ಯಗಳ ಚಟುವಟಿಕೆಗೆ ಹಿನ್ನೆಡೆ ಆಗಿರುವ ಕಾರಣ ವಿದ್ಯಾರ್ಥಿಗಳನ್ನು ಸ್ವಯಂ ಕಲಿಕೆಯಲ್ಲಿ ತೊಡಗಿಸಲು ಶಿಕ್ಷಣ ಅಟ್‌ ಹೋಂ ಕಾರ್ಯಕ್ರಮ ರೂಪಿಸಲಾಗಿದೆ.

ತುಮಕೂರು ಶೈಕ್ಷಣಿಕ ಜಿಲ್ಲೆಯ 43,689 ಹಾಗೂ ಮಧುಗಿರಿ ಶೈಕ್ಷಣಿಕ 32,760 ಸೇರಿ ಒಟ್ಟು 76,449 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯಲಿದ್ದಾರೆ. ಈ ಕಾರ್ಯಕ್ರಮದಡಿ 4 ರಿಂದ 7ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಗಣಿತದ ಕ್ಷಿಷ್ಟಕರ ಅಭ್ಯಾಸಗಳ
ಮಾರ್ಗದರ್ಶನ ನೀಡುವುದಾಗಿದೆ.

ಕಾರ್ಯಕ್ರಮದ ಉದ್ದೇಶ: 4 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಂಖ್ಯೆ,ಸಂಕಲನ ಮತ್ತು ವ್ಯವಕಲನ ಹಾಗೂ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಕಾರದಲ್ಲಿ ಕಲಿಕಾ ಸಾಮರ್ಥ್ಯದ ಅಭ್ಯಾಸಗಳಿರುತ್ತವೆ. ಅಭ್ಯಾಸ ಪುಸ್ತಕದ ಪ್ರತಿ ಪುಟದಲ್ಲಿ 10 ಪ್ರಶ್ನೆಗಳಿದ್ದು, ಎಲ್ಲವನ್ನೂ ಕಡ್ಡಾಯವಾಗಿ ಉತ್ತರಿಸುವಂತೆ ಹಾಗೂ ಪ್ರತಿವಾರ ಕನಿಷ್ಠ 2 ಪುಟಗಳನ್ನು ಅಭ್ಯಾಸ ಮಾಡುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುವುದು. ಗಣಿತ ಅಭ್ಯಾಸ ಪುಸ್ತಕ ಮುಗಿದ ಬಳಿಕ ಕೊನೆಯಲ್ಲಿ ಇರುವ
ಕಿರುಪರೀಕ್ಷಾ ಪರೀಕ್ಷೆ ತೆಗೆದುಕೊಳ್ಳುವಂತೆ ಶಿಕ್ಷಕರು ಮೇಲ್ವಿಚಾಕರಣೆ ಮಾಡಲಿದ್ದಾರೆ.

Advertisement

ಸ್ವಯಂ ಕಲಿಕೆಗೆ ಪ್ರೇರಣೆ: ಪ್ರಸ್ತುತ ಆನ್‌ಲೈನ್‌ ಶಿಕ್ಷಣ, ಅಂತರ್ಜಾಲದ ವ್ಯವಸ್ಥೆಯಿದ್ದು, ಈ ವ್ಯವಸ್ಥೆ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಕನಿಷ್ಠ ಆಫ್ಲೈನ್‌ ಶಿಕ್ಷಣದ ಅಗತ್ಯತೆಯಿರುವ ದಿಸೆಯಲ್ಲಿ ಸ್ವಯಂ-ಕಲಿಕೆ ಯನ್ನು ಪ್ರೇರೇಪಿಸಲು ಅಭ್ಯಾಸ ಪುಸ್ತಕ ಹಾಗೂ ಚಟುವಟಿಕೆ ಪುಸ್ತಕಗಳನ್ನು ವಿನ್ಯಾಸಗೊಳಿಸಲಾಗಿದೆ. ಕಲಿಕೆಯ ವಿಭಿನ್ನ ಅಂಶಗಳನ್ನು ಉತ್ತೇಜಿಸುವ ಮತ್ತು ವಿಭಿನ್ನ ಕೌಶಲ್ಯಗಳನ್ನು ಒಳಗೊಂಡಿರುವ ವಿವಿಧ
ಚಟುವಟಿಕೆಗಳನ್ನು ಈ ಪುಸ್ತಕದಲ್ಲಿ ಆಕರ್ಷಕವಾಗಿ ರಚಿಸಲಾಗಿದೆ. ಪ್ರತಿವಾರದ ಅಭ್ಯಾಸಗಳ ಜೊತೆಗೆ ಗಣಿತ, ಭಾಷೆ, ವಿಜ್ಞಾನ, ಚಿತ್ರಕಲೆ, ಕಲೆ ಮತ್ತು ಕರಕುಶಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಈ ಪುಸ್ತಕಗಳು ಸ್ವಯಂ ವಿವರಣಾತ್ಮಕವಾಗಿವೆ.

ಇದನ್ನೂ ಓದಿ:ವರ್ಷಕ್ಕೊಬ್ಬ ರೈತರಿಗೆ ರೇಷ್ಮೆ ಇಲಾಖೆಯಿಂದ ಸಬ್ಸಿಡಿ!

ಪುಸ್ತಕ ಅಭ್ಯಾಸ ವಿಧಾನ
ವಿದ್ಯಾರ್ಥಿಗಳಿಗೆ 3 ತಿಂಗಳಿಗೆ ಒಂದರಂತೆ 2 ಚಟುವಟಿಕೆ ಮತ್ತು ಪ್ರಾಜೆಕ್ಟ್ ಪ್ಲಾನರ್‌ ಪುಸ್ತಕಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ಮೊದಲಿಗೆ 3 ತಿಂಗಳು 1ನೇ ಚಟುವಟಿಕೆ ಮತ್ತು ಪ್ರಾಜೆಕ್ಟ್ ಪ್ಲಾನರ್‌ ಪುಸ್ತಕಗಳನ್ನು ಮುಗಿಸಿದ ನಂತರ 2ನೇ ಪುಸ್ತಕವನ್ನು ತೆಗೆದುಕೊಳ್ಳಬೇಕು. ಈ ಚಟುವಟಿಕೆ ಪುಸ್ತಕವನ್ನು ಎರಡೂ ಕಡೆಯಿಂದ ತೆರೆಯುವಂತೆ ವಿನ್ಯಾಸಗೊಳಿಸಲಾಗಿದೆ. ಒಂದು ಕಡೆಯಿಂದ ತೆರದರೆ ಚಟುವಟಿಕೆ ಪುಸ್ತಕ,
ಇನ್ನೊಂದು ಕಡೆಯಿಂದ ನೋಡಿದಾಗ ಪ್ರಾಜೆಕ್ಟ್ ಪ್ಲಾನರ್‌ ಸಿಗುತ್ತದೆ. ವಿದ್ಯಾರ್ಥಿಗಳು ಪ್ರತಿವಾರ ಒಂದು ಚಟುವಟಿಕೆಯನ್ನು ಮಾತ್ರ ಅಭ್ಯಾಸ
ಮಾಡಬೇಕು. ವಿದ್ಯಾರ್ಥಿಗಳು ಕ್ರಮವಾಗಿ ಮೊದಲ ವಾರದ ಚಟುವಟಿಕೆಗಳನ್ನು ಪೂರ್ಣಗೊಳಿಸಿದ ನಂತರವೇ ಮುಂದಿನ ಚಟುವಟಿಕೆಗಳನ್ನು ಅಭ್ಯಾಸ ಮಾಡಬೇಕು. ಶಿಕ್ಷಣ ಅಟ್‌ ಹೋಂ ಕಾರ್ಯಕ್ರಮವನ್ನು ಮೈಂಡ್‌ಟ್ರೀ ಸಂಸ್ಥೆಯು ಈಗಾಗಲೇ ಬೆಂಗಳೂರಿನ ಕನಕಪುರದಲ್ಲಿ
ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿದ್ದು, ಯಶಸ್ವಿ ಕಾಣುತ್ತಿರುವುದರಿಂದ ಜಿಲ್ಲೆಯಲ್ಲಿಯೂ ಜುಲೈ 30 ರಿಂದ ಚಾಲನೆ ನೀಡಲಾಗಿದೆ.

ಶಿಕ್ಷಕರು ತಮ್ಮ ಶಾಲೆಯ 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಅಭ್ಯಾಸ ಮತ್ತು ಚಟುವಟಿಕೆ ಪುಸ್ತಕಗಳನ್ನು ಕಡ್ಡಾಯವಾಗಿ ಅಭ್ಯಾಸ ಮಾಡುವಂತೆ ಮಾರ್ಗದರ್ಶನ ನೀಡುವ ಮೂಲಕ ನಿರಂತರಕಲಿಕೆಗೆ ಪ್ರೋತ್ಸಾಹಿಸಬೇಕು.
-ಸಿ.ನಂಜಯ್ಯ, ಸಾರ್ವಜನಿಕ ಶಿಕ್ಷಣ
ಇಲಾಖೆ ಉಪನಿರ್ದೇಶಕ

ಕೋವಿಡ್‌ ವೇಳೆ ಮಕ್ಕಳ ನಿರಂತರ ಕಲಿಕೆಗೆ ಹಿನ್ನಡೆ ಆಗಿರುವುದರಿಂದ ಪರಿಣಾಮಕಾರಿ ಶಿಕ್ಷಣಕ್ಕಾಗಿ ಶಿಕ್ಷಣ ಇಲಾಖೆಯು ಶಿಕ್ಷಣ ಫೌಂಡೇಶನ್‌ ಹಾಗೂ ಮೈಂಡ್‌ಟ್ರೀ ಫೌಂಡೇಶನ್‌ ಸಹಯೋಗದಲ್ಲಿ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ ಸೇರಿದಂತೆ ಜಿಲ್ಲಾದ್ಯಂತ ಶಿಕ್ಷಣ ಅಟ್‌ ಹೋಮ್‌ ಎಂಬ ವಿನೂತನ ಕಾರ್ಯಕ್ರಮ ರೂಪಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ.
– ಪ್ರಸನ್ನ ಒಡೆಯರ್‌,
ಸಿಇಒ ಶಿಕ್ಷಣ ಫೌಂಡೇಶನ್‌

-ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next