Advertisement

ಆಜ್ದೆಪಾಡಾ ಶ್ರೀ ಅಯ್ಯಪ್ಪ ಮಂದಿರ ಶೈಕ್ಷಣಿಕ ನೆರವು ವಿತರಣೆ

05:57 PM Jul 20, 2018 | Team Udayavani |

 ಡೊಂಬಿವಲಿ: ಆಜ್ದೆಪಾಡಾ ಶ್ರೀ ಅಯ್ಯಪ್ಪ ಮಂದಿರವು ಕೇವಲ ಧಾರ್ಮಿಕವಾಗಿ ಬೆಳೆಯುತ್ತಿರುವುದಲ್ಲದೆ, ಶೈಕ್ಷಣಿಕವಾಗಿ ಅಪಾರ ಸೇವೆಯನ್ನು ಮಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಮಂಡಳಿಯ ವಿದ್ಯಾರ್ಥಿಗಳಿಗೆ ಧರ್ಮಾರ್ಥ ಶಿಕ್ಷಣ ತರಗತಿಗನ್ನು ನಡೆಸುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿಗಳು ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಂ ಅವರ ನಾಲ್ಕು ಮಂತ್ರಗಳನ್ನು ಪಾಲಿಸಿದರೆ ಜೀವನದಲ್ಲಿ ಉತ್ತಮ ವ್ಯಕ್ತಿಯಾಗುವುದರಲ್ಲಿ ಸಂದೇಹವಿಲ್ಲ. ಶಿಕ್ಷಕರು ನಿಸ್ವಾರ್ಥ ಭಾವನೆಯಿಂದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಬಾಳನ್ನು ಬೆಳಗುತ್ತಾರೆ. ಅಂತಹ ಶಿಕ್ಷಕರಿಗೆ ವಿದ್ಯಾರ್ಥಿಗಳು ಗೌರವ ನೀಡುವುದು ಆದ್ಯ ಕರ್ತವ್ಯವಾಗಿದೆ. ಶ್ರೀ ಅಯ್ಯಪ್ಪ ದೇವಸ್ಥಾನವನ್ನು ಧಾರ್ಮಿಕತೆಯೊಂದಿಗೆ ಶೈಕ್ಷಣಿಕವಾಗಿ ಬೆಳೆಸುತ್ತಿರುವ ಕಾರ್ಯಕಾರಿಣಿ ಸಮಿತಿ ಅಭಿನಂದನೆಗೆ ಅರ್ಹ. ಇಂತಹ ಉತ್ತಮ ಕಾರ್ಯ ಈ ಮಂಡಳಿಯಿಂದ ಸದಾ ನಡೆಯುತ್ತಿರಲಿ ಎಂದು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ನುಡಿದರು.
ಡೊಂಬಿವಲಿ ಆಜೆªಪಾಡಾ ಅಯ್ಯಪ್ಪ ಭಕ್ತಮಂಡಳಿ ಸಂಚಾಲಿತ ಶ್ರೀ ಅಯ್ಯಪ್ಪ ದೇವಸ್ಥಾನದ ವತಿಯಿಂದ ಮಂದಿರದ ಸಭಾಗೃಹದಲ್ಲಿ ನಡೆದ ಗತ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ವಿದ್ಯಾರ್ಥಿಗಳು ಪಡೆದ ಶೈಕ್ಷಣಿಕ ನೆರವನ್ನು ದೇವರ ಪ್ರಸಾದ ಎಂದು ಸ್ವೀಕರಿಸಿ ಜೀವನದಲ್ಲಿ ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಕಿವಿಮಾತು ಹೇಳಿದರು.

Advertisement

ಅತಿಥಿಯಾಗಿ ಪಾಲ್ಗೊಂಡ ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್‌ ಕುಲಾಲ್‌ ಅವರು ಮಾತನಾಡಿ, ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಗೆ ಶಿಕ್ಷಣ ಅಗತ್ಯವಾಗಿದೆ. ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಪರಿಸರದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ಧೇಶದಿಂದ ಉಚಿತ ಶಿಕ್ಷಣ ತರಗತಿಗಳನ್ನು ನೀಡುತ್ತಿರುವುದು ಅಭಿನಂದನೀಯ. ವಿದ್ಯಾರ್ಥಿಗಳು ತಂದೆ-ತಾಯಿ, ತಾವು ಕಲಿತ ಶಾಲೆ, ಶಿಕ್ಷಕರನ್ನು ಹಾಗೂ ಗುರುಹಿರಿಯರನ್ನು ಎಂದಿಗೂ ಮರೆಯಬಾರದು. ವಿದ್ಯಾರ್ಥಿ ಗಳು ಎಳವೆಯಿಂದಲೇ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಬದುಕು ಸುಂದರವಾಗಿರುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ಹೇಳಿದರು.

ಇನ್ನೋರ್ವ ಅತಿಥಿ ಉಮೇಶ್‌ ಪೈ ಅವರು ಮಾತನಾಡಿ, ಮಕ್ಕಳು ಶಿಕ್ಷಣವನ್ನು ಪಡೆದರೆ ಎಂತಹ ಕಷ್ಟದ ಸಂದರ್ಭದಲ್ಲೂ ಸಹಕಾರಿಯಾಗಬಲ್ಲದು. ನಾನು ಉತ್ತಮ ಶಿಕ್ಷಣವನ್ನು ಪಡೆದು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ವಿದ್ಯಾರ್ಥಿಗಳು ಕಠಿನ ಪರಿಶ್ರಮದ ಮೂಲಕ ಅಭ್ಯಾಸಗೈದು ತಮ್ಮ ಗುರಿಯನ್ನು ತಲುಪಬೇಕು. ವಾಟ್ಸಾಪ್‌, ಫೇಸ್‌ಬುಕ್‌ ಇನ್ನಿತರ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಉತ್ತಮ ಗೆಳೆಯರ ಸಂಗ ಮಾಡಿದ್ದಲ್ಲಿ ಜೀವನದಲ್ಲಿ ಯಶಸ್ಸು ಖಂಡಿತ ಎಂದರು.
ಶ್ರೀ ಅಯ್ಯಪ್ಪ ಭಕ್ತ ಮಂಡಳಿಯ ಅಧ್ಯಕ್ಷ ಸದಾನಂದ ಶೆಟ್ಟಿ ಮಾತನಾಡಿ, ಶ್ರೀ ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನ್ನದಾನ ಹಾಗೂ ಕಳೆದ ಮೂರು ವರ್ಷಗಳಿಂದ ಶಿಕ್ಷಣ ದಾನ ಪ್ರಾರಂಭಿಸಿ ಅದರಲ್ಲಿ ಯಶಸ್ಸು ಕಂಡಿದ್ದೇವೆ. ಇಂತಹ ಉತ್ತಮ ಕಾರ್ಯ ಶ್ರೀ ಅಯ್ಯಪ್ಪ ಭಕ್ತ ಮಂಡಳಿಯಿಂದ ನಡೆಯುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳು ದಾನಿಗಳ ಸಹಕಾರ, ಭಕ್ತಮಂಡಳಿಯ ಶ್ರಮದಿಂದ ನಡೆಯುತ್ತಿವೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದ ಉಚಿತ ಶಿಕ್ಷಣ ತರಗತಿಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. 

ಅದರೊಂದಿಗೆ ಈ ಯೋಜನೆಯ ರೂವಾರಿಗಳಾದ ಮನೋಜ್‌ ಭಂಡಾರಿ ಹಾಗೂ ಅವರ ಪತ್ನಿ ಕೃತಿಕಾ ಭಂಡಾರಿ, ಶಿಕ್ಷಕ ಚೌಹಾಣ್‌ ಸರ್‌ ಅವರನ್ನು ಮಂದಿರದ ವತಿಯಿಂದ ಗೌರವಿಸಲಾಯಿತು. ಕೃತಿಕಾ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುನಂದಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಸದಾನಂದ ಶೆಟ್ಟಿ, ನಾರಾಯಣ ಶೆಟ್ಟಿ, ಗುರು ಸ್ವಾಮಿ, ದಿವಾಕರ ಶೆಟ್ಟಿ ಇಂದ್ರಾಳಿ, ಉಮೇಶ್‌ ಪೈ, ಜಯರಾಮ ಶೆಟ್ಟಿ, ಅಜಿತ್‌ ಶೆಟ್ಟಿ, ರಾಜೀವ ಭಂಡಾರಿ, ಬಾಲಕೃಷ್ಣ ಭಂಡಾರಿ, ದೇವದಾಸ್‌ ಕುಲಾಲ್‌ ಮೊದಲಾದವರು ಉಪಸ್ಥಿತರಿದ್ದರು. ಹೇಮಂತ್‌ ಶೆಟ್ಟಿ  ಅವರು ಕಾರ್ಯಕ್ರಮ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿದರು. ಜಯರಾಮ ಶೆಟ್ಟಿ  ಅವರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next