Advertisement

ಓದು, ಉದ್ಯೋಗದೊಂದಿಗೆ ತಂತ್ರಜ್ಞಾನದ ಕೋರ್ಸ್‌

11:10 PM Jun 02, 2022 | Team Udayavani |

ಉಡುಪಿ : ರೊಬೋಟಿಕ್ಸ್‌, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಎಲೆಕ್ಟ್ರಿಕಲ್‌ ವಾಹನ ನಿರ್ವಹಣೆ, ಅತ್ಯಾಧುನಿಕ ಪ್ಲಂಬಿಂಗ್‌, ವೆಲ್ಡಿಂಗ್‌ ಸಹಿತ ಆಧುನಿಕ ತಂತ್ರಜ್ಞಾನದ ವಿವಿಧ ಕೋರ್ಸ್‌ಗಳನ್ನು ಓದು, ಉದ್ಯೋಗದ ಜತೆಗೂ ಪಡೆಯಬಹುದಾದ ವ್ಯವಸ್ಥೆಯನ್ನು ಈಗ ರಾಜ್ಯ ಸರಕಾರ ಹಾಗೂ ಕೌಶಲಾಭಿವೃದ್ಧಿ ಉದ್ಯಮ ಮತ್ತು ಜೀವನೋಪಾಯ ಇಲಾಖೆ ಕಲ್ಪಿಸಿದೆ.
ಕೈಗಾರಿಕ ತರಬೇತಿ ಕೇಂದ್ರ(ಐಟಿಐ)ಗಳನ್ನು ಮೇಲ್ದ ರ್ಜೆಗೆ ಏರಿಸಲು ಟಾಟಾ ಟೆಕ್ನಾಲಜಿಸ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಉಡುಪಿ ಜಿಲ್ಲೆಯ 4, ದಕ್ಷಿಣ ಕನ್ನಡ ಜಿಲ್ಲೆಯ 5 ಐಟಿಐ ಕೇಂದ್ರಗಳು ತಲಾ 30 ಕೋ.ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ಆಧಾರದಲ್ಲಿ ಉನ್ನತೀಕರಿಸಲಾತ್ತಿದೆ. ಇದರ ಜತೆಗೆ 23 ಬಗೆಯ ಅಲ್ಪಾವಧಿಯ ಕೋರ್ಸ್‌ಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುತ್ತಿದೆ. ದೀರ್ಘಾವಧಿಯ 11 ಕೋರ್ಸ್‌ಗಳಲ್ಲಿ ಆರನ್ನು ಈಗಾಗಲೇ ಎಲ್ಲ ಐಟಿಐಗಳಲ್ಲೂ ಅನುಷ್ಠಾನ ಮಾಡಲಾಗಿದೆ.

Advertisement

ಹೊಸ ಕೋರ್ಸ್‌ಗಳು
ಸಂಶೋಧನೆ ಮತ್ತು ವಿನ್ಯಾಸಾಲೋಚನೆ, ಉತ್ಪನ್ನ ವಿನ್ಯಾಸದ ಮೂಲಭೂತಗಳು, ಪ್ರಕ್ರಿಯೆ ನಿಯಂತ್ರಣ ಮತ್ತು ಸ್ವಯಂ ಚಾಲನೆ, ವಾಹನ ವಿದ್ಯುನ್ಮಾನ ವಿನ್ಯಾಸ ಹಾಗೂ ಅಭಿವೃದ್ಧಿ, ಉತ್ಪನ್ನ ಪರಿಶೀಲನೆ ಹಾಗೂ ವಿಶ್ಲೇಷಣೆ, ವಾಹನ ವಿದ್ಯುನ್ಮಾನ ನಿರ್ವಹಣೆ, ಉತ್ಪನ್ನ ವಿನ್ಯಾಸ ಹಾಗೂ ಅಭಿವೃದ್ಧಿ, ಗಣಕಯಂತ್ರ ಉಪಕೃತ ಸಲಕರಣೆ ನಿರ್ಮಾಣ, ಅತ್ಯಾಧುನಿಕ ಗಣಕಯಂತ್ರ ಉಪಕೃತ ಸಲಕರಣೆ ನಿರ್ಮಾಣ, ಅತ್ಯಾಧುನಿಕ ವಾಹನ ಅಭಿಯಂತ್ರಣ, ವಾಹನ ನಿರ್ವಹಣೆ, ದುರಸ್ತಿ ಹಾಗೂ ಸಂಪೂರ್ಣ ದುರಸ್ತಿ, ವಿದ್ಯುನ್ಮಾನ ವಾಹನಗಳು, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಅತ್ಯಾಧುನಿಕ ಸಲಕರಣೆ ನಿರ್ಮಾಣ (ಮಿಲ್‌), ಅತ್ಯಾಧುನಿಕ ಸಲಕರಣೆ ನಿರ್ಮಾಣ (ಸಿಎಸ್‌ಸಿ ಲೇಥ್‌), ಅತ್ಯಾಧುನಿಕ ಸಲಕರಣೆ ನಿರ್ಮಾಣ (ರೊಬೋಟಿಕ್‌ 4 ಮತ್ತು 5ನೇ ಆಕ್ಸಿಸ್‌ ಮಿಲ್‌), ಅತ್ಯಾಧುನಿಕ ಆಡಿಟೀವ್‌ ಉತ್ಪಾದನೆ, ಅತ್ಯಾಧುನಿಕ ವೆಲ್ಡಿಂಗ್‌, ವಾಹನ ಅಭಿಯಂತ್ರಣದ ಮೂಲಭೂತಗಳು, ಅತ್ಯಾಧುನಿಕ ವರ್ಣಲೇಪನ ತಂತ್ರಜ್ಞಾನ, ಕೈಗಾರಿಕ ರೊಬೋಟೆಕ್‌-1. ಕೈಗಾರಿಕ ರೊಬೋಟೆಕ್‌-2, ಅತ್ಯಾಧುನಿಕ ವೆಲ್ಡಿಂಗ್‌ ಹೀಗೆ 23 ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗುತ್ತಿದೆ.

ಕೋರ್ಸ್‌ಗೆ ಸೇರುವುದು ಹೇಗೆ?
ಅಲ್ಪಾವಧಿಯ ಕೋರ್ಸ್‌ಗೆ ಎಸೆಸೆಲ್ಸಿಯಲ್ಲಿ ಉತ್ತೀರ್ಣವಾಗಿರುವ ಅಂಕಪಟ್ಟಿಯೇ ಪ್ರಮುಖ ಮಾನದಂಡವಾಗಿರುತ್ತದೆ. ಈಗಾಗಲೇ ಉನ್ನತೀಕರಿಸಿರುವ ಐಟಿಐಗಳಲ್ಲಿ ಮಾತ್ರ ಈ ಕೋರ್ಸ್‌ ಲಭ್ಯವಿದೆ. ಅದರಲ್ಲೂ ಎಲ್ಲವೂ ಲಭ್ಯವಿಲ್ಲ. ಹಂತ ಹಂತವಾಗಿ ಅನುಷ್ಠಾನ ಮಾಡ ಲಾಗುವುದರಿಂದ ಆರಂಭದಲ್ಲಿ ರೊಬೋಟಿಕ್‌ ತಂತ್ರಜ್ಞಾನ, ವಿದ್ಯುನ್ಮಾನ ವಾಹನ ನಿರ್ವಹಣೆ, ಅತ್ಯಾಧುನಿಕ ಪ್ಲಂಬಿಂಗ್‌, ಅತ್ಯಾಧುನಿಕ ವೆಲ್ಡಿಂಗ್‌ ಇತ್ಯಾದಿ ಕೋರ್ಸ್‌ಗಳು ಮಾತ್ರ ಲಭ್ಯವಿದೆ. ಎಸೆಸೆಲ್ಸಿ ಫ‌ಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು ಮುಂದಿನ ಕೆಲವೇ ದಿನಗಳಲ್ಲಿ ಇಲಾಖೆಯಿಂದ ಪ್ರವೇಶಾತಿ ಮಾರ್ಗಸೂಚಿ ಹೊರಡಿಸಲಾಗುತ್ತದೆ. ಆನ್‌ಲೈನ್‌ ಅಥವಾ ಸ್ಥಳೀಯವಾಗಿರುವ ಉನ್ನತೀಕರಿಸಿದ ಐಟಿಐಗೆ ಭೇಟಿ ನೀಡಿ ದಾಖಲಾತಿ ವಿವರ ಪಡೆಯಬಹುದಾಗಿದೆ.

ಸಿಬಂದಿಗೆ ತರಬೇತಿ
ಅಲ್ಪಾವಧಿಯ ಕೋರ್ಸ್‌ ಅನುಷ್ಠಾನ ಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತೀ ಐಟಿಐನಿಂದ ತಲಾ ಇಬ್ಬರಿಗೆ ಟಾಟಾ ಟೆಕ್ನಾಲಜಿ ಮೂಲಕ ತರಬೇತಿ ಯನ್ನು ನೀಡಲಾಗುತ್ತಿದೆ. ಉಭಯ ಜಿಲ್ಲೆಯ ಉನ್ನತೀಕರಿಸಿರುವ 9 ಐಟಿಐಗಳಲ್ಲಿ ಕೆಲವು ಸಿಬಂದಿ ಈಗಾಗಲೇ ತರಬೇತಿಯನ್ನು ಪಡೆದಿದ್ದಾರೆ. ತರಬೇತಿ ಪಡೆದ ಸಿಬಂದಿ ತಮ್ಮ ಸಂಸ್ಥೆಯ ಇತರ ಸಿಬಂದಿಗೂ ನಿರ್ದಿಷ್ಟ ಪಠ್ಯದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಕೋರ್ಸ್‌ ಹೇಗಿರಲಿದೆ?
ಪ್ರತೀ ಕೋರ್ಸ್‌ಗೆ 3 ತಿಂಗಳ ಕಾಲಮಿತಿ ಇರುತ್ತದೆ. ಇದನ್ನೇ ಎರಡು ಗಂಟೆಗಳ ತರಬೇತಿ ನೀಡಲಾಗುತ್ತದೆ. ಪ್ರತೀ ಬ್ಯಾಚ್‌ಗೆ 20 ಅಭ್ಯರ್ಥಿ ಗಳನ್ನು ಮೆರಿಟ್‌ ಲಿಸ್ಟ್‌ ಆಧಾರದಲ್ಲಿ ದಾಖಲಾತಿ ಮಾಡಿಕೊಳ್ಳಲಾಗುತ್ತದೆ. ಐಟಿಐ ಪೂರೈಸಿರುವವರು, ಪಿಯುಸಿ, ಪದವಿ ಓದುತ್ತಿರುವವರು, ವಿವಿಧ ಉದ್ಯೋಗ ಮಾಡುತ್ತಿರುವ 40 ವರ್ಷ ಒಳಗಿನವರು ಈ ಕೋರ್ಸ್‌ಗೆ ಸೇರಲು ಅರ್ಹರಿರುತ್ತಾರೆ.

Advertisement

ಉನ್ನತೀಕರಿಸಿದ ಐಟಿಐಗಳು
ದ.ಕ. ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿ, ಮಂಗಳೂರಿನಲ್ಲಿ ಎರಡು, ಪುತ್ತೂರು, ವಿಟ್ಲ, ಉಡುಪಿ ಜಿಲ್ಲೆಯ ಮಣಿಪಾಲ, ಪೆರ್ಡೂರು, ಬೈಂದೂರು, ಕಾರ್ಕಳದ ಸರಕಾರಿ ಐಟಿಐಗಳನ್ನು ಟಾಟಾ ಟೆಕ್ನಾಲಜೀಸ್‌ ಸಹಭಾಗಿತ್ವದಲ್ಲಿ ಉನ್ನತೀಕರಿಸಲಾಗಿದೆ.

ಉನ್ನತೀಕರಿಸಿದ ಐಟಿಐಗಳಲ್ಲಿ ಅತ್ಯಾಧುನಿಕ ಅಲ್ಪಾವಧಿಯ ಕೋರ್ಸ್‌ ಗಳನ್ನು ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ಕೆಲವು ಕೋರ್ಸ್‌ಗಳನ್ನು ಮಾತ್ರ ಶುರು ಮಾಡುತ್ತಿದ್ದೇವೆ. ಇದಕ್ಕಾಗಿ ಸಿಬಂದಿ ವರ್ಗಕ್ಕೆ ತರಬೇತಿಯನ್ನು ನೀಡಲಾಗಿದೆ. ಪಿಯುಸಿ, ಪದವಿ ಓದುತ್ತಿರುವವರು ಅಲ್ಪಾವಧಿಯ ಕೋರ್ಸ್‌ ಸೇರಿಕೊಳ್ಳಲು ಅವಕಾಶವಿದೆ.
– ಜಗದೀಶ್‌, ಉಡುಪಿ ಜಿಲ್ಲಾ ಕೌಶಲಾಧಿಕಾರಿ, ಬಾಲಕೃಷ್ಣ, ದ.ಕ. ಐಟಿಐಗಳ ಜಿಲ್ಲಾ ನೋಡೆಲ್‌ ಅಧಿಕಾರಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next