Advertisement

“ಶಿಕ್ಷಣ,ಉದ್ಯೋಗ ಅಸಮಾನತೆ ದೂರ ಮಾಡುವ ಅಸ್ತ್ರ’

09:11 PM Jun 17, 2019 | Team Udayavani |

ಕೋಟ: ಸಮಾಜದಲ್ಲಿ ಹಿಂದುಳಿದ ವ್ಯಕ್ತಿಯೋರ್ವ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗ ಗಳಿಸಿದಲ್ಲಿ ಆತನನ್ನು ಉನ್ನತ ಸ್ಥಾನಮಾನದಲ್ಲಿ ಕಾಣಲಾಗುತ್ತದೆ. ಆದ್ದರಿಂದ ಶಿಕ್ಷಣ, ಉದ್ಯೋಗ ಅಸಮಾನತೆ ದೂರ ಮಾಡುವ ಅಸ್ತ್ರ ಎಂದು ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ ಸಿ. ಕುಂದರ್‌ ಹೇಳಿದರು.

Advertisement

ಅವರು ಜೂ. 16ರಂದು ಅಖೀಲ ಕರ್ನಾಟಕ ಬತ್ತಡ ಸಮಾಜ ಕೋಟ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕೋಟ ಸಂಯುಕ್ತ ಆಶ್ರಯದಲ್ಲಿ ಕೋಟ ಕಾರಂತ ಕಲಾಭವನದಲ್ಲಿ ನಡೆದ ಉಚಿತ ನೋಟ್‌ ಪುಸ್ತಕ ಹಂಚಿಕೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವಜನಾಂಗವನ್ನು ಶಿಕ್ಷಿತರನ್ನಾಗಿಸಿ ಸಮಾಜದ ಮುಂಚೂಣಿಗೆ ತರಲು ಸಂಘಟನೆಗಳು ಪಣತೊಡಬೇಕು ಎಂದವರು ತಿಳಿಸಿದರು.

ಶಿಸ್ತು, ಸಂಸ್ಕಾರ ಮುಖ್ಯ
ಉಪನ್ಯಾಸಕ ಸಂಜೀವ ಸಿ. ಗುಂಡ್ಮಿ ಮಾತನಾಡಿ, ಮಕ್ಕಳಿಗೆ ಮನೆಯಲ್ಲಿ ಉತ್ತಮ ಶಿಸ್ತು, ಸಂಸ್ಕಾರ ಕಲಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯ. ನಾವು ಕೀಳರಿಮೆ ಬಿಟ್ಟು ಸಮಾನವಾಗಿ ಜೀವಿಸುವ ಕುರಿತು ಆಲೋಚಿಸಬೇಕು ಎಂದರು.

ಸಂಘಟನೆಯ ಅಧ್ಯಕ್ಷ ಕುಮಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮ್ಮಾನಿಸಿ ಗೌರವಿಸಲಾಯಿತು.
ಕೋಟ ಸಿ.ಎ. ಬ್ಯಾಂಕ್‌ ನಿರ್ದೇಶಕ ಮಹೇಶ್‌ ಶೆಟ್ಟಿ, ಸಂಘಟನೆಯ ಗೌರವಾಧ್ಯಕ್ಷ ನಾರಾಯಣ ಮೇಸ್ತ್ರಿ, ಐತ ಕಾರ್ಕಡ, ದಲಿತ ಸಂಘಟನೆಯ ಪ್ರಮುಖರಾದ ನಾರಾಯಣ ಮಣೂರು,ರಾಜು ಬೆಟ್ಟಿನಮನೆ ಉಪಸ್ಥಿತರಿದ್ದರು. ಕೋಟ ಹೋಬಳಿ ಶಾಖೆಯ ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಜಶೇಖರ್‌ ಗುಳ್ವಾಡಿ ಸ್ವಾಗತಿಸಿ, ಕಾರ್ಯಕ್ರಮದ ರೂವಾರಿ, ವಕೀಲ ಟಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂತೋಷ ಮಣೂರು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next