ದಾವಣಗೆರೆ: ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸುತ್ತಿದ್ದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ಬಾರಿ ಹೆಚ್ಚುವರಿಯಾಗಿ ವಾರ್ಷಿಕ ಪರೀಕ್ಷೆ-2 ಮತ್ತು 3 ನಡೆಸಿದ್ದರಿಂದ ಸುಮಾರು 25 ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಭದ್ರವಾಗಿದೆ. ಜತೆಗೆ ಒಂದು ವರ್ಷ ವ್ಯರ್ಥವಾಗುವುದು/ ಶಿಕ್ಷಣ ಮೊಟಕಾಗುವುದು ತಪ್ಪಿದೆ.
2023-24ನೇ ಸಾಲಿನ ಪರೀಕ್ಷೆ-2ರಲ್ಲಿ 69,275 ವಿದ್ಯಾರ್ಥಿಗಳು, ಪರೀಕ್ಷೆ-3ರಲ್ಲಿ 25,347 ವಿದ್ಯಾರ್ಥಿಗಳು ಸೇರಿ ಒಟ್ಟು 94,622 ಮಕ್ಕಳು ಉತ್ತೀರ್ಣರಾಗುವ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಯಾಗಿದ್ದಾರೆ. ಕೊನೆಯ ಪರೀಕ್ಷೆಯಲ್ಲಿ 8,583 ವಿದ್ಯಾರ್ಥಿನಿಯರು, 16,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ 14,885 ಮಂದಿ, ಗ್ರಾಮೀಣ ಪ್ರದೇಶದ 10,462 ಮಂದಿ ತೇರ್ಗಡೆಯಾಗಿರುವುದು ಗಮನಾರ್ಹ.
2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕೆಮರಾ, ವೆಬ್ ಕಾಸ್ಟಿಂಗ್ ಮಾಡುವ ಹೊಸ ಪದ್ಧತಿ ಜಾರಿಗೆ ತರಲಾಗಿತ್ತು. ಪರೀಕ್ಷಾ ಭಯದಿಂದಾಗಿಯೇ ಎಂಬಂತೆ ಈ ಬಾರಿಯ ಫಲಿತಾಂಶ ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಸಿದರೆ ಶೇ. 30ರಷ್ಟು ಕುಸಿದಿತ್ತು. ಕೃಪಾಂಕ ಆಕರ್ಷಿಸಲು ಪಡೆಯಬೇಕಾದ ಅರ್ಹ ಅಂಕಗಳನ್ನು ಶೇ. 35ರಿಂದ 25ಕ್ಕೆ ಇಳಿಸಿದರೂ ಫಲಿತಾಂಶ ಶೇ. 73.40ಕ್ಕೆ ನಿಂತಿತ್ತು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ 2 ಪರೀಕ್ಷೆ ನಡೆಸಿದ್ದರಿಂದ ಒಟ್ಟು ಫಲಿತಾಂಶ ಶೇ. 80 ದಾಟಿದಂತಾಗಿದೆ.
ಶಿಕ್ಷಕರಿಗೂ ಸಮಾಧಾನ
ಒಂದೇ ಪರೀಕ್ಷೆಯಾದರೆ ಮಕ್ಕಳನ್ನು ಮತ್ತೂಂದು ಪರೀಕ್ಷೆಗೆ ಅಣಿಗೊಳಿಸಲು ಹಾಗೂ ಶಾಲಾ ತರಗತಿ ಅಧ್ಯಯನಕ್ಕೆ ಅಷ್ಟಾಗಿ ತೊಂದರೆಯಾಗುತ್ತಿರಲಿಲ್ಲ. ಆಗಸ್ಟ್‌ನಲ್ಲಿಯೂ ಇನ್ನೊಂದು ಪರೀಕ್ಷೆ ನಡೆಸಿದರೆ ಉಳಿದ ತರಗತಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತದೆ ಎಂಬ ಅಸಮಾಧಾನ ಆರಂಭದಲ್ಲಿ ಶಿಕ್ಷಕರಿಂದಲೇ ವ್ಯಕ್ತವಾಗಿತ್ತು. ಆದರೆ ಕೊನೆಯ ಪರೀಕ್ಷೆಯಲ್ಲಿ ಬರೋಬ್ಬರಿ 25 ಸಾವಿರ ಮಕ್ಕಳು ಉತ್ತೀರ್ಣರಾಗಿರುವುದು ಶಿಕ್ಷಕರಲ್ಲಿಯೂ ಸಮಾಧಾನ ಮೂಡಿಸಿದೆ.
“ಗುಣಮಟ್ಟದ ಶಿಕ್ಷಣಕ್ಕೆ ಪರೀಕ್ಷೆಗಳ ಹೆಚ್ಚಳ ಒಳ್ಳೆಯದಲ್ಲ. ಆದರೆ ಪರೀಕ್ಷಾ ಕೇಂದ್ರಿತ ಇಂದಿನ ವ್ಯವಸ್ಥೆಯಲ್ಲಿ ಉತ್ತೀರ್ಣರಾಗುವುದೇ ಮುಖ್ಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಈ ಬಾರಿ 2 ಹೆಚ್ಚುವರಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಿದ್ದರಿಂದ ಸಾವಿರಾರು ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. ಹೆಚ್ಚುವರಿ ಪರೀಕ್ಷೆಯಿಂದ ಮುಖ್ಯವಾಗಿ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಳ್ಳುವುದು ತಪ್ಪಲಿದೆ.”
– ಡಾ| ಮಂಜುನಾಥ್ ಕುರ್ಕಿ, ಶಿಕ್ಷಣ ತಜ್ಞ
-ಎಚ್.ಕೆ.ನಟರಾಜ