Advertisement

ಜೀತ ಮುಕ್ತ ಪರಿವಾರದ ವಿದ್ಯಾವಂತರಿಂದಲೇ ಶಿಕ್ಷಣ

09:31 PM Sep 24, 2019 | Lakshmi GovindaRaju |

ಗೌರಿಬಿದನೂರು: ಜೀತದಿಂದ ಮುಕ್ತರಾಗಿ ಪುನರ್ವಸತಿ ಪಡದು ಸ್ವಾವಲಂಬಿ ಜೀವನ ನಡೆಸುತ್ತಿರುವ ಯುವಕರು, ರಾಜ್ಯದಲ್ಲಿ ಜೀತ ಪದ್ಧತಿಯ ಮುಕ್ತಿಗಾಗಿ ಹಾಗೂ ಜೀತಾದಳುಗಳ ಪುನರ್ವಸತಿಗಾಗಿ 34 ವರ್ಷಗಳಿಂದ ಶ್ರಮಿಸುತ್ತಿರುವ ಜೀವ ವಿಮುಕ್ತಿ ಕರ್ನಾಟಕ(ಜೀವಿಕ) ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸೇರಿ, ಗ್ರಾಮೀಣ ಬಡ ಮಕ್ಕಳಿಗಾಗಿ “ಸಂಜೆ ಶಾಲೆ’ ಎಂಬ ವಿನೂತ ಯೋಜನೆ ಆರಂಭಿಸಿದ್ದಾರೆ.

Advertisement

ಜೀವಿಕ ರಾಜ್ಯ ಮುಖ್ಯಸ್ಥ ಕಿರಣ್‌ ಕಮಲ್‌ ಪ್ರಸಾದ್‌, 1985ರಲ್ಲಿ ಆನೇಕಲ್ಲಿನಲ್ಲಿ ಜೀತದಾಳುಗಳ ವಿಮುಕ್ತಿ ಹಾಗೂ ಪುನರ್ವಸತಿಗಾಗಿ ಹೋರಾಟ ಪ್ರಾರಂಭಿಸಿದರು. ಬಳಿಕ ರಾಜ್ಯದಲ್ಲಿರುವ ಜೀತದಾಳುಗಳ ಬಾಳನ್ನು ಬೆಳಗಲು ಜೀತದಿಂದ ಮುಕ್ತಗೊಳಿಸಿ, ಸ್ವತಂತ್ರ ಬದುಕು ನಡೆಸಲು ಅವಕಾಶ ಮಾಡಕೊಡಬೇಕೆಂದು ಹೋರಾಟವನ್ನು ವಿಸ್ತರಿಸಿದರು. ಇದರಿಂದ ಸಾವಿರಾರು ಜೀತದಾಳುಗಳು ಸರ್ಕಾರದಿಂದ ಪುನರ್ವಸತಿ ಪಡೆದು ಈಗ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

2000 ಉಚಿತ ಶಾಲೆಗೆ ಚಿಂತನೆ: ಜೀವಿಕ ಸಂಸ್ಥಾಪಕ ಮುಖ್ಯಸ್ಥ ಡಾ. ಕಿರಣ್‌ಕಮಲ್‌ ಪ್ರಸಾದ್‌, ಜೀತ ಮುಕ್ತರಿಗಾಗಿ ಸುಮಾರು 2000 ಶಾಲೆಗಳನ್ನು ತೆರೆಯುವ ಚಿಂತನೆ ನಡೆಸಿದ್ದಾರೆ. ಆರಂಭದಲ್ಲಿ ಜೀತ ಮುಕ್ತರಾದ ಪೋಷಕರು ಅನಕ್ಷರಸ್ಥರಾಗಿದ್ದರು. ಈ ಪೋಷಕರು ತಮ್ಮ ಮಕ್ಕಳನ್ನು ಅನಕ್ಷರಸ್ಥರಾಗಲು ಬಿಡದೆ, ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಈ ವಿದ್ಯಾವಂತ ಯುವಕರು ಈಗ ಸ್ವಯಂ ಸಂಘಗಳನ್ನು ನಿರ್ಮಿಸಿಕೊಂಡು, ಗ್ರಾಮೀಣ ಪ್ರದೇಶದ ಜೀತ ಮುಕ್ತ ಬಡ ಮಕ್ಕಳಿಗೆ “ರಾತ್ರಿ ಶಾಲೆ’ ಯೋಜನೆ ಮೂಲಕ ವಿಶೇಷ ತರಗತಿ(ಕೋಚಿಂಗ್)ಗಳನ್ನು ನಡೆಸಿ ನೆರವಾಗುತ್ತಿದ್ದಾರೆ. ಪಿಯುಸಿ ವಿದ್ಯಾರ್ಥಿಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ.

ಸ್ಥಳೀಯ ಮುಖಂಡರ ಮನವೊಲಿಕೆ: ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಸಂಜೆ ಶಾಲೆ ಆರಂಭಿಸಲಾಗಿದೆ. ಇದಕ್ಕಾಗಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಪಂ ಅಧಿಕಾರಿಗಳನ್ನು ಒಪ್ಪಿಸಿ ಅಂಗನಾಡಿ, ಸಮುದಾಯ ಭವನ, ಅಂಬೇಡ್ಕರ್‌ ಭವನಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಮೊದಲ ಹಂತವಾಗಿ ಬೆಂ.ಗ್ರಾ., ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಳಗಾವಿ, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ಜಿಲ್ಲೆಗಳ ಎಲ್ಲಾ ತಾಲೂಕುಗಳ ಗ್ರಾಮಗಳಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದು ಜೀವಿಕ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಸಂಚಾಲಕ ನಾಗೇನಹಳ್ಳಿ ಹನುಮಂತು ಹೇಳಿದರು.

8 ಹಳ್ಳಿಗಳಲ್ಲಿ ಸಂಜೆ ಶಾಲೆ ಆರಂಭ: ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ 8 ಹಳ್ಳಿಗಳಲ್ಲಿ ಸಂಜೆ ಶಾಲೆ ಆರಂಭವಾಗಿದೆ. ಇನ್ನು 15 ದಿನಗಳಲ್ಲಿ ಹಳ್ಳಿಗಳಲ್ಲಿ ಜಿಲ್ಲಾದ್ಯಂತ 150 ಹಳ್ಳಿಗಳಲ್ಲಿ ಶೀಘ್ರ ಆರಂಭವಾಗಲಿವೆ. ಗೌರಿಬಿದನೂರು ತಾಲೂಕಿನ ಜಿ. ಬೊಮ್ಮಸಂದ್ರ ಹಾಗೂ ನಂದಿಗಾನಹಳ್ಳಿಯಲ್ಲಿ ಸಂಜೆ ಶಾಲೆ ಯಶಸ್ವಿಯಾಗಿ ನಡೆಯುತ್ತಿದ್ದು, 60 ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ರಾತ್ರಿ ಶಾಲೆಗೆ 25 ಜನ ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಸಂಜೆ 7ರಿಂದ 9 ಗಂಟೆವರೆಗೆ ತರಗತಿಗಳು ನಡೆಯುತ್ತಿವೆ. ಮುಂಬರುವ 15 ದಿನಗಳಲ್ಲಿ ಸುಮಾರು 80 ಹಳ್ಳಿಗಳಲ್ಲಿ ಶಾಲೆಗಳು ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು.

Advertisement

ರಾತ್ರಿ ಶಾಲೆಗಳಿಗೆ ಸಭೆ: ರಾತ್ರಿ ಶಾಲೆ ಆರಂಭಿಸಲು ಪ್ರತಿಹಳ್ಳಿಗಳಲ್ಲಿರುವ ಜೀವಿಕ ಕೂಲಿ ಕಾರ್ಮಿಕರ ಒಕ್ಕೂಟದ ಮೂಲಕ ಕೂಲಿ ಕಾರ್ಮಿಕರು, ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯ, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸಭೆ ಕರೆದು ಚರ್ಚಿಸಿ, ವಿದ್ಯಾವಂತ ಯುವಕರನ್ನು ಶಿಕ್ಷಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಜೀವಿಕದಿಂದ ಸ್ವಸಹಾಯ ಸಂಘಗಳ ಸ್ಥಾಪನೆ: ಗೌರಿಬಿದನೂರು ತಾಲೂಕಿನ ಪ್ರತಿ ಗ್ರಾಮದಲ್ಲಿಯೂ ಜೀವಿಕ ಸಂಘಟನೆಯಿಂದ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗಿದೆ. 25 ಮಹಿಳಾ ಸ್ವಸಹಾಯ ಸಂಘ ಹಾಗೂ 9 ಪುರುಷ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಗಿದೆ. ಆರ್ಥಿಕ ಆದಾಯದ ಚಟುವಟಿಕೆಗಳಿಗಾಗಿ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, 15 ಗುಂಪುಗಳಿಗೆ ಪ್ರಗತಿ ಗ್ರಾಮೀಣ ಬ್ಯಾಂಕ್‌, ಎಸ್‌ಬಿಐ, ಬ್ಯಾಂಕ್‌ ಆಫ್ ಬರೋಡಗಳ ಮೂಲಕ ಸುತ್ತುನಿಧಿಯನ್ನು ಪಡೆಯಲಾಗಿದೆ.

ಜೀತದಾಳುಗಳಿಗೆ ಆರ್ಥಿಕ ಭದ್ರತೆ: ತಾಲೂಕಿನಲ್ಲಿ 1993ರಲ್ಲಿ ಜೀವಿಕ ಸಂಘಟನೆ ಪ್ರಾರಂಭಿಸಲಾಗಿದ್ದು, ಅಂದು ಸುಮಾರು 650 ಜೀತದಾಳುಗಳಿರುವ ಬಗ್ಗೆ ಸಮೀಕ್ಷೆ ನಡೆಸಲಾಗಿತ್ತು. 2000ನೇ ಇಸವಿಯಲ್ಲಿ ಅಂದಿನ ಉಪವಿಭಾಗಾಧಿಕಾರಿಗಳು ಸುಮಾರು 49 ಜೀತದಾಳುಗಳನ್ನು ಪತ್ತೆಹಚ್ಚಿ ಸುಮಾರು ಒಂಬತ್ತು ಜನಕ್ಕೆ ಬಿಡುಗಡೆ ಪತ್ರ ನೀಡಿದ್ದರು. 2010ರಲ್ಲಿ ಸುಮಾರು 66 ಇದ್ದ, ಆಳುಗಳಿಗೆ ಪುನರ್ವಸತಿ ನೀಡುವುದಾಗಿ ಮಾಡಿ ಘೋಷಣೆ ಮಾಡಿ,ಮ ಪ್ರತಿಯೊಬ್ಬರಿಗೂ ಇಪ್ಪತ್ತು ಸಾವಿರ ರೂ.ಗಳನ್ನು ಬಿಡುಗಡೆ ಮಾಡಲಾಯಿತು.

ಈ ಹಣದಲ್ಲಿ ಹಸುಗಳು, ಮೇಕೆ, ಕುರಿಗಳನ್ನು ಹಾಗೂ ಸರ್ಕಾರದಿಂದ ಮನೆಗಳನ್ನು ಮಂಜೂರು ಮಾಡಿಸಿ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಒದಗಿಸಲಾಯಿತು ಎನ್ನುತ್ತಾರೆ ತಾಲೂಕು ಜೀವಿಕ ಸಂಚಾಲಕ ಕುರುಬರಹಳ್ಳಿ ಲಕ್ಷ್ಮೀನಾರಾಯಣ. 2012ರಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ನಡೆಸಿ 414 ಜೀತದಾಳುಗಳಿದ್ದಾರೆಂದು ಗುರುತಿಸಲಾಗಿ 2019ರಲ್ಲಿ ಅವರೆಲ್ಲರಿಗೂ ಬಿಡುಗಡೆ ಪ್ರಮಾಣ ಪತ್ರ ನೀಡಲಾಗಿದೆ. ತಾತ್ಕಾಲಿಕವಾಗಿ 20 ಸಾವಿರ ರೂ.ಗಳ ಪರಿಹಾರ ಘೋಷಿಸಲಾಗಿದೆ. ಆದರೆ ಹಣ ಬಿಡುಗಡೆ ಮಾಡಬೇಕಿದೆ.

ಜೀವಿಕ ಸಂಸ್ಥೆ ರಾಜ್ಯಾಧ್ಯಕ್ಷ ಕಿರಣ್‌ಕಮಲ್‌ ಪ್ರಸಾದ್‌ರ ಹೋರಾಟದ ಫ‌ಲವಾಗಿ ರಾಜ್ಯದ ಪ್ರತಿಹಳ್ಳಿಗಳಲ್ಲಿದ್ದ ಜೀತದಾಳುಗಳು ಸ್ವಾವಲಂಬಿಗಳಾಗಿ ಪುನರ್ವಸತಿ ಪಡೆದಿದ್ದು, ಅವರ ಮಕ್ಕಳು ಶಿಕ್ಷಿತರೂ ಆಗಿದ್ದಾರೆ. ಅಂಥ ವಿದ್ಯಾವಂತರನ್ನು ಪ್ರತಿಹಳ್ಳಿಗಳಲ್ಲಿ ಗುರ್ತಿಸಿ ಅವರಿಂದ 1ನೇತರಗತಿಯಿಂದ ಪಿಯುಸಿವರೆಗೆ ಓದುತ್ತಿರುವ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಸಂಜೆ ಶಾಲೆ ನಡೆಸಲು ಚಿಂತಿಸಲಾಗಿದೆ. ರಾಜ್ಯದಲ್ಲಿ 2 ಸಾವಿರ ಹಳ್ಳಿಗಳಲ್ಲಿ ಪ್ರಾರಂಬಿಸುವ ಗುರಿ ಹೊಂದಲಾಗಿದೆ ಎಂದು ಜೀವಿಕಾ ಸಂಸ್ಥೆ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕ ಪಿ.ನಾಗೇನಹಳ್ಳಿ ಹನುಮಂತು ತಿಳಿಸಿದರು.

ಗೌರಿಬಿದನೂರು ತಾಲೂಕಿನಲ್ಲಿ 80 ಸಂಜೆ ಶಾಲೆಗಳನ್ನು ತೆರೆಯಲು ತೀರ್ಮಾನಿಸಿದ್ದು, ಈಗಾಗಲೇ 2 ರಾತ್ರಿ ಶಾಲೆಗಳು ಪ್ರಾರಂಭವಾಗಿದೆ. 15 ದಿನಗಳಲ್ಲಿ 80 ಶಾಲೆಗಳೂ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಜೀವಿಕ ಕೂಲಿಕಾರ್ಮಿಕರ ಒಕ್ಕೂಟ ಹಾಗೂ ಸ್ವಸಾಹಯ ಸಂಘಗಳ ಪದಾಧಿಕಾರಿಗಳ ಸಭೆಯನ್ನು ನಡೆಸಿ ಶಿಕ್ಷಕರನ್ನು ಆಯ್ಕೆಮಾಡಲಾಗುತ್ತಿದೆ.
-ಲಕ್ಷ್ಮೀನಾರಾಯಣ, ಜೀವಿಕ ತಾಲೂಕು ಸಂಚಾಲಕ

ಜೀವಿಕ ಸ್ವಯಂಸೇವಾ ಸಂಸ್ಥೆಯು ಒಳ್ಳೆಯ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸಂಜೆ ಶಾಲೆ (ಕೋಚಿಂಗ್‌ ಕ್ಲಾಸ್‌) ಮಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಬೇಕಾದಲ್ಲಿ ಅವರು ಹಳ್ಳಿಗಳಲ್ಲಿರುವ ಸಾಕ್ಷರತೆ ಕಟ್ಟಡಗಳಲ್ಲಿ ಶಾಲೆ ಮಾಡಿಕೊಳ್ಳಬಹುದು, ಆದರೆ ಸರ್ಕಾರಿ ಶಾಲಾ ಕೊಠಡಿ ನೀಡಲು ಅವಕಾಶವಿಲ್ಲ.
-ಕೃಷ್ಣಮೂರ್ತಿ, ಬಿಇಒ ಗೌರಿಬಿದನೂರು

* ವಿ.ಡಿ.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next