ಅಡಹಳ್ಳಿ: ಪೂಜಾರಿ, ಗುರವ್, ಹೂಗಾರ ಕುಲಬಾಂಧವರು ಹೂವು, ಪೂಜೆ ಕಾಯಕ ಮಾಡುವುದರ ಜೊತೆಗೆ ಉಪ-ಕಸಬು ಮಾಡಿ ಆರ್ಥಿಕವಾಗಿ ಸಬಲರಾಗಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಸಂಸ್ಕಾರವಂತರನ್ನಾಗಿ ಮಾಡಬೇಕು. ಅಂದಾಗ ಮಾತ್ರ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯ ಎಂದು ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಹೇಳಿದರು.
ಅವರು ಸಮೀಪದ ಸಂಕೋನಟ್ಟಿ ಗ್ರಾಮದಲ್ಲಿ ಗುರುವ, ಪೂಜಾರಿ, ಹೂಗಾರ ಸಮಾಜದ 200 ಮಕ್ಕಳ ಉಪನಯನ ಹಾಗೂ ವಧು-ವರರ ವೇದಿಕೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ, 15 ಲಕ್ಷ ಜನಸಂಖ್ಯೆ ಹೊಂದಿರುವ ಹೂಗಾರರು ಹೋರಾಟ, ಪ್ರತಿಭಟನೆಯಂತಹ ಗೋಜಿಗೆ ಹೋಗದ ಪರಿಣಾಮ ಸರ್ಕಾರದಿಂದ ಯಾವುದೇ ಸಹಾಯ ಸಹಕಾರವಿಲ್ಲ. ಸಂಘಟನೆ ಮೂಲಕ ಸಮಾಜದ ಸ್ಥಿತಿಗತಿಗಳನ್ನು ಸರ್ಕಾರಕ್ಕೆ ತಿಳಿಸಬೇಕಾಗಿದೆ. ಯಾವುದೇ ಸರ್ಕಾರ ಬಂದರೂ ಸರ್ಕಾರ ಈ ಸಮಾಜವನ್ನು ಕಡೆಗಣಿಸುತ್ತಿರುವುದು ದುರ್ದೈವದ ಸಂಗತಿ. ಸಮಾಜದ ಅನೇಕರು ಉನ್ನತ ಹುದ್ದೆಯಲ್ಲಿ ಇದ್ದಾರೆ. ಆದರೆ ಯಾರೊಬ್ಬರೂ ಶಾಸಕ, ಸಂಸದರಾಗಿ ಆಯ್ಕೆಗೊಳ್ಳದಿರುವುದಕ್ಕೆ ಸಮಘಟನೆ ಕೊರತೆ ಕಾರಣ. ಮನೆ ಗೆದ್ದು ಮಾರು ಗೆಲ್ಲು ಎಂಬ ನಾಣ್ಣುಡಿಯಂತೆ ಯಾದವೀ ಕಲಹ ಬಿಟ್ಟು ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದರು.
ಅಖಿಲ ಕರ್ನಾಟಕ ಹುಗಾರ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಹೂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೂಗಾರ, ಜೀರ, ಗುರವ್ ಈ ಎಲ್ಲ ಜಾತಿಗಳು ಒಂದೇ ಆಗಿದ್ದರೂ ಎಲ್ಲ ಪಕ್ಷದ ಸರ್ಕಾರಗಳು ಒಂದು ನಿಗಮ ಸ್ಥಾಪಿಸದೇ ಅನ್ಯಾಯ ಮಾಡಿವೆ. ಪ್ರವರ್ಗ 1 ಹಾಗೂ 2ಎ ನೀಡುವಲ್ಲಿ ಗೊಂದಲ ಸೃಷ್ಟಿಸಿ ವಿಳಂಬ ಧೋರಣೆ ಅನುಸರಿಸುತ್ತಿವೆ. ಸಮಾಜದ ಹಿತದೃಷ್ಟಿಯಿಂದ ಸಂಘಟಿತರಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಸನ್ನದ್ಧರಾಗಬೇಕು ಎಂದರು.
ಉದ್ಯಮಿ ಹಾಗೂ ಸಮಾಜದ ಮುಖಂಡ ಅವಿನಾಶ ಗುರುಸ್ವಾಮಿ ಮಾತನಾಡಿ., ಸಮಾಜದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸುವ ಅವಶ್ಯಕತೆ ಇದ್ದು, ಈ ಕಾರ್ಯಕ್ಕೆ ಸಮಾಜ ಬಾಂಧವರು ಮುಂದೆ ಬಂದು ಸ್ಥಳ ನೀಡಿದರೆ 1 ಕೋಟಿ ದೇಣಿಗೆ ನೀಡುವುದಾಗಿ ವಾಗ್ಧಾನ ಮಾಡಿದರು. ಹಣಕಾಸು ಸಂಸ್ಥೆ ಹಾಗೂ ಕಾರ್ಖಾನೆ ಸ್ಥಾಪಿಸುವ ಮೂಲಕ ಔದ್ಯೋಗಿಕ ಕ್ರಾಂತಿ ಮಾಡಿ ಉದ್ಯೋಗ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ನದಿ ಸಿಂಧನೂರದ ಅಭಿನವ ಗುರುರಾಜೇಂದ್ರ ಸ್ವಾಮೀಜಿ, ಡಾ| ಎಂ.ಬಿ. ಹೂಗಾರ, ಕಾಂಗ್ರೆಸ್ ಮುಖಂಡರಾದ ಸದಾಶಿವ ಬುಟಾಳಿ, ಗಜಾನನ ಮಂಗಸೂಳಿ ಮಾತನಾಡಿದರು. ಬಸಪ್ಪ ಗುರವ, ತಾಲೂಕಾಧ್ಯಕ್ಷ ರಾಚಪ್ಪ ಪೂಜಾರಿ, ಉಪಾಧ್ಯಕ್ಷ ಹಣಮಂತ ಗುರವ, ಮಹಾವೀರ ಪಡನಾಡ, ರವಿ ಪೂಜಾರಿ, ರಾಜು ಗುರವ, ವೀರುಪಾಕ್ಷ ಹೂಗಾರ, ಸಂಗಮೇಶ್ವರ ಹೂಗಾರ, ಮುತ್ತಪ್ಪ ಗುರವ್, ಅಣ್ಣಪ್ಪ ಗುರವ, ಕೃಷ್ಣಾ ಗುರವ, ಶೋಭಾ ಗುರವ ಸೇರಿದಂತೆ ಹಲವರು ಇದ್ದರು. ಪ್ರಕಾಶ ಪೂಜಾರಿ ಸ್ವಾಗತಿಸಿದರು., ಕುಮಾರ ನಾವಿ ನಿರೂಪಿಸಿದರು, ಆನಂದ ಪೂಜಾರಿ ವಂದಿಸಿದರು.