ನೀವು ಮುತುವರ್ಜಿ ವಹಿಸಿಲ್ಲ ಅಂದರೆ ನಾವು ಈ ಮಳೆಗಾಲವೂ ಇಕ್ಕಟ್ಟಿಗೆ ಸಿಲುಕುತ್ತೇವೆ. ಮಕ್ಕಳು ಶಾಲೆಗೆ ಹೋಗಲಾರರು; ಹೀಗೆಂದು ಪೆಲತ್ತಕಟ್ಟೆ ನಿವಾಸಿಗಳು ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
Advertisement
ಈದು ಗ್ರಾಮದ ಪೆಲತ್ತಕಟ್ಟೆ ಎಂಬಲ್ಲಿ ಸೇತುವೆಯೊಂದಿದೆ. ಬಾರೆ ಭಾಗದಿಂದ ಹರಿದು ಬರುವ ಹೊಳೆಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಯಿದು. ಸುಮಾರು 20 ವರ್ಷಗಳ ಹಿಂದೆ ಇದು ನಿರ್ಮಾಣಗೊಂಡಿದ್ದು, ಮಳೆಗಾಲದಲ್ಲಿ ನೀರು ಉಕ್ಕೇರುವುದರಿಂದ ಸೇತುವೆ ಮುಳುಗುತ್ತದೆ. ಸದ್ಯ ನೆರೆಯಲ್ಲಿ ಬಂದ ಮರದ ದಿಮ್ಮಿಗಳು ಬಡಿದು ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ.8 ವರ್ಷಗಳಿಂದಲೂ ಸೇತುವೆ ಹೀಗೆಯೇ ಇದೆ.
ಪೆಲತ್ತಕಟ್ಟೆ, ಕಂಪೆಟ್ಟು , ಕನ್ಯಾಲು, ಕುಂಟೊನಿ, ಎದ್ರೋಟ್ಟು , ಜಗಂದಲ್ಕೆ ಮೊದಲಾದ ಪ್ರದೇಶಗಳಿಗೆ ಹೊಸ್ಮಾರುವಿನಿಂದ ಸಂಪರ್ಕ ಕಲ್ಪಿಸಲು ಈ ಸೇತುವೆ ಮುಖ್ಯ. 30ಕ್ಕೂ ಅಧಿಕ ಮಲೆಕುಡಿಯ ಸಮುದಾಯದವರ ಸಹಿತ ಅನೇಕ ಕುಟುಂಬಗಳು ಇಲ್ಲಿ ವಾಸವಾಗಿವೆ. ವಿದ್ಯಾರ್ಥಿಗಳು, ನಿತ್ಯ ಕೆಲಸಕ್ಕೆ ಹೋಗುವವರಿಗೆ, ನಾಗರಿಕರು ಸೇತುವೆ ಮೂಲಕವೇ ಸಂಚರಿಸುತ್ತಾರೆ. ಕೃಷಿ ಅವಲಂಬಿತರಿಗೂ ಇದು ಪ್ರಮುಖ. ಆದರೆ ಮಳೆಗಾಲದಲ್ಲಿ ಸೇತುವೆ ಮುಳುಗುವುದರಿಂದ ಇಲ್ಲಿ ತೆರಳಲು ಸಾಧ್ಯವಾಗುವುದಿಲ್ಲ. ಆಗ ಜನ ಅನುಭವಿಸುವ ಸಂಕಷ್ಟ ಅಷ್ಟಿಷ್ಟಲ್ಲ. ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಅಘೋಷಿತ ರಜೆಯ ವಾತಾವರಣ ನಿರ್ಮಾಣವಾಗುತ್ತದೆ. ದೂರದ ಹಾದಿಯಿಂದ ಶಾಲೆಗೆ ತಲುಪಲು ಅನುಕೂಲವಿಲ್ಲ. ಆದ್ದರಿಂದ ಶಾಲೆಗೆ ತೆರಳದೆ ಮನೆಯಲ್ಲೇ ಉಳಿದುಕೊಳ್ಳುವಂತಾಗುತ್ತದೆ. ಕಳೆದ ವರ್ಷ ಎರಡು ಬಾರಿ ಸೇತುವೆ ಮಳೆಗೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಷ್ಟಕರವಾಗಿತ್ತು.
Related Articles
ಕೊಚ್ಚಿ ಹೋದ ಸೇತುವೆಯನ್ನು ಸ್ವಲ್ಪ ವಾದರೂ ಉಳಿಸಲು ಇಲ್ಲಿನ ನಿವಾಸಿಗಳು ವರ್ಷವೂ ಮುಂದಾಗುತ್ತಾರೆ. ಗೋಣಿಗಳಿಗೆ ಮರಳು ತುಂಬಿ ಒಂದು ಭಾಗದಲ್ಲಿ ಗೋಡೆ ಕಟ್ಟಿಕೊಳ್ಳುತ್ತಾರೆ. ಸದ್ಯ ಅದು ಪ್ರಯೋಜನಕ್ಕೆ ಬರುತ್ತಿದೆ. ಆದರೆ ಮಳೆಗಾಲದಲ್ಲಿ ಇದು ಕೊಚ್ಚಿ ಹೋಗುತ್ತದೆ. ಸಮಸ್ಯೆ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ ಈ ಭಾಗದ ನಿವಾಸಿಗಳು. ಈ ಮೊದಲು ಸೇತುವೆ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಯವರೇ ತಹಶೀಲ್ದಾರ್ ಅವರನ್ನು ಸ್ಥಳಕ್ಕೆ ಕಳಿಸಿದ್ದರು. ಅವರು ಹೊಸ ಸೇತುವೆ ಭರವಸೆ ಕೂಡ ನೀಡಿದ್ದರು.
Advertisement
ಮೇಲ್ದರ್ಜೆಗೇರಿಸಿಪ್ರತಿ ಮಳೆಗಾಲ ಮುಳುಗಿ, ಸಂಪರ್ಕ ಕಡಿತಗೊಳ್ಳುವ ಸೇತುವೆಗೆ ಮುಕ್ತಿ ನೀಡಬೇಕು. ಸೇತುವೆಯನ್ನು ಮೇಲ್ದರ್ಜೆಗೇರಿಸಬೇಕು ಸೇತುವೆಯನ್ನು ಎತ್ತರಕ್ಕೆ ಏರಿಸಿ ಸಾರ್ವಜನಿಕ ಸಂಚಾರಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕೆಂಬುದು ಈ ಭಾಗದ ಜನರ ಕೂಗು. ಸೇತುವೆ ಪ್ರದೇಶಕ್ಕೆ ಶಾಸಕರೂ ಭೇಟಿಯಿತ್ತಿದ್ದು, ಅನುದಾನದ ಭರವಸೆ ನೀಡಿದ್ದರು. ಮಳೆಗಾಲದ ಮೊದಲು ಈ ಬಗ್ಗೆ ಕ್ರಮದ ನಿರೀಕ್ಷೆ ಗ್ರಾಮಸ್ಥರದ್ದು. – ಬಾಲಕೃಷ್ಣ ಭೀಮಗುಳಿ