Advertisement

ಪಾದರಾಯನಪುರ ಘಟನೆ ಜನನಾಯಕರ ಜವಾಬ್ದಾರಿಯೇನು?

01:49 AM Apr 21, 2020 | Hari Prasad |

ಕೋವಿಡ್ ವೈರಸ್ ವಿರುದ್ಧದ ಹೋರಾಟದಲ್ಲಿ ಜನರ ಸಹಭಾಗಿತ್ವ ಅತ್ಯಗತ್ಯ ಎಂದು ಸರಕಾರಗಳು, ಮಾಧ್ಯಮಗಳು, ಆರೋಗ್ಯ ಇಲಾಖೆಗಳು, ತಜ್ಞರು ಹೇಳುತ್ತಲೇ ಬಂದಿದ್ದರೂ ದೇಶದಲ್ಲಿ ಕೋವಿಡ್ ಯೋಧರೆಂದು ಕರೆಸಿಕೊಳ್ಳುವ ವೈದ್ಯಕೀಯ ಸಿಬಂದಿ, ಪೊಲೀಸರು, ಆರೋಗ್ಯ ಕಾರ್ಯಕರ್ತರಿಗೆ ಅಡಿಗಡಿಗೆ ಅಡ್ಡಿಗಳು ಎದುರಾಗುತ್ತಲೇ ಇವೆ.

Advertisement

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಾಗಿತ್ತು, ಈಗ ಪಾದರಾಯನಪುರದಲ್ಲಿ ವಾರ್ಡೊಂದರಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡಲು ಬಂದ ಪೊಲೀಸರು, ವೈದ್ಯಕೀಯ ಸಿಬಂದಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವುದು ನಿಜಕ್ಕೂ ಬೇಸರ ಮೂಡಿಸುವ ವಿಷಯ. ಈ ಘಟನೆಯ ಕುರಿತು ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಆರಂಭದಿಂದಲೂ ದೇಶದಲ್ಲಿ ಇಂಥ ಅಹಿತಕರ ಘಟನೆಗಳು ವರದಿಯಾಗುತ್ತಲೇ ಇವೆ. ಪಂಜಾಬ್‌ನಲ್ಲಿ ಪೊಲೀಸರ ಕೈ ತುಂಡರಿಸಿದ ಘಟನೆಯಿಂದ ಹಿಡಿದು, ಆಸ್ಪತ್ರೆ ಸಿಬಂದಿಯ ಮೇಲೆ ಉಗುಳುವ, ಪೊಲೀಸರು-ವೈದ್ಯಕೀಯ ಸಿಬಂದಿಯ ಮೇಲೆ ಕಲ್ಲು- ಇಟ್ಟಿಗೆಗಳಿಂದ ದಾಳಿ ಮಾಡಿ ಗಾಯಗೊಳಿಸಿದ ಅಮಾನವೀಯ ವರ್ತನೆಗಳು ಪದೇ ಪದೆ ಘಟಿಸುತ್ತಲೇ ಇವೆ.

ಈ ರೀತಿಯ ಘಟನೆಗಳು, ಕೋವಿಡ್ ತಡೆಗೆ ಪ್ರಯತ್ನಿಸುತ್ತಿರುವವರ ಮಾನಸಿಕ ಬಲವನ್ನು ಕುಗ್ಗಿಸುವುದರಲ್ಲಿ ಸಂಶಯವೇ ಇಲ್ಲ. ಮೊದಲೇ, ಈ ರೋಗವು ಸಾಂಕ್ರಾಮಿಕವಾಗಿರುವುದರಿಂದ ಸೋಂಕಿತರ ಸಂಪರ್ಕಕ್ಕೆ ಬಂದವರ ಜಾಗಕ್ಕೆ ತೆರಳಿ, ಅವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌ಗೆ ಕಳುಹಿಸುವುದು ಸಹ ಸಾಮಾನ್ಯ ವಿಷಯವೇನಲ್ಲ, ಹೀಗಿರುವಾಗ, ಇಷ್ಟು ಅಪಾಯವನ್ನು ಎದುರಿಸುತ್ತಲೇ ಶ್ರಮಿಸುತ್ತಿರುವವರಿಗೆ ಅಡಚಣೆ ಮಾಡುವುದು, ತೊಂದರೆ ಕೊಡುವುದು, ದಾಳಿ ಮಾಡುವುದು ಸರ್ವಥಾ ಸಮರ್ಥನೀಯವಲ್ಲ.

ಇನ್ನು ಪಾದರಾಯನಪುರ ಘಟನೆಗೆ ಸಂಬಂಧಿಸಿದಂತೆ ಶಾಸಕ ಜಮೀರ್‌ ಅವರ ಆರಂಭಿಕ ಹೇಳಿಕೆಗಳು ಖಂಡನೆಗೆ ಗುರಿಯಾಗಿವೆ. ತಪ್ಪಿತಸ್ಥರನ್ನು ಖಂಡಿಸುವ ಬದಲು, ತಪಾಸಣೆಗೆ ಹೋದವರನ್ನೇ ಪ್ರಶ್ನಿಸಿದ ಅವರ ಧೋರಣೆ ಈಗ ಟೀಕೆಗೆ ಒಳಗಾಗುತ್ತಿದೆ.

Advertisement

ಆದಾಗ್ಯೂ ಈಗ ಅವರು, ಹಲ್ಲೆಯನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರಾದರೂ ಆರಂಭದಲ್ಲಿ ಅವರು ಆಡಿದ ಮಾತುಗಳು ನಿಜಕ್ಕೂ ಪ್ರಶ್ನಾರ್ಹವಾಗಿವೆ. “ರಾತ್ರಿ ವೇಳೆ ಕ್ವಾರಂಟೈನ್‌ಗೆ ಕರೆದುಕೊಂಡು ಹೋಗಲು ಬಂದದ್ದರಿಂದ ಜನರು ಗಾಬರಿಗೊಂಡು ಹೀಗೆ ವರ್ತಿಸಿದ್ದಾರೆ, ತಪಾಸಣೆ ಸಿಬಂದಿ ಸ್ವಲ್ಪ ಜಾಗರೂಕತೆಯಿಂದ ವರ್ತಿಸಬೇಕಿತ್ತು’ ಎಂದಿರುವುದಷ್ಟೇ ಅಲ್ಲದೇ, ಆ ಪ್ರದೇಶದ ನಿವಾಸಿಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದವರು, ಬಡವರು, ಅಶಿಕ್ಷಿತರು ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟು ತಪಾಸಣೆ ಮಾಡಬೇಕಿತ್ತು ಎಂದಿದ್ದರು.

ಜನರನ್ನು ಅಶಿಕ್ಷಿತರು, ಬಡವರೆನ್ನುವುದು ಸಮರ್ಥನೆಯಾಗದು. ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕಾದ ಜವಾಬ್ದಾರಿ ಯಾರದ್ದು? ಕೋವಿಡ್ ಎಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುವುದನ್ನು ಸದ್ಯದ ಪರಿಸ್ಥಿತಿಯೇ ಸಾರುತ್ತಿದೆ. ಮಾಧ್ಯಮಗಳು, ಸರಕಾರಿ ಅಂಗ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿವೆ.

ಹೀಗಿದ್ದರೂ ಜಾಗೃತಿ ಮೂಡಿಲ್ಲ ಎಂದರೆ ಏನರ್ಥ? ಹಾಗಿದ್ದರೆ, ತಮ್ಮ ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಜನನಾಯಕರ ಮೇಲೆ ಇರುವುದಿಲ್ಲವೇ? ಈ ವಿಚಾರದಲ್ಲಿ ತಪ್ಪನ್ನು ಪರೋಕ್ಷವಾಗಿ ಸಮರ್ಥಿಸಲು ಯಾವ ಕಾರಣಕ್ಕೂ ಮುಂದಾಗಬಾರದು.

ಕೋವಿಡ್ ವೈರಸ್ ಜಾತಿ-ಧರ್ಮ ನೋಡಿ ಬರುವುದಿಲ್ಲ ಎನ್ನುವುದನ್ನು ಜನರೂ ಅರ್ಥಮಾಡಿಕೊಳ್ಳಲಿ. ತಮ್ಮ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಪೊಲೀಸರು-ಆರೋಗ್ಯ ಸಿಬಂದಿಗೆ ಜನರೇ ತೊಂದರೆ ಮಾಡಿದರೆ, ಸಾಂಕ್ರಾಮಿಕದ ವಿರುದ್ಧ ಗೆಲುವು ಸಾಧ್ಯವಾಗುವುದೇ? ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೂ ಇದೆ. ನಾಗರಿಕರೂ ಪ್ರಜ್ಞಾವಂತಿಕೆಯಿಂದ ವರ್ತಿಸಿ, ಆರೋಗ್ಯ ಸಿಬಂದಿ-ವೈದ್ಯರಿಗೆ ಸಹಕರಿಸಿ ಜವಾಬ್ದಾರಿ ಮೆರೆಯಲಿ.

Advertisement

Udayavani is now on Telegram. Click here to join our channel and stay updated with the latest news.

Next