Advertisement

Editorial; ರೈತರಿಗೆ ಸಕಾಲದಲ್ಲಿ ಹೊಸ ಸಾಲ ಸರಕಾರ ತುರ್ತಾಗಿ ಸ್ಪಂದಿಸಲಿ

11:31 AM May 17, 2024 | Team Udayavani |

ಕಳೆದ ವರ್ಷದ ಮಳೆಗಾಲ ಋತುವಿನಲ್ಲಿ ವರುಣ ಕೈಕೊಟ್ಟಿದ್ದರಿಂದಾಗಿ ರಾಜ್ಯದಲ್ಲಿ ಬರಗಾಲ ಆವರಿಸಿ, ಬೆಳೆ ಹಾನಿಗೊಳಗಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಇದೇ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷದ ಬೇಸಗೆಯಲ್ಲಿ ರಾಜ್ಯದ ಬಹುತೇಕ ಎಲ್ಲೆಡೆ ತಾಪಮಾನ ಅಧಿಕವಾಗಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡುವಂತೆ ಮಾಡಿತ್ತು. ಇನ್ನು ಬರ ಪರಿಹಾರ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಹಗ್ಗ ಜಗ್ಗಾಟ ನಡೆದು ಕೊನೆಗೂ ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದ್ದು ಈಗ ರಾಜ್ಯ ಸರಕಾರ ರೈತರ ಖಾತೆಗಳಿಗೆ ಬರ ಪರಿಹಾರ ಮೊತ್ತವನ್ನು ಜಮೆ ಮಾಡತೊಡಗಿದೆ.

Advertisement

ಆದರೆ ಪರಿಹಾರ ಮೊತ್ತವನ್ನು ರೈತರ ಖಾತೆಗಳಿಗೆ ಜಮೆ ಮಾಡುವ ವೇಳೆ ಈ ಹಿಂದೆ ರಾಜ್ಯ ಸರಕಾರ ನೀಡಿದ್ದ 2,000 ರೂ. ಗಳನ್ನು ಕಡಿತ ಮಾಡಿ ಅಥವಾ ಈ ಮೊತ್ತವನ್ನು ರೈತರ ಸಾಲಗಳಿಗೆ ಹೊಂದಾಣಿಕೆ ಮಾಡಿ ಹಾಲಿ ಪರಿಹಾರ ಮೊತ್ತವನ್ನು ಜಮೆ ಮಾಡುತ್ತಿರುವುದು ರೈತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಬರದಿಂದ ಬೆಳೆ ಹಾನಿಗೊಳಗಾಗಿ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ರೈತರಿಗೆ ಪರಿಹಾರ ವಿತರಿಸುವ ಸಂದರ್ಭದಲ್ಲಿಯೂ ರಾಜ್ಯ ಸರಕಾರ ಈ ತೆರನಾದ ಜಿಪುಣತನ ಪ್ರದರ್ಶಿಸುತ್ತಿರುವುದು ಸರಿಯಲ್ಲ.

ಕಳೆದೆರಡು ವಾರಗಳಿಂದೀಚೆಗೆ ರಾಜ್ಯದ ಬಹುತೇಕ ಎಲ್ಲೆಡೆ ಬೇಸಗೆ ಮಳೆ ಸುರಿಯಲಾರಂಭಿಸಿದ್ದು, ರೈತರು ಮಾತ್ರವಲ್ಲದೆ ಇಡೀ ರಾಜ್ಯದ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ. ರೈತರು ಈಗಾಗಲೇ ಮುಂದಿನ ಮುಂಗಾರು ಋತುವಿನ ಬೇಸಾಯ ಚಟುವಟಿಕೆಗಳಿಗೆ ಸಿದ್ಧತ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಬಾರಿ ನಿಗದಿತ ಸಮಯದಲ್ಲಿಯೇ ನೈಋತ್ಯ ಮಾರುತಗಳು ರಾಜ್ಯವನ್ನು ಪ್ರವೇಶಿಸಲಿದ್ದು, ಪ್ರಸಕ್ತ ಮುಂಗಾರು ಋತುವಿನಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ. ಇದು ರೈತರಲ್ಲಿ ಆಶಾವಾದವನ್ನು ಮೂಡಿಸಿದ್ದು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಉತ್ತಮ ಫ‌ಸಲಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಬಾರಿ ಬೆಳೆ ಹಾನಿಗೀಡಾಗಿ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿದ ಪರಿಣಾಮ ರೈತರಿಗೆ ಸಕಾಲದಲ್ಲಿ ಬೆಳೆ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿರಲಿಲ್ಲ. ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಬೇಸಾಯ ನಡೆಸಲು ರೈತರಿಗೆ ಹಣಕಾಸು ನೆರವಿನ ತುರ್ತು ಆವಶ್ಯಕತೆ ಇದೆ. ಆದರೆ ಕಳೆದ ವರ್ಷದ ಸಾಲವನ್ನು ಮರುಪಾವತಿಸದೆ ಈ ಬಾರಿ ಮತ್ತೆ ಹೊಸದಾಗಿ ಸಾಲ ನೀಡಲು ಸಾಧ್ಯವಿಲ್ಲ ಎಂದು ಬ್ಯಾಂಕ್‌ಗಳು ಮೊಂಡುತನ ಪ್ರದರ್ಶಿಸಲಾರಂಭಿಸಿವೆ. ಇದರಿಂದಾಗಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಸಾಧನ, ಸಲಕರಣೆಗಳ ಖರೀದಿ ಕಷ್ಟಸಾಧ್ಯವಾಗಿ ಪರಿಣಮಿಸಿದ್ದು, ಕೃಷಿ ಚಟುವಟಿಕೆಗಳು ಹಿನ್ನಡೆ ಕಾಣುವಂತಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಸರಕಾರ ತುರ್ತು ಮಧ್ಯಪ್ರವೇಶಿಸಿ ರೈತರು ಬಾಕಿ ಉಳಿಸಿಕೊಂಡಿರುವ ಸಾಲ ಮರುಪಾವತಿಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ಮತ್ತು ಪ್ರಸಕ್ತ ಸಾಲಿನ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಹೊಸ ಸಾಲ ನೀಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ವಾಣಿಜ್ಯ ಬ್ಯಾಂಕ್‌ಗಳು ತಮ್ಮ ಪಟ್ಟನ್ನು ಸಡಿಲಿಸದೇ ಇದ್ದಲ್ಲಿ ಸಹಕಾರ ಬ್ಯಾಂಕ್‌ಗಳಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿ, ಅವುಗಳ ಮೂಲಕ ರೈತರಿಗೆ ಹೊಸ ಸಾಲ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರ ಜತೆಯಲ್ಲಿ ರೈತರ ಬೇಡಿಕೆ ಪೂರೈಸುವಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಲಭ್ಯತೆಯನ್ನು ಖಾತರಿಪಡಿಸಬೇಕು. ಚುನಾವಣ ನೀತಿ ಸಂಹಿತೆಯ ನೆಪವೊಡ್ಡದೆ ರೈತರ ಸಂಕಷ್ಟಕ್ಕೆ ಸರಕಾರ ತುರ್ತಾಗಿ ಸ್ಪಂದಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next