Advertisement

Editorial: ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಬೇಕಿದೆ ತುರ್ತು ಕಾಯಕಲ್ಪ

03:31 AM Jan 06, 2025 | Team Udayavani |

ರಾಜ್ಯದ ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿಯ ಅಧ್ಯಯನ ನಡೆಸಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ| ನಾಗಲಕ್ಷ್ಮೀ ಚೌಧರಿ ಅವರು ತಮ್ಮ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ. ಈ ವರದಿಯಲ್ಲಿ ರಾಜ್ಯದ ಬಹುತೇಕ ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಮೂಲಸೌಕರ್ಯಗಳ ಕೊರತೆ, ನಿರ್ವಹಣೆ ಕೊರತೆ, ಸಿಬಂದಿ ಅಭಾವ ಸಹಿತ ಹತ್ತು ಹಲವು ಸಮಸ್ಯೆಗಳನ್ನು ಪಟ್ಟಿ ಮಾಡಿದ್ದು, ಆ ಮೂಲಕ ರಾಜ್ಯದ ಸರಕಾರಿ ಆಸ್ಪತ್ರೆಗಳ ನೈಜ ಚಿತ್ರಣಕ್ಕೆ ಕನ್ನಡಿ ಹಿಡಿಯುವ ಕಾರ್ಯವನ್ನು ಮಾಡಿದ್ದಾರೆ. ಇದೇ ವೇಳೆ ಮಹಿಳಾ ಆಯೋಗ ತನ್ನ ವರದಿಯಲ್ಲಿ ಸರಕಾರಿ ಆಸ್ಪತ್ರೆಗಳ ಸ್ಥಿತಿಗತಿ ಸುಧಾರಣೆಗೆ ಕೆಲವು ಮಹತ್ವದ ಶಿಫಾರಸುಗಳನ್ನೂ ಮಾಡಿದ್ದು ಇವುಗಳ ಜಾರಿಗೆ ಸರಕಾರ ತುರ್ತು ಗಮನ ಹರಿಸುವ ಅಗತ್ಯವಿದೆ.

Advertisement

ಕಳೆದ ಮೂರ್‍ನಾಲ್ಕು ತಿಂಗಳುಗಳಿಂದೀಚೆಗೆ ರಾಜ್ಯದ ಹಲವು ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವಂತೆಯೇ ಸರಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆಯ ಕಾರ್ಯಶೈಲಿ ತೀವ್ರಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಕೇವಲ ರಾಜಕೀಯ ವಾಕ್ಸಮರಕ್ಕೆ ಸೀಮಿತವಾಗಿರದೆ ಜನಸಾಮಾನ್ಯ ರಲ್ಲೂ ಆತಂಕಕ್ಕೆ ಕಾರಣವಾಗಿತ್ತು.

ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಸರಕಾರ ಪ್ರಾಥಮಿಕ ಹಂತದಲ್ಲಿ ತೋರಿದ ನಿರ್ಲಕ್ಷ್ಯದ ಬಗೆಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇವೆಲ್ಲದರ ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಈ ಪ್ರಕರಣಗಳ ಕುರಿತಂತೆ ತನಿಖೆ ನಡೆಸಿ ಲೋಪದೋಷಗಳನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾರಂಭಿಸಿದೆ. ಇದರ ಹೊರತಾಗಿಯೂ ರಾಜ್ಯದ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿ ಯರು ಮತ್ತು ನವಜಾತ ಶಿಶುಗಳ ಸಾವಿನ ಸರಣಿ ಮುಂದುವರಿದಿರುವುದು ಜನತೆಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಏತನ್ಮಧ್ಯೆ ಈ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗ ರಾಜ್ಯದ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆಸ್ಪತ್ರೆಗಳ ವಸ್ತುಸ್ಥಿತಿಯ ಅಧ್ಯಯನ ನಡೆಸಿದ ಆಯೋಗ, ನೀರಿನ ಟ್ಯಾಂಕ್‌ಗಳಲ್ಲಿ ಪಾಚಿ ಕಟ್ಟಿ ನೀರು ಕಲುಷಿತವಾಗಿರುವುದು, ಶೌಚಾಲಯಗಳ ದುಃಸ್ಥಿತಿ, ತ್ಯಾಜ್ಯ ಮತ್ತು ಒಳಚರಂಡಿಗಳ ಅಸಮರ್ಪಕ ನಿರ್ವಹಣೆ, ಚಿಕಿತ್ಸಾ ಸಾಧನ, ಉಪಕರಣಗಳ ಅಲಭ್ಯತೆ, ಆಸ್ಪತ್ರೆಗಳ ಪರಿಸರದಲ್ಲಿನ ಗಲೀಜು, ರೋಗಿ ಗಳೊಂದಿಗೆ ಬರುವ ಪರಿಚಾರಕರಿಗೆ ಮಲಗಲು ಸೂಕ್ತ ಕೊಠಡಿಯ ವ್ಯವಸ್ಥೆ ಇಲ್ಲದಿರುವುದು, ಆರೋಗ್ಯ ಸೇವೆ ನೀಡಲು ಅತ್ಯಗತ್ಯವಾದ ಪ್ರಾಥಮಿಕ ಸಾಧನ-ಸಲಕರಣೆಗಳೂ ಲಭ್ಯವಿಲ್ಲದಿರುವುದು ಸಹಿತ ಹತ್ತು ಹಲವು ಸಮಸ್ಯೆಗಳನ್ನು ಆಯೋಗ ತನ್ನ ವರದಿಯಲ್ಲಿ ಪಟ್ಟಿ ಮಾಡಿದೆ. ಅಷ್ಟು ಮಾತ್ರ ವಲ್ಲದೆ ವೈದ್ಯರು, ವೈದ್ಯಕೀಯ ತಜ್ಞರು, ಅರೆವೈದ್ಯಕೀಯ ಸಿಬಂದಿ, ಪ್ರಯೋ ಗಾಲಯ ಸಿಬಂದಿ, ನರ್ಸ್‌ ಆದಿಯಾಗಿ ಬಹುತೇಕ ಹುದ್ದೆಗಳು ತೆರವಾಗಿರುವ ಕುರಿತಂತೆ ವರದಿಯಲ್ಲಿ ಬೆಟ್ಟು ಮಾಡಿದೆ.

ಆರೋಗ್ಯ ಇಲಾಖೆ ಮತ್ತು ಸರಕಾರ ಇನ್ನಾದರೂ ರಾಜ್ಯದ ಸರಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪ ನೀಡಲು ಮುಂದಡಿ ಇಡಬೇಕು. ಮಹಿಳಾ ಆಯೋಗ ಮಾಡಿರುವ ಶಿಫಾರಸುಗಳನ್ನು ಆದ್ಯತೆಯ ಮೇಲೆ ಅನುಷ್ಠಾನಗೊಳಿಸಬೇಕು. ಸೇವಾಲೋಪದ ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿ ಅಥವಾ ಆರೋಗ್ಯ ಸಂಬಂಧಿ ಸೇವೆ ನೀಡುತ್ತಿರುವ ಕಂಪೆನಿಗಳು ಮತ್ತು ಸಂಸ್ಥೆಗಳಿಂದ ಲೋಪಗಳಾದಲ್ಲಿ ತತ್‌ಕ್ಷಣ ಕಾನೂನು ಕ್ರಮ ಜರಗಿಸಬೇಕು. ಸರಕಾರಿ ಆಸ್ಪತ್ರೆಗಳ ಬಗೆಗೆ ಜನತೆಯ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಎಲ್ಲ ಕ್ರಮಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಅಗತ್ಯವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next