Advertisement

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

03:25 AM Jan 07, 2025 | Team Udayavani |

ವಯೋವೃದ್ಧರು ತಮ್ಮ ಬದುಕಿನ ಕೊನೆಗಾಲದಲ್ಲಿ ವೃದ್ಧಾಶ್ರಮಗಳಲ್ಲಿ ಕಾಲ ಕಳೆಯುವ, ಮಕ್ಕಳಿಂದ ಅವಗಣನೆಗೆ ಒಳಗಾಗುವ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಇಂತಹ ನೋವಿಗೆ ಉಪಶಮನವಾಗಬಲ್ಲ; ಸಾಮಾಜಿಕ ಮೌಲ್ಯವೊಂ­ದರ ಬಗ್ಗೆ ಕಣ್ತೆರೆಸುವಂತಹ ತೀರ್ಪನ್ನು ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದೆ.

Advertisement

ಮಕ್ಕಳಿಗೆ ಆಸ್ತಿಪಾಸ್ತಿಯನ್ನು ಉಡುಗೊರೆ ಅಥವಾ ಗಿಫ್ಟ್ ಡೀಡ್‌ ಮೂಲಕ ಹಸ್ತಾಂತರಿಸಿದ ಬಳಿಕ ಹೆತ್ತವರು ಆ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾದರೆ ಅಂತಹ ಗಿಫ್ಟ್ ಡೀಡ್‌ ಅನೂರ್ಜಿತಗೊಳ್ಳುತ್ತದೆ ಎಂಬುದಾಗಿ ಸುಪ್ರೀಂ ಕೋರ್ಟ್‌ ಪ್ರಕರಣವೊಂದರಲ್ಲಿ ತೀರ್ಪು ನೀಡಿದೆ. ಮುಪ್ಪಿನಲ್ಲಿ ಮಕ್ಕಳಿಂದ ಸರಿ ಯಾದ ಆರೈಕೆ ಪಡೆಯದೆ ಅವಗಣನೆಗೆ ಈಡಾಗುವ ಹೆತ್ತವರಿಗೆ ನೆಮ್ಮದಿ ನೀಡ ಬಲ್ಲ ಹಾಗೂ ಅಂತಹ ಕೃತಘ್ನ ಮಕ್ಕಳಿಗೆ ಪಾಠವಾಗಬಲ್ಲ ತೀರ್ಪು ಇದು.

ಮೂಲತಃ ಮಧ್ಯಪ್ರದೇಶದ ಪ್ರಕರಣ ಇದು. ಊರ್ಮಿಳಾ ದೀಕ್ಷಿತ್‌ ಎಂಬವರು ತಮ್ಮ ಆಸ್ತಿಯನ್ನು ಪುತ್ರ ಸುನಿಲ್‌ ಶರಣ್‌ ದೀಕ್ಷಿತ್‌ ಅವರಿಗೆ 2019ರಲ್ಲಿ ಗಿಫ್ಟ್ ಡೀಡ್‌ ಮೂಲಕ ಹಸ್ತಾಂತರಿಸಿದ್ದರು. ಹೀಗೆ ಉಡುಗೊರೆ­ಯಾಗಿ ನೀಡುವಾಗ ಕೊನೆಗಾಲದಲ್ಲಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಷರತ್ತನ್ನು ವಿಧಿಸಿದ್ದರು ಕೂಡ. ಆದರೆ ಮಗ ಆಕೆಯನ್ನು ಚೆನ್ನಾಗಿ ನೋಡಿ ಕೊಳ್ಳಲಿಲ್ಲ. ಇದನ್ನು ಪ್ರಶ್ನಿಸಿ ಆಕೆ ಕೆಳಹಂತದ ನ್ಯಾಯಾಲಯದ ಮೆಟ್ಟಿಲೇರಿದಾಗ ತೀರ್ಪು ಆಕೆಯ ಪರವಾಗಿ ಬಂತು. ಮಗ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ದಾಗ ತೀರ್ಪು ಆತನ ಪರವಾಯಿತು. ಊರ್ಮಿಳಾ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾ| ಸಿ.ಟಿ. ರವಿಕುಮಾರ್‌ ಮತ್ತು ನ್ಯಾ| ಸಂಜಯ್‌ ಕುಮಾರ್‌ ಅವರಿದ್ದ ನ್ಯಾಯಪೀಠ ಮಧ್ಯಪ್ರದೇಶದ ಹೈಕೋರ್ಟ್‌ನ ತೀರ್ಪನ್ನು ವಜಾಗೊಳಿಸಿದೆ. ಗಿಫ್ಟ್ ಡೀಡ್‌ನ‌ಲ್ಲಿ ಕೊನೆಗಾಲದಲ್ಲಿ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳಬೇಕು ಎಂಬ ಉಲ್ಲೇಖ ಅಥವಾ ಷರತ್ತು ಇಲ್ಲದೆ ಇದ್ದರೂ ಈ ಅಂಶದ ಉಲ್ಲಂಘನೆಯಾದರೆ ಹೆತ್ತವರು ಗಿಫ್ಟ್ ಡೀಡ್‌ ಹಿಂಪಡೆಯಲು ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ದೇಶದಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂಬ ಮಾತಿದೆ. ಮಕ್ಕಳ ಜತೆಗಿರುವ ಹೆತ್ತವರು ಕೂಡ ವೃದ್ಧಾಪ್ಯದಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತ ದಿನದೂಡುವ ಪ್ರಕರಣಗಳೆಷ್ಟೋ ನಮ್ಮ ಸುತ್ತಮುತ್ತಲೇ ಕಂಡುಬರುತ್ತವೆ. ಮುಪ್ಪಿನಲ್ಲಿ ಮನುಷ್ಯ ಮಕ್ಕಳಂತೆ ಆಗುತ್ತಾನೆ ಎಂಬ ಮಾತು ಸುಮ್ಮನೆ ಹುಟ್ಟಿದ್ದಲ್ಲ. ಬಾಲ್ಯಕಾಲದಂತೆ ಮಕ್ಕಳಿಗೆ ತಂದೆತಾಯಿ ಲಾಲನೆಪಾಲನೆ, ಆರೈಕೆ, ಅಕ್ಕರೆ ಒದಗಿಸಿದರೆ ಅವರ ವೃದ್ಧಾಪ್ಯದಲ್ಲಿ ಮಕ್ಕಳು ಅದನ್ನು ಹಿಂದಿರು­ಗಿಸಬೇಕು. ಇದು ಕರ್ತವ್ಯ ಅಥವಾ ಋಣ ತೀರಿಸು ವಿಕೆಯ ವಿಷಯ ಅಲ್ಲ; ಮಾನವ ಸಹಜವಾಗಿ ನಡೆಯಬೇಕಾದದ್ದು. ಆದರೆ ಸಮಾಜದಲ್ಲಿ ಈ ಗುಣ ಮರೆಯಾಗುತ್ತ ಬಂದಿರುವುದು ಇಲ್ಲಿ ಉಲ್ಲೇಖಿಸಬೇಕಾಗಿರುವ ಖೇದದ ವಿಷಯ.

Advertisement

ಸುಪ್ರೀಂ ಕೋರ್ಟ್‌ ಇದೇ ಅಂಶವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ಸ್ವಾಗ ತಾರ್ಹ ಮತ್ತು ಮೌಲ್ಯಯುತವಾದ ತೀರ್ಪನ್ನು ನೀಡಿದೆ. ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಪೀಠವು, “ಇಂತಹ ಪ್ರಕರಣಗಳಲ್ಲಿ ಕಾನೂನು ಕಾಯಿದೆಗಳ ನಿಯಮಾವಳಿಗಳನ್ನು ಕಣ್ಣು ಮುಚ್ಚಿ ಅನುಸರಿಸುವುದಲ್ಲ; ಮಾನವೀಯತೆಯ ಬೆಳಕಿನಲ್ಲಿ ಉದಾರವಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿರುವುದರ ಉದ್ದೇಶ ಮಹತ್ವದ್ದು. ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಈ ತೀರ್ಪು ವೃದ್ಧಾಪ್ಯದಲ್ಲಿ ನೋವು ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ ನೆಮ್ಮದಿ ಉಂಟು ಮಾಡಲಿದೆ. ಮುಪ್ಪಿನಲ್ಲಿ ದಿನಗಳೆಯುತ್ತಿರುವ ತಮ್ಮ ಹೆತ್ತವರತ್ತ ಕುರುಡಾಗಿರುವ ಮಕ್ಕಳಿಗೆ ಈ ತೀರ್ಪು ಒಂದು ಪಾಠವಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next