Advertisement

ಮೂರು ವರ್ಷ ಸೇನೆಯಲ್ಲಿ ಸೇವೆ ; ಅದ್ಭುತ ಪ್ರಸ್ತಾವ

01:23 AM May 17, 2020 | Hari Prasad |

ಸೈನ್ಯ ಶಿಕ್ಷಣ ಮತ್ತು ಮೂರು ವರ್ಷಗಳ ಸೇವೆಯು ನಿಶ್ಚಿತವಾಗಿಯೂ ಉದ್ಯೋಗಾಕಾಂಕ್ಷಿಗಳಿಗೆ ಸಹಾಯಕ್ಕೆ ಬರುತ್ತದಾದರೂ ಅದಕ್ಕಿಂತ ಹೆಚ್ಚಾಗಿ ದೈಹಿಕ ಸದೃಢತೆ, ದೇಶಭಕ್ತಿ, ಶಿಸ್ತು ಮತ್ತು ಜವಾಬ್ದಾರಿಯನ್ನೂ ಯುವಕರಲ್ಲಿ ಹೆಚ್ಚಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ, ಬಹುದೊಡ್ಡ ಪಾತ್ರ ವಹಿಸುತ್ತದೆ.

Advertisement

ಭಾರತೀಯ ಸೇನೆಯ ಎದುರೀಗ ಕುತೂಹಲಕರ ಪ್ರಸ್ತಾಪವೊಂದು ಎದುರಾಗಿದೆ. ದೇಶ ಸೇವೆ ಮಾಡಲು ಉತ್ಸುಕರಾಗಿರುವ ಯುವಕರಿಗೆ ಮೂರು ವರ್ಷಗಳ ಕಾಲ ಟೂರ್‌ ಆಫ್ ಡ್ಯೂಟಿ ಹೆಸರಿನಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿಸುವ ಪ್ರಸ್ತಾಪವಿದು.

ಅನುಮತಿ ದೊರೆತರೆ, ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು, ಅನಂತರ ಇದರಲ್ಲಿ ನೇಮಕವಾಗುವವರ ಸಂಖ್ಯೆಯನ್ನು ವಿಸ್ತರಿಸುವ ಕುರಿತು ಯೋಚಿಸಲಾಗುವುದು ಎಂದು ಸೇನಾಧಿಕಾರಿಗಳು ಹೇಳುತ್ತಿದ್ದಾರೆ.

ನಿಸ್ಸಂಶಯವಾಗಿಯೂ ಈ ರೀತಿಯ ನಡೆಯು ದೇಶಾದ್ಯಂತ ಯುವಕರಲ್ಲಿ ಅತೀವ ಉತ್ಸುಕತೆ ಮತ್ತು ಕುತೂಹಲವನ್ನು ಹೆಚ್ಚಿಸಲಿದೆ.

ಪ್ರಸ್ತಾವನೆಯಲ್ಲಿರುವುದೇನೆಂದರೆ, ಒಮ್ಮೆ ಅರ್ಹತಾ ಮಾನದಂಡವನ್ನು ಪಾಸು ಮಾಡಿದ ನಾಗರಿಕರು ಮೂರು ವರ್ಷಗಳವರೆಗೆ ಸೇನೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದು, ನಂತರ ಅವರು ನಾಗರಿಕ ಜೀವನಕ್ಕೆ ಹಿಂದಿರುಗಿ ಅನ್ಯ ಉದ್ಯೋಗಗಳಿಗೆ ಸೇರಿಕೊಳ್ಳುವುದು.

Advertisement

ಸೈನ್ಯ ಶಿಕ್ಷಣ ಮತ್ತು ಮೂರು ವರ್ಷಗಳ ಸೇವೆಯು ನಿಶ್ಚಿತವಾಗಿಯೂ ಉದ್ಯೋಗಾಕಾಂಕ್ಷಿಗಳಿಗೆ ಸಹಾಯಕ್ಕೆ ಬರುತ್ತದಾದರೂ, ಅದಕ್ಕಿಂತ ಹೆಚ್ಚಾಗಿ ದೈಹಿಕ ಸದೃಢತೆ, ದೇಶಭಕ್ತಿ, ಶಿಸ್ತು ಮತ್ತು ಜವಾಬ್ದಾರಿಯನ್ನೂ ಯುವಕರಲ್ಲಿ ಹೆಚ್ಚಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿ, ಬಹುದೊಡ್ಡ ಪಾತ್ರ ವಹಿಸುತ್ತದೆ.

ಮುಂದೆ ಅವರು ಕೆಲಸ ಮಾಡುವ ವಿಭಿನ್ನ ಕ್ಷೇತ್ರಗಳಲ್ಲೂ ಈ ಶಿಸ್ತಿನ ಪ್ರಭಾವ ಕಾಣಿಸಿಕೊಳ್ಳುತ್ತದೆ. ಇಸ್ರೇಲ್‌ನಂಥ ದೇಶಗಳಲ್ಲೂ ಈ ರೀತಿಯ ನಿಯಮ ಅನೇಕ ವರ್ಷಗಳಿಂದ ಇದೆ. ಆದರೆ, ಸೇನೆಯಲ್ಲಿ ಸೇವೆ ಸಲ್ಲಿಸುವುದು ಅಲ್ಲಿ ಕಡ್ಡಾಯವಾಗಿದ್ದು, ಭಾರತದಲ್ಲಿ ಇದರ ಪ್ರಸಕ್ತ ಸ್ವರೂಪ ಐಚ್ಛಿಕವಾಗಿ ಇದೆ.

ಸೇನೆಯು ಒಂದಂಶವನ್ನಂತೂ ಸ್ಪಷ್ಟಪಡಿಸಿದ್ದು, ಯಾವುದೇ ಸ್ತರದಲ್ಲಿ ನೇಮಕಾತಿಯಿದ್ದರೂ ಅದಕ್ಕೆ ನಿಗದಿಪಡಿಸಲಾಗಿರುವ ಮಾನದಂಡಗಳಲ್ಲಂತೂ ಸಡಿಲತೆ ಇರುವುದಿಲ್ಲ ಎಂದಿದೆ. ಅಲ್ಲದೇ, ಪ್ರಸ್ತಾಪಕ್ಕೆ ಮೊಹರು ಬಿದ್ದರೆ ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಕಡಿಮೆ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.

ಇದು ಸರಿಯಾದ ಯೋಚನೆಯೂ ಹೌದು. ಏಕೆಂದರೆ, ಆರಂಭದಲ್ಲೇ ಹಠಾತ್ತನೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇನೆಗೆ ಬಂದುಬಿಟ್ಟರೆ, ಅಲ್ಲಿನ ಕಾರ್ಯಸಂಸ್ಕೃತಿಗೂ ಸಮಸ್ಯೆ ಎದುರಾಗಬಹುದು.

ಈಗಾಗಲೇ ಈ ವಿಚಾರದ ಬಗ್ಗೆ ಅಪಸ್ವರಗಳೂ ಕೇಳಿಬರಲಾರಂಭಿಸಿರುವುದು ದುರಂತ. ಇದು ಸೇನೆಯ ವೇತನ, ಪೆನ್ಶನ್‌, ಗ್ರಾಚ್ಯುಟಿಯ ಮೇಲಾಗುವ ಖರ್ಚನ್ನು ತಗ್ಗಿಸುವ ಪ್ರಯತ್ನ ಎಂದು ಕೆಲವರು ಆರೋಪಿಸುತ್ತಿದ್ದಾರೆ.

ಆದರೆ, ಈ ಸಂಗತಿಯನ್ನು ಸಂಕುಚಿತ ದೃಷ್ಟಿಕೋನದಿಂದ ನೋಡದೇ, ಇದರಿಂದಾಗಬಲ್ಲ ದೀರ್ಘಾವಧಿ ಉಪಯೋಗಗಳ ಕುರಿತು ನೋಡಬೇಕಾದ ವಿಶಾಲ ದೃಷ್ಟಿಯ ಅಗತ್ಯವಿದೆ. ಹೀಗೆ ಮೂರು ವರ್ಷ ಉದ್ಯೋಗ ಮಾಡಿ ಬಂದ ಜನರಿಗೆ ಸೇನೆಯು ದೇಶಕ್ಕಾಗಿ ಮಾಡುತ್ತಿರುವ ತ್ಯಾಗ – ಬಲಿದಾನಗಳ ಮಹತ್ವ ಅರಿವಾಗುತ್ತದೆ, ಅವರೆದುರಿಸುತ್ತಿರುವ ಸವಾಲುಗಳ ಪರಿಚಯವಾಗುತ್ತದೆ. ಇದಷ್ಟೇ ಅಲ್ಲದೇ, ದೇಶವು ಇತರೆ ರಾಷ್ಟ್ರಗಳಿಂದ ಯಾವುದೇ ರೀತಿಯ ಸಂಕಷ್ಟ ಎದುರಿಸಿದಾಗಲೂ ಜನರೆಲ್ಲ ಒಗ್ಗಟ್ಟಾಗಿ ನಿಲ್ಲಲು ಕಾರಣವಾಗುತ್ತದೆ.

ಇನ್ನು ಪ್ರಾಕೃತಿಕ ಸಂಕಷ್ಟಗಳ ಸಮಯದಲ್ಲೂ ಈ ರೀತಿ ಟೂರ್‌ ಆಫ್ ಡ್ಯೂಟಿ ಮುಗಿಸಿ ಬಂದವರ ಸಹಾಯವನ್ನೂ ಪಡೆಯಬಹುದು. ನಿಸ್ಸಂಶಯವಾಗಿಯೂ ಈ ರೀತಿಯ ಅವಕಾಶವು ಭಾರತೀಯ ಯುವಕರನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢಗೊಳಿಸಿ, ಸ್ವಸ್ಥ ಭಾರತಕ್ಕೆ ನಾಂದಿಯಾಗುವುದರಲ್ಲಿ ಸಂದೇಹವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next