Advertisement
ಈ ಪ್ರಶ್ನೆಗೆ ಸದ್ಯಕ್ಕೆ ಹಲವು ಶಾಲೆಗಳು ಹುಡುಕಿಕೊಂಡಿರುವ ಮಾರ್ಗವೆಂದರೆ ಆನ್‌ಲೈನ್ ತರಗತಿಗಳು.
Related Articles
Advertisement
ನಮ್ಮಲ್ಲೂ ಈಗಾಗಲೇ ಅನೇಕ ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ ಮತ್ತು ಆರಂಭಿಸುವುದಕ್ಕೆ ಸಜ್ಜಾಗುತ್ತಿವೆ. ಇಂಥ ಹೊತ್ತಲ್ಲಿ ಕೇರಳ ಘಟನೆ ನಮಗೆ ನಿಸ್ಸಂಶಯವಾಗಿಯೂ ಎಚ್ಚರಿಕೆಯ ಗಂಟೆಯಾಗಲೇಬೇಕಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಿರುವವರೆಲ್ಲ ಸ್ಥಿತಿವಂತರಾಗಿರುತ್ತಾರೆ ಎಂದೇನೂ ಅಲ್ಲ.
ಅನೇಕರು ಕಷ್ಟಪಟ್ಟು ದಿನರಾತ್ರಿ ದುಡಿದು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುತ್ತಾರೆ. ಈಗ ಲಾಕ್‌ಡೌನ್ ಸಮಯದಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿಯೂ ಪರಿತಪಿಸುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮಕ್ಕಳಿಗೆ ಆನ್‌ಲೈನ್ ತರಗತಿ ಕೊಡಿಸುವುದು ಎಲ್ಲರಿಗೂ ಸಾಧ್ಯವಿಲ್ಲ. ಎಲ್ಲರ ಮನೆಯಲ್ಲೂ ಲ್ಯಾಪ್‌ಟಾಪ್, ವೇಗದ 4ಜಿ ಅಂತರ್ಜಾಲ ಸಂಪರ್ಕವಿರುವ ಸ್ಮಾರ್ಟ್‌ಫೋನ್‌ಗಳು ಇರುತ್ತವೆಯೇ?
ಒಂದು ಸ್ಮಾರ್ಟ್‌ಫೋನ್‌ಗೆ ಏನಿಲ್ಲವೆಂದರೂ 5 ಸಾವಿರಕ್ಕೂ ಅಧಿಕ ಬೆಲೆಯಿರುತ್ತದೆ. ಎರಡು-ಮೂರು ಮಕ್ಕಳಿರುವ ಕುಟುಂಬಗಳು ಏನು ಮಾಡಬೇಕು? ಎಲ್ಲಾ ಮಕ್ಕಳಿಗೂ ಆನ್‌ಲೈನ್ ತರಗತಿಗಳು ಆರಂಭವಾದರೆ ಎಲ್ಲರಿಗೂ ಪ್ರತ್ಯೇಕವಾಗಿ ಸ್ಮಾರ್ಟ್‌ಫೋನ್ ತಂದುಕೊಡಲು, ಅದಕ್ಕೆ ಡೇಟಾ ಪ್ಯಾಕ್ ಹಾಕಿಸಲು ಸಾಧ್ಯವೇನು?
ಇಷ್ಟು ಸಾಲದೆಂಬಂತೆ, ಕೆಲವು ಶಾಲೆಗಳಂತೂ ಎಲ್‌ಕೆಜಿ, ಯುಕೆಜಿಗೆ ಆನ್‌ಲೈನ್ ತರಗತಿ ಆರಂಭಿಸಿ ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಸುದ್ದಿಗಳೂ ಬರುತ್ತಿವೆ. ಈ ಬಗ್ಗೆ ಶಿಕ್ಷಣ ಸಚಿವರೂ ಶಾಲೆಗಳಿಗೆ ಎಚ್ಚರಿಕೆ ನೀಡಿದ್ದಾರಾದರೂ, ಪರಿಸ್ಥಿತಿ ಸುಧಾರಿಸುವ ಲಕ್ಷಣ ಗೋಚರಿಸುತ್ತಿಲ್ಲ.
ಕೆಲವು ಶಾಲೆಗಳಂತೂ ಅವೈಜ್ಞಾನಿಕವಾಗಿ ದಿನವಿಡೀ ತರಗತಿ ನಡೆಸಿ ಮಕ್ಕಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುವಂತೆ ಮಾಡುತ್ತಿವೆ. ಈ ಎಲ್ಲಾ ಸಂಗತಿಗಳನ್ನು ಪರಿಗಣಿಸಿದಾಗ, ಸದ್ಯಕ್ಕೆ ಆನ್‌ಲೈನ್ ತರಗತಿಗಳಿಂದ ಲಾಭಕ್ಕಿಂತ ನಷ್ಟವೇ ಅಧಿಕವಿರುವುದು ಅರ್ಥವಾಗುತ್ತದೆ. ಹೀಗಾಗಿ, ಶಿಕ್ಷಣ ಸಚಿವರು ಯಾವುದೇ ಕಾರಣಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಒಳಗಾಗದೇ, ಮಕ್ಕಳ ಹಿತಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ನೀತಿಗಳನ್ನು ರೂಪಿಸಲಿ.
ಒಂದು ವೇಳೆ ಯಾವುದಾದರೂ ಶಾಲೆ ವಿದ್ಯಾ ರ್ಥಿಗಳು ಹಾಗೂ ಪೋಷಕರ ಮೇಲೆ ಒತ್ತಡ ಹೇರುತ್ತಿರುವುದು ಪತ್ತೆಯಾದರೆ, ತ್ವರಿತವಾಗಿ ಆ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲಿ. ಗೋವಿಂದೇಗೌಡರಂಥ ದೂರದೃಷ್ಟಿಯುಳ್ಳ ಶಿಕ್ಷಣ ಸಚಿವರು ಕುಳಿತ ಜಾಗದಲ್ಲಿ ತಾವು ಕುಳಿತಿದ್ದೇವೆ ಎನ್ನುವುದನ್ನು ಅವರು ಮರೆಯದಿರಲಿ. ಶಿಕ್ಷಣ ಸಂಸ್ಥೆಗಳೂ ಸಹ ತರಾತುರಿಯಲ್ಲಿ ನಿರ್ಧಾರಕ್ಕೆ ಬರಬಾರದು. ವಿದ್ಯಾರ್ಥಿ ಕುಟುಂಬಗಳ ಜತೆ ಮಾತುಕತೆ ನಡೆಸಿ, ಅವರ ಸ್ಥಿತಿಗತಿಯನ್ನು ಪರಿಗಣಿಸಿ ಮುಂದಿನ ನಡೆಯನ್ನು ಇಡುವುದೂ ಅತ್ಯಗತ್ಯ.