ನಿರೀಕ್ಷಿಸಿದಂತೆಯೇ ಕೇಂದ್ರ ಸರಕಾರ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿದೆ. ಕೋವಿಡ್ 19 ವೈರಸ್ ತಡೆಗೆ ಮಾರ್ಚ್ 25ರಿಂದ ಎಪ್ರಿಲ್ 14ರವರೆಗೆ ಜಾರಿಗೆ ತರಲಾಗಿದ್ದ 21 ದಿನಗಳ ಲಾಕ್‌ಡೌನ್ ರೋಗ ಹರಡುವಿಕೆ ಪ್ರಮಾಣವನ್ನು ಬಹುಮಟ್ಟಿಗೆ ತಡೆದಿದೆಯಾದರೂ, ದೇಶ ಈಗಲೂ ಈ ಅಪಾಯದಿಂದ ಪಾರಾಗದ ಕಾರಣ ಮೇ 3ರವರೆಗೆ ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಿರುವ ನಿರ್ಧಾರ ಸೂಕ್ತವಾಗಿದೆ.
ಈಗಾಗಲೇ, ಅನೇಕ ರಾಜ್ಯಗಳು ಲಾಕ್‌ಡೌನ್ ಅವಧಿಯನ್ನು ಈ ತಿಂಗಳ ಅಂತ್ಯದವರೆಗೆ ಮುಂದುವರಿಸಲು ನಿರ್ಧರಿಸಿದ್ದವು. ಮುಖ್ಯಮಂತ್ರಿಗಳು, ತಜ್ಞರೊಂದಿಗಿನ ಚರ್ಚೆಯ ನಂತರ ಕೇಂದ್ರ ಸರಕಾರ ಮೇ 3ರವರೆಗೆ ಮುಂದುವರಿಸಲು ನಿರ್ಧರಿಸಿದೆ.
ಕೋವಿಡ್ 19 ವೈರಸ್ ಸಾಂಕ್ರಾಮಿಕದಿಂದಾಗಿ ಇಂದು ಜಗತ್ತಿನಾದ್ಯಂತ 1 ಲಕ್ಷಕ್ಕೂ ಅಧಿಕ ಜನ ಅಸುನೀಗಿದ್ದಾರೆ, ಸೋಂಕಿತರ ಸಂಖ್ಯೆ 20 ಲಕ್ಷ ಸಮೀಪಿಸುತ್ತಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕ, ಇಟಲಿ, ಫ್ರಾನ್ಸ್, ಸ್ಪೇನ್, ಬ್ರಿಟನ್ ಕೋವಿಡ್ 19 ವೈರಸ್ ನಿಂದಾಗಿ ಹೆಚ್ಚು ಹಾನಿಗೊಳಗಾಗಿವೆ. ಆರೋಗ್ಯ ವ್ಯವಸ್ಥೆಯಷ್ಟೇ ಅಲ್ಲದೆ, ಅಲ್ಲಿನ ಆರ್ಥಿಕ ಸ್ಥಿತಿಗೂ ಬಲವಾದ ಪೆಟ್ಟು ಬಿದ್ದಿದೆ.
ಹಾಗೆ ನೋಡಿದರೆ, ಭಾರತದಂಥ ರಾಷ್ಟ್ರಕ್ಕೆ ಹೋಲಿಸಿದರೆ ಈ ರಾಷ್ಟ್ರಗಳ ಜನಸಂಖ್ಯೆ ತೀರಾ ಕಡಿಮೆಯಿದೆ. ಅಲ್ಲಿನ ಆರೋಗ್ಯ ವ್ಯವಸ್ಥೆಯು ಪ್ರಪಂಚದ ಟಾಪ್ ಟೆನ್ ಆರೋಗ್ಯ ವಲಯಗಳಲ್ಲಿ ಗುರುತಿಸಿಕೊಂಡಿವೆ. ಆದರೆ, ಆರೋಗ್ಯ ವ್ಯವಸ್ಥೆ ಎಷ್ಟೇ ಸುಸ್ಥಿತಿಯಲ್ಲಿದ್ದರೂ, ಹಠಾತ್ತನೆ ಈ ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಅಧಿಕವಾದಾಗ ಅದನ್ನು ತಡೆದುಕೊಳ್ಳುವ, ಸಕ್ಷಮವಾಗಿ ಎದುರಿಸುವ ಸಾಮರ್ಥ್ಯ ಯಾವ ದೇಶಕ್ಕೂ ಇಲ್ಲ ಎನ್ನುವುದು ಇದರಿಂದ ಸಾಬೀತಾಗುತ್ತದೆ. ಹೀಗಾಗಿ, ಸೋಂಕಿಗೆ ಈಡಾಗದಂತೆ ಎಚ್ಚರಿಕೆ ವಹಿಸುವುದೇ ಈಗ ಇರುವ ಪರಿಣಾಮಕಾರಿ ಮಾರ್ಗ. ಅಮೆರಿಕ, ಬ್ರಿಟನ್‌ನಲ್ಲಿ ಇತ್ತೀಚಿನ ಕೆಲ ದಿನಗಳವರೆಗೂ ಲಾಕ್‌ಡೌನ್ ನಿಯಮ ಬಿಗಿಯಾಗಿರಲಿಲ್ಲ ಎನ್ನುವುದು ಗಮನದಲ್ಲಿರಲಿ.
ಇದಕ್ಕೆ ಹೋಲಿಸಿದರೆ, ಭಾರತದಲ್ಲಿ ರೋಗ ಹರಡುವಿಕೆ ತೀವ್ರಗೊಳ್ಳುವ ಮುನ್ನವೇ ಲಾಕ್ ಡೌನ್ ಜಾರಿಗೊಂಡದ್ದು ಒಳ್ಳೆಯ ಸಂಗತಿ. ಆದಾಗ್ಯೂ, ಮಾರ್ಚ್ 25 ಅಲ್ಲ, ಅದಕ್ಕೂ ಬಹುಹಿಂದೆಯೇ ಲಾಕ್‌ಡೌನ್ ಜಾರಿ ಮಾಡಬೇಕಿತ್ತು ಎಂದೂ ವಾದವಿದೆಯಾದರೂ, ಈಗ ಹಿಂದಿರುಗಿ ನೋಡುವುದಕ್ಕಿಂತ ಮುಂದಿನ ದಿನಗಳ ಬಗ್ಗೆ ಯೋಚಿಸುವುದು ಮುಖ್ಯವಾಗುತ್ತದೆ. ಈಗ ಪ್ರಧಾನಿ ಮೋದಿಯವರು ಎಪ್ರಿಲ್ 20ರವರೆಗೆ ಕಠಿನ ಲೌಕ್‌ಡಾನ್ ಜಾರಿಯಲ್ಲಿರಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ, ಕೆಲವೊಂದು ಅವಶ್ಯಕ ಸೇವೆಗಳಿಗೆ ಅನುಮತಿ ನೀಡುವ ಕುರಿತು ಯೋಚಿಸಲಾಗುವುದು ಎಂದಿದ್ದಾರೆ.
ಇದಷ್ಟೇ ಅಲ್ಲದೆ, ದೇಶದಲ್ಲಿ ಅವಶ್ಯಕ ಸಾಮಗ್ರಿಗಳು ಹಾಗೂ ಔಷಧಿಗಳ ದಾಸ್ತಾನು ಸಾಕಷ್ಟಿದೆ ಎಂದೂ ಕೇಂದ್ರ ಸರಕಾರ ದೇಶವಾಸಿಗಳಿಗೆ ಭರವಸೆ ನೀಡಿದೆ. ಲಾಕ್‌ಡೌನ್ ಪಾಲಿಸಲು ದೇಶವಾಸಿಗಳು ಸಿದ್ಧರಿದ್ದಾರೆ, ಆದರೆ ಅವರಿಗೆ ಯಾವುದೇ ಕಾರಣಕ್ಕೂ ಆಹಾರದ ಕೊರತೆ ಉಂಟಾಗದಂತೆ ನೋಡಿಕೊಳ್ಳಲೇಬೇಕಿದೆ.
ಇಂಥ ಸಮಯದಲ್ಲಿ ಅಕ್ರಮ ದಾಸ್ತಾನುಕೋರರ ಹಾವಳಿಯನ್ನು ತಡೆಯುವುದಕ್ಕೆ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ರೋಗದ ಜತೆಗೆ ಹೋರಾಡುತ್ತಲೇ, ಆರ್ಥಿಕತೆಯನ್ನು ಮತ್ತೆ ಹಳಿ ಏರಿಸುವುದು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ – ರಾಜ್ಯ ಸರಕಾರಗಳು ಪರಿಣಾಮಕಾರಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತಾಗಲಿ.