Advertisement
ಈಗಾಗಲೇ ದೇಶದಲ್ಲಿ ಸೋಂಕಿತರ ಸಂಖ್ಯೆ 1.68 ಲಕ್ಷ ದಾಟಿದೆ. ಮುಂದಿನ ತಿಂಗಳುಗಳಲ್ಲಿ ರೋಗ ಉತ್ತುಂಗಕ್ಕೇರಲಿದೆ ಎಂದು ಭಯಾನಕ ಭವಿಷ್ಯ ನುಡಿಯಲಾಗುತ್ತಿದೆ. ಈ ಸಂಗತಿಯು ಆತಂಕ ಹೆಚ್ಚಲು ಕಾರಣವಾಗಿದೆ.
Related Articles
Advertisement
ಹಾಗೆಂದು, ಸಂತ್ರಸ್ತ ರಾಷ್ಟ್ರಗಳ್ಯಾವುವು ಕೈಕಟ್ಟಿ ಕುಳಿತಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಇಂದು ಬಹುತೇಕ ರಾಷ್ಟ್ರಗಳು ಕೋವಿಡ್ ವಿರುದ್ಧ ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ. ಒಂದಕ್ಕೊಂದು ತಮಗಾದ ಮಟ್ಟಿಗೆ ಸಹಾಯ ಮಾಡುತ್ತಿವೆ.
ಗಮನಾರ್ಹ ಸಂಗತಿಯೆಂದರೆ ಭಾರತ ಕೋವಿಡ್ ವಿರುದ್ಧದ ಹೋರಾಟದಲ್ಲಿ ಶ್ಲಾಘನೀಯ ಹೆಜ್ಜೆಯನ್ನೇ ಇಡುತ್ತಿದೆ. ಕಡಿಮೆ ಜನಸಂಖ್ಯೆಯಿರುವ ಸಿರಿವಂತ ದೇಶಗಳು ನಿಷ್ಕಾಳಜಿ ಮಾಡಿದ ವೇಳೆಯಲ್ಲೇ ಭಾರತದಂಥ 137 ಕೋಟಿ ಜನಸಂಖ್ಯೆಯ ರಾಷ್ಟ್ರದಲ್ಲಿ ಸರಕಾರ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಮಾಡಿತು.
ನಮ್ಮಲ್ಲಿನ ಅಪಾರ ಜನಸಂಖ್ಯೆ, ದುರ್ಬಲ ಆರೋಗ್ಯ ವ್ಯವಸ್ಥೆಯನ್ನು ಪರಿಗಣಿಸಿದರೆ, ಲಾಕ್‌ಡೌನ್ ಜಾರಿಗೊಳಿಸದೇ ಅನ್ಯ ದಾರಿ ಇರಲಿಲ್ಲ. ಇದರಿಂದಾಗಿ ದೇಶವಾಸಿಗಳು, ಅದರಲ್ಲೂ ಅನ್ಯ ರಾಜ್ಯಗಳಲ್ಲಿ, ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು, ಬಡವರು ಪಟ್ಟ ಪಡಿಪಾಟಲು ಕಡಿಮೆಯೇನಿಲ್ಲ. ಆದರೂ ಮೇ ತಿಂಗಳ ಆರಂಭದಿಂದ ಅನ್ಯ ರಾಜ್ಯಗಳಲ್ಲಿ ಸಿಲುಕಿದವರನ್ನು ಅವರವರ ಊರುಗಳಿಗೆ ತಲುಪಿಸಲಾಗುತ್ತಿರುವುದು ಒಳ್ಳೆಯ ನಡೆ.
ಆದರೆ ಸವಾಲು ಇನ್ನೂ ಇದೆ. ಕೋವಿಡ್ ನಿಂದಾಗಿ ದುರ್ಬಲವಾಗಿರುವ ಆರ್ಥಿಕತೆಗೆ ವೇಗ ಕೊಡುವುದು ಈಗ ಅನಿವಾರ್ಯವಾಗಿದ್ದು, ಜನರ ಆರೋಗ್ಯವನ್ನು ಕಾಪಾಡುತ್ತಲೇ, ದೇಶದ ಆರ್ಥಿಕ ಸ್ವಾಸ್ಥ್ಯವನ್ನು ಸುಧಾರಿಸುವ ಸವಾಲು ರಾಜ್ಯಗಳು ಹಾಗೂ ಕೇಂದ್ರ ಸರಕಾರದ ಎದುರಿದೆ.
ಈಗಾಗಲೇ ಈ ನಿಟ್ಟಿನಲ್ಲಿ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ದೇಶವನ್ನು ಸ್ವಾಭಿಮಾನ ರಾಷ್ಟ್ರವಾಗಿ ಕಟ್ಟಲು ದೇಶವಾಸಿಗಳಲ್ಲಿ ಪ್ರಧಾನಿ ಮೋದಿಯವರು ಮನವಿ ಮಾಡಿದ್ದಾರೆ. ಈ ‘ಆತ್ಮನಿರ್ಭರ’ ಹೋರಾಟದಲ್ಲಿ ಶೀಘ್ರವೇ ಗೆಲುವು ಸಿಗಲಿ.