Advertisement
ಪುರಸಭಾಧ್ಯಕ್ಷೆ ಹರ್ಷಲತಾ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಮಯದಲ್ಲಿ ನೆರೆದಿದ್ದ ಭಕ್ತರು ಜೈಕಾರ ಕೂಗಿ ರಥವನ್ನು ಭಕ್ತಿಯಿಂದ ಎಳೆದರು. ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ, ರುದ್ರಾಭಿಷೇಕ, ಸೂರ್ಯಮಂಡಲೋತ್ಸವ, ಅರ್ಕಮುಡಿ ಮುಕುಟಧಾರಣೆ ಮತ್ತಿತರ ಪೂಜಾ ಕೈಂಕಾರ್ಯ ನೆರವೇರಿಸಲಾಯಿತು. ನಂತರ ಉತ್ಸವ ಮೂರ್ತಿಗಳನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯ, ಅರ್ಚಕರಿಂದ ವೇದಘೋಷ ಹಾಗೂ ಭಕ್ತರ ಹರ್ಷೋದ್ಘಾರಗಳೊಂದಿಗೆ ರಥೋತ್ಸವವನ್ನು ನಡೆಸಲಾಯಿತು.
Related Articles
Advertisement
ಕಳೆದ ಸಾಲಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜಾತ್ರೆಗೆ ಭಕ್ತರು ಆಗಮಿಸಿದ್ದರು. ಭಕ್ತರಿಂದ ತುಂಬಿ ತುಳುಕುತ್ತಿದ್ದ ಜಾತ್ರೆಯಲ್ಲಿ ಭರ್ಜರಿ ವ್ಯಾಪಾರ ವ್ಯವಹಾರ ನಡೆಯಿತಲ್ಲದೇ ಸಂಪ್ರದಾಯದಂತೆ ನವ ದಂಪತಿಗಳು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಮೆರೆದರು.
ಜಾತ್ರೆಯ ಪ್ರಯುಕ್ತ ಕಳೆದ ಮೂರು ದಿನಗಳಿಂದ ದೇವಾಲಯದ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎಡತೊರೆ ಉತ್ಸವವನ್ನು ನಡೆಸಿ ಕೊಡಲಾಯಿತು. ಇದರಲ್ಲಿ ಹಲವಾರು ಮಂದಿ ಚಲನಚಿತ್ರ ನಟ ನಟಿಯರು, ಪ್ರಸಿದ್ಧ ಗಾಯಕರು ಹಾಗೂ ನೃತ್ಯ ಶಾಲೆಗಳಿಂದ ಆಗಮಿಸಿದ್ದ ಹತ್ತಾರು ಮಂದಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ತಾಲೂಕಿನ ನಾನಾ ಗ್ರಾಮಗಳಿಂದ ಸಾವಿರಾರು ಮಂದಿ ಉತ್ಸವದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು.
ರಾಸುಗಳ ಜಾತ್ರೆ: ಹಳೆಎಡತೊರೆಯ ಮೀನಾಕ್ಷಿಸಮೇತ ಅರ್ಕೇಶ್ವರಸ್ವಾಮಿ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ದನಗಳ ಜಾತ್ರೆಗೆ ತಾಲೂಕಿನ ವಿವಿಧ ಗ್ರಾಮಗಳ ರೈತರು ತಮ್ಮ ರಾಸುಗಳನ್ನು ಜಾತ್ರೆಯ ಆವರಣದಲ್ಲಿ ಕಟ್ಟಿದ್ದರು. ಕೊನೆಯ ದಿನ ಪುರಸಭೆ ವತಿಯಿಂದ ಉತ್ತಮ ರಾಸುಗಳಿಗೆ ಬಹುಮಾನ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ.
ಈ ಜಾತ್ರೆಯ ಮಾಳದಲ್ಲಿ ಹತ್ತಾರು ಜೋಡಿ ರಾಸುಗಳನ್ನು ರೈತರು ಕಟ್ಟಿ ಪ್ರದರ್ಶಿಸಿದರು. ಜಾತ್ರೆಗೆ ಅಗತ್ಯವಾದ ಕುಡಿಯುವ ನೀರು, ವಿದ್ಯುದ್ದೀಪ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಪುರಸಭಾ ಆಡಳಿತದ ವತಿಯಿಂದ ಒದಗಿಸಲಾಗಿತ್ತು.