ಬೆಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಗೃಹ ಸಚಿವ, ಸಿಪಿಐ(ಎಂ) ನಾಯಕ ಕೊಡಿಯೇರಿ ಬಾಲಕೃಷ್ಣನ್ ಪುತ್ರ ಬಿನೀಶ್ ಕೊಡಿಯೇರಿ ಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಡ್ರಗ್ಸ್ ವಶಕ್ಕೆ ಪಡೆದ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಬಿನೀಶ್ ಕೊಡಿಯೇರಿಗೆ ಈ ಹಿಂದೆ ನೊಟೀಸ್ ಜಾರಿಗೊಳಿಸಲಾಗಿತ್ತು.
ಡ್ರಗ್ಸ್ ಹೊಂದಿರುವ ಆರೋಪದಡಿ ಅಂಕಿತ ಡಿ, ರವೀಂದ್ರನ್ ಹಾಗೂ ಮೊಹಮ್ಮದ್ ಅನೂಪ್ ಅವರನ್ನು ಎನ್ ಸಿಬಿ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಿಂದ ಬಂಧಿಸಿತ್ತು. ನಂತರ ಡ್ರಗ್ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಹಲವಾರು ಪ್ರತಿಷ್ಟಿತರನ್ನು ವಿಚಾರಣೆ ಮಾಡಿದೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿದ್ದರೆ ಸಂಭಾವಿತ, ಪಾರ್ಟಿ ಬಿಟ್ರೆ ಕ್ರಿಮಿನಲ್ ಆಗ್ತಾರಾ? ಸಿ.ಟಿ.ರವಿ ಕಿಡಿ
ಕೇರಳ ಸಿಪಿಐ(ಎಂ) ನಾಯಕನ ಪುತ್ರ ಬಿನೀಶ್ ಕೊಡಿಯೇರಿಗೆ ಮೊಹಮ್ಮದ್ ಅನೂಪ್ ಜೊತೆ ನಂಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸೆ.09 ರಂದೂ ಸಹ ಇಡಿ ಬಿನೀಶ್ ನ ವಿಚಾರಣೆ ನಡೆಸಿತ್ತು. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಹ ಬಿನೀಶ್ ಕೊಡಿಯೇರಿಗೆ ಡ್ರಗ್ಸ್ ಜಾಲದ ಸಂಪರ್ಕವಿದೆ ಎಂದು ಆರೋಪಿಸಿದೆ.