ಬೆಳಗಾವಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜಾರಿ ನಿರ್ದೇಶನಾಲಯದಿಂದ ಸೆ.19ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಇ.ಡಿ ಸಮನ್ಸ್ ವಿಷಯವನ್ನು ಸ್ವತಃ ಶಾಸಕಿ ಹೆಬ್ಬಾಳ್ಕರ್ ಖಚಿತ ಪಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಮತ್ತೂಂದು ಕುತೂಹಲ ಮೂಡಿಸಿದೆ. ಸೆ.14ರಂದು ವಿಚಾರಣೆಗೆ ಬರುವಂತೆ ಇಡಿ ನೋಟಿಸ್ ಕಳಿಸಿತ್ತು. ಆಗ ವಿಚಾರಣೆಗೆ ಬರಲು ಆಗುವುದಿಲ್ಲ. ಮುಂದಿನ ದಿನಾಂಕ ನೀಡುವಂತೆ ಹೆಬ್ಬಾಳಕರ ಕೋರಿದ್ದರು. ಅದರಂತೆ ಈಗ ಸೆ.19ರಂದು ವಿಚಾರಣೆಗೆ ಬರುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳಿಸಿದೆ.
ಅಕ್ರಮ ಆಸ್ತಿ ಸಂಪಾದನೆ ವಿಚಾರವಾಗಿ ಇ.ಡಿ ಕಸ್ಟಡಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಈಗ 11 ಜನರನ್ನು ಗುರುತಿಸಿದ್ದು, ಅದರಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಒಬ್ಬರು ಎನ್ನಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಡಿ.ಕೆ.ಶಿವಕುಮಾರ್ ಅವರು ಇ.ಡಿ ವಿಚಾರಣೆಗೆ ಹಾಜರಾಗುವ ಮುನ್ನ ಕೊನೆಯ ದೂರವಾಣಿ ಕರೆ ಮಾಡಿದ್ದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಎಂಬುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದೇ ಕಾರಣದಿಂದ ಈಗ ಹೆಬ್ಬಾಳ್ಕರ್ ಅವರಿಗೆ ಇ.ಡಿ ನೋಟಿಸ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ, 2017ರ ಜನವರಿಯಲ್ಲಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯಾದಾಗ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನೆ ಮೇಲೂ ಐಟಿ ದಾಳಿ ನಡೆದಿತ್ತು.
ನನಗೆ ಇ.ಡಿಯಿಂದ ಸಮನ್ಸ್ ಬಂದಿದ್ದು ಬೆಂಗಳೂರು ಮೂಲಕ ಬುಧವಾರ ದೆಹಲಿಗೆ ಹೊರಟಿದ್ದೇನೆ. ಸೆ.19ರಂದು ವಿಚಾರಣೆಗೆ ಹಾಜರಾಗುತ್ತಿದ್ದು ಈ ವೇಳೆ ಅಧಿಕಾರಿಗಳಿಗೆ ವಿಚಾರಣೆ ನಡೆಸಲು ಸಹಕರಿಸುತ್ತೇನೆ.
-ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಶಾಸಕಿ