Advertisement

ಡಿಕೆಶಿ ವಿರುದ್ಧದ ಇಸಿಐಆರ್‌ ಕೋರ್ಟ್‌ಗೆ ಸಲ್ಲಿಸಿದ ಇಡಿ

02:28 AM Mar 15, 2019 | |

 ಬೆಂಗಳೂರು: ಐಟಿ ದಾಳಿಗೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್‌ ಮತ್ತವರ ಆಪ್ತ ಸಚಿನ್‌ ನಾರಾಯಣ್‌ ಮತ್ತಿತರರ ವಿರುದ್ಧ ದಾಖಲಿಸಿಕೊಂಡಿರುವ “ಜಾರಿ ಪ್ರಕರಣ ಮಾಹಿತಿ ವರದಿ’ಯ (ಇಸಿಐಆರ್‌) ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಗುರುವಾರ ಹೈಕೋರ್ಟ್‌ಗೆ ಸಲ್ಲಿಸಿದೆ.

Advertisement

ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್‌ ಪ್ರಶ್ನಿಸಿ ಡಿ.ಕೆ. ಶಿವಕುಮಾರ್‌ ಮತ್ತು ಇತರರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ನ್ಯಾ| ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಜಾರಿ ನಿರ್ದೇಶನಾಲಯದ ಪರ ವಕೀಲರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಮುಚ್ಚಿದ ಲಕೋಟೆಯಲ್ಲಿ ಇಸಿಐಆರ್‌ ಸಲ್ಲಿಸಿದರು. ಆಗ ಲಕೋಟೆ ತೆರದು ಇಸಿಐಆರ್‌ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಬಳಿಕ‌ ಅದನ್ನು ವಾಪಸ್‌ ನೀಡಿದರು. ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿ ಆ ವರದಿಯನ್ನು ಕೇಳುತ್ತೇನೆ ಎಂದು ಹೇಳಿದರು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ ವಿಚಾರಣೆಯನ್ನು ಮಾ. 18ಕ್ಕೆ ಮುಂದೂಡಿತು.

ಇದೇ ವೇಳೆ ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌, ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಿಂದ ಇನ್ನೂ ತನಿಖೆ ಬಾಕಿ ಇದೆ. ಈಗ ಆರೋಪಿಗಳಿಂದ ಯಾವುದೇ ದಾಖಲೆಗಳನ್ನು ಕೇಳಿಲ್ಲ. ಕೇವಲ ಅವರಿಗೆ ಹಾಜರಾಗಲು ಸೂಚಿಸಲಾಗಿದೆ. ಮೇಲ್ನೋಟಕ್ಕೆ ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ. ತನಿಖೆ ನಡೆದರೆ ಬೇರೆ ಅಂಶಗಳು ಲಭ್ಯವಾಗಬಹುದು. ಮೇಲಾಗಿ ಅರ್ಜಿದಾರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೂ ಅವರು ಸಮನ್ಸ್‌ ರದ್ದು ಕೋರಿರುವುದು ನ್ಯಾಯಸಮ್ಮತವಲ್ಲ ಮತ್ತು ಈ ಹಂತದಲ್ಲಿ ಇದೊಂದು ಅಪಕ್ವ ವಾದವಾಗಿದೆ. ಆದ್ದರಿಂದ ಅರ್ಜಿದಾರರ ಮನವಿಯನ್ನು ಪುರಸ್ಕರಿಸಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next