ಬೆಂಗಳೂರು: ಮಾಜಿ ಸಚಿವ, ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿರುವ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
ಜಮೀರ್ ಅಹಮದ್ ಖಾನ್ ಅವರ ವಸಂತನಗರದ ಜಮೀರ್ ನಿವಾಸ, ಬಂಬೂ ಬಜಾರ್ ನ ಮನೆ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಸದಾಶಿವನಗರದ ಆಪ್ತನ ನಿವಾಸ ಹಾಗೂ ಜಮೀರ್ ಪಿ.ಎ ಮನೆ ಸೇರಿ 6 ಕಡೆ ದಾಳಿ ನಡೆದಿದೆ. ಬೆಳಗ್ಗೆ ಸುಮಾರು 5.45ಕ್ಕೆ ಏಕಕಾಲಕ್ಕೆ ಜಮೀರ್ ಅಹಮದ್ ಗೆ ಸೇರಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:17 ವರ್ಷ ಬಳಿಕ ಜಾರಕಿಹೊಳಿ ಕುಟುಂಬಕ್ಕಿಲ್ಲ ಸಚಿವ ಸ್ಥಾನ
ಜಮೀರ್ ಅಹಮದ್ ಖಾನ್ ಇತ್ತೀಚೆಗೆ ಖರೀದಿಸಿದ ಆಸ್ತಿಯ ಮೌಲ್ಯದ ತಪ್ಪು ಲೆಕ್ಕ ನೀಡಿದ್ದಾರೆ ಎನ್ನಲಾಗಿದೆ. ಕೋಟ್ಯಾಂತರ ರೂ. ಹಣ ಖರ್ಚು ಮಾಡಿ ಪುತ್ರಿಯ ವಿವಾಹ ನಡೆಸಿದ್ದರು. ಜಮೀರ್ ಅಹಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಹೊಂದಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ರೋಷನ್ ಬೇಗ್ ಮನೆ ಮೇಲೂ ದಾಳಿ: ಇದೇ ವೇಳೆ ಮಾಜಿ ಸಚಿವ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಶಿವಾಜಿ ನಗರದಲ್ಲಿರುವ ರೋಷನ್ ಬೇಗ್ ಮನೆಯ ಮೇಲೆ ದಾಳಿ ನಡೆದಿದೆ. ಐಎಂಎ ಜುವೆಲ್ಲರಿ ಹಗರಣದ ಕುರಿತಾಗಿ ಈ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ.