Advertisement

ಚಂ”ಧನ”ಮೇಲೆ ಇನ್ನು ಇ.ಡಿ. ತನಿಖೆ?

03:15 AM Jan 07, 2019 | Harsha Rao |

ಬೆಂಗಳೂರು: ಕನ್ನಡ ಚಲನಚಿತ್ರರಂಗದಲ್ಲಿ ಅನಧಿಕೃತ ಹಣಕಾಸು ವ್ಯವಹಾರ ನಡೆಯುತ್ತಿದ್ದ ಗುಮಾನಿ ಮೇಲೆ ಏಕಕಾಲದಲ್ಲಿ ಸ್ಯಾಂಡಲ್‌ವುಡ್‌ ನಟರು ಮತ್ತು ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಒಟ್ಟಾರೆಯಾಗಿ 109 ಕೋಟಿ ರೂ. ದಾಖಲೆ ರಹಿತ ಆದಾಯ ಪತ್ತೆ ಮಾಡಿದೆ. ಜತೆಗೆ 11 ಕೋಟಿ ರೂ. ಮೌಲ್ಯದ ಅಘೋಷಿತ ಅಸ್ತಿ ಜಪ್ತಿ ಮಾಡಿಕೊಂಡಿದೆ.

Advertisement

ಕಲಾವಿದರು ಮತ್ತು ನಿರ್ಮಾಪಕರ ಬಳಿ ಪತ್ತೆಯಾದ ಕೋಟ್ಯಂತರ ರೂ. ಮೌಲ್ಯದ ದಾಖಲೆಯಿಲ್ಲದ ಹಾಗೂ ಚಿತ್ರಮಂದಿರಗಳಲ್ಲಿ ಸಂಗ್ರಹವಾದ ಹಣವನ್ನು ಬೇರೆಡೆ ವರ್ಗಾಯಿಸಿರುವುದಕ್ಕೆ ಕೆಲವು ಸಾಕ್ಷ್ಯಾಧಾರಗಳು ಸಿಕ್ಕಿವೆ. ಈ ಮಾಹಿತಿಯನ್ನು ಸಂಬಂಧಿಸಿದ ಕಂದಾಯ ಮತ್ತು ಇತರ ಆರ್ಥಿಕ ತನಿಖಾ ಸಂಸ್ಥೆಗಳ ಜತೆ ಹಂಚಿಕೊಳ್ಳಲಾಗುವುದು. 

ತೆರಿಗೆ ವಂಚಿಸಿರುವ ನಟ, ನಿರ್ಮಾಪಕರನ್ನು ಶೀಘ್ರ ವಿಚಾರಣೆಗೆ ಒಳಪಡಿಸಲಾಗುವುದು. ತೆರಿಗೆ ಬಾಕಿ ಇರಿಸಿರುವ ನಟ, ನಿರ್ಮಾಪಕರು ಕೂಡಲೇ ಪಾವತಿಸಲು ಸೂಚಿಸಲಾಗುವುದು ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಆದಾಯ ತೆರಿಗೆ ಇಲಾಖೆ, ಡಿಆರ್‌ಐ (ಕಂದಾಯ ಜಾರಿ ನಿರ್ದೇಶನಾಲಯ) ಅಥವಾ ಇ.ಡಿ. (ಜಾರಿ ನಿರ್ದೇಶನಾಲಯ) ಜತೆ ಮಾಹಿತಿ ವಿನಿಮಯ ಮಾಡಿ ಕೊಳ್ಳಲಿದೆ. ಇದು ಸ್ಯಾಂಡಲ್‌ವುಡ್‌ನ‌ ನಟ, ನಿರ್ಮಾಪಕರ ಪಾಲಿಗೆ ಇನ್ನಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜ.3ರಂದು ಬೆಳಗ್ಗೆ 6 ಗಂಟೆಯಿಂದ ಜ.5ರ ಸಂಜೆ ವರೆಗೆ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌, ಯಶ್‌ ಹಾಗೂ ರಾಧಿಕಾ ಪಂಡಿತ್‌ ಮನೆ, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌, ವಿಜಯ್‌ ಕಿರಗಂದೂರು ಹಾಗೂ ಜಯಣ್ಣ ಮನೆ, ವಿಧಾನಪರಿಷತ್‌ ಸದಸ್ಯ, ನಿರ್ಮಾಪಕ ಸಿ.ಆರ್‌. ಮನೋಹರ್‌ ಮನೆ ಮತ್ತು ಕಚೇರಿಗಳ ಮೇಲೆ ಕರ್ನಾಟಕ, ಗೋವಾ ವಿಭಾಗಗಳ 180 ಮಂದಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದರು.

Advertisement

ಆ ವೇಳೆ ನಟರು, ನಿರ್ಮಾಪಕರಿಗೆ ಸೇರಿದ 11 ಕೋಟಿ ರೂ. ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ಈ ಪೈಕಿ 2.85 ಕೋಟಿ ರೂ. ನಗದು ಮತ್ತು 25.3 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದೆ. ಅಲ್ಲದೆ, ನಿಗದಿತ ಸಮಯದಲ್ಲಿ ಆದಾಯ ತೆರಿಗೆ ಕಟ್ಟದೆ ಒಟ್ಟಾರೆ 109 ಕೋಟಿ ರೂ. ದಾಖಲೆರಹಿತ ಆದಾಯ ಹೊಂದಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಪ್ರಮಾಣದಲ್ಲಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿವೆ ಎಂಬುದನ್ನು ಐಟಿ ಉಲ್ಲೇಖೀಸಿಲ್ಲ.

ಐಟಿ ಇಲಾಖೆ ಮನವಿ
ಕನ್ನಡ ಚಿತ್ರರಂಗ ಮತ್ತು ಮನೋರಂಜನ ಕ್ಷೇತ್ರದ ಎಲ್ಲ ವ್ಯವಹಾರಗಳನ್ನು ದಾಖಲೆಗಳಲ್ಲಿ ನಮೂದಿಸಬೇಕು. ಜತೆಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಕೂಡಲೇ ಪಾವತಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next