ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ವಿವೋ ಇಂಡಿಯಾ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿಯನ್ನು ಕೋರ್ಟ್ ಗೆ ಸಲ್ಲಿಸಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:Bengaluru: ಗ್ಯಾಸ್ ಕಟ್ಟರ್ ಬಳಸಿ ಎಟಿಎಂಗೆ ಕನ್ನ: ಲಕ್ಷಾಂತರ ರೂ. ನೋಟುಗಳು ಭಸ್ಮ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ವಯ ತನಿಖೆ ನಡೆಸಿದ್ದು, ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್ ಗೆ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವೋ ಇಂಡಿಯಾ ಹಾಗೂ ಇತರರ ಹೆಸರನ್ನು ಆರೋಪಿಗಳನ್ನಾಗಿ ಹೆಸರಿಸಿರುವುದಾಗಿ ಮೂಲಗಳು ಪಿಟಿಐಗೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಲವ ಇಂಟರ್ ನ್ಯಾಶನಲ್ ಮೊಬೈಲ್ ಕಂಪನಿಯ ಆಡಳಿತ ನಿರ್ದೇಶಕ ಹರಿ ಓಂ ರಾಯ್ ಸೇರಿದಂತೆ ನಾಲ್ವರನ್ನು ಬಂಧಿಸಿತ್ತು. ಅಲ್ಲದೇ ಚೀನಾ ಪ್ರಜೆ ಗುವಾಂಗ್ ವೆನ್ ಅಲಿಯಾಸ್ ಆಂಡ್ರ್ಯೂ ಕುವಾಂಗ್, ಚಾರ್ಟೆಡ್ ಅಕೌಂಟೆಂಟ್ಸ್ ನಿತಿನ್ ಗರ್ಗ್ ಮತ್ತು ರಾಜನ್ ಮಲಿಕ್ ನನ್ನು ಇ.ಡಿ. ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು.
ವಿವೋ ಇಂಡಿಯಾ ಮೊಬೈಲ್ ಕಂಪನಿಯ ಈ ನಾಲ್ವರು ಭಾರತದಲ್ಲಿ ಕಾನೂನು ಬಾಹಿರವಾಗಿ ಹಣಗಳಿಕೆಯಲ್ಲಿ ತೊಡಗಿದ್ದು, ಇದು ಭಾರತದ ಆರ್ಥಿಕತೆಯ ಸಾರ್ವಭೌಮತ್ವಕ್ಕೆ ಧಕ್ಕೆ ತರಲಿದೆ ಎಂದು ಜಾರಿ ನಿರ್ದೇಶನಾಲಯ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.
ಕಳೆದ ವರ್ಷ ಜೂನ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ವಿವೋ ಇಂಡಿಯಾ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಚೀನಾ ಪ್ರಜೆಗಳು ಹಲವಾರು ಭಾರತೀಯ ಕಂಪನಿಯ ಹೆಸರಿನಲ್ಲಿ ಹಣಕಾಸು ವರ್ಗಾವಣೆಯಲ್ಲಿ ತೊಡಗಿಕೊಂಡಿರುವುದು ಪತ್ತೆಯಾಗಿತ್ತು. ಈ ನಕಲಿ ಕಂಪನಿಗಳ ಮೂಲಕ ವಿವೋ ಇಂಡಿಯಾ ಬರೋಬ್ಬರಿ 62,476 ಕೋಟಿ ರೂಪಾಯಿಯಷ್ಟು ಹಣವನ್ನು ಕಾನೂನು ಬಾಹಿರವಾಗಿ ಚೀನಾಕ್ಕೆ ವರ್ಗಾವಣೆ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.