ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಬಂಧಿಸಿದೆ.
ಭೂಪಿಂದರ್ ಸಿಂಗ್ ಹನಿ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಮಾಹಿತಿಯ ಪ್ರಕಾರ, ಮೊಹಾಲಿಯಲ್ಲಿರುವ ಹಿಮ್‌ಲ್ಯಾಂಡ್ ಸೊಸೈಟಿಯಲ್ಲಿರುವ ತನ್ನ ಐಷಾರಾಮಿ ಫ್ಲ್ಯಾಟ್‌ನಿಂದ ಹನಿ ಅವರನ್ನು ಕರೆದೊಯ್ದು ಇಡಿ ಅಧಿಕಾರಿಗಳು, ಜಲಂಧರ್ ಸಿವಿಲ್ ಆಸ್ಪತ್ರೆಯಲ್ಲಿ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಅವರನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲು ಇಂದು ಮೊಹಾಲಿಗೆ ಕರೆತರಲಾಗುವುದು.
ಇದನ್ನೂ ಓದಿ:ಕೋವಿಡ್ ಬಳಿಕ ಹಲವರ ಪದವಿ ಶಿಕ್ಷಣ ಮೊಟಕು : ಕಾಲೇಜುಗಳಲ್ಲೂ ಡ್ರಾಪ್‌ಔಟ್!
ಕಳೆದ ವಾರ ರೂ.8 ಕೋಟಿ ನಗದು, ರೂ.21 ಲಕ್ಷ ಮೌಲ್ಯದ ಚಿನ್ನ ಮತ್ತು ರೂ.12 ಲಕ್ಷ ಬೆಲೆಬಾಳುವ ವಾಚ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡ ಇಡಿ ಮುಂದೆ ಹಾಜರಾಗುವಂತೆ ಅವರಿಗೆ ಸಮನ್ಸ್ ಕಳುಹಿಸಲಾಗಿದೆ. ಆದರೆ ಹನಿ ಹಾಜರಾಗಿರಲಿಲ್ಲ.
ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ನಡೆಸುತ್ತಿರುವ ಎರಡು ದಿನಗಳ ಮೊದಲು ಹನಿ ಬಂಧನವಾಗಿದೆ.